ಭಾನುವಾರ, ಫೆಬ್ರವರಿ 28, 2021
31 °C
ಎನ್‌ಸಿಬಿ ಅಧಿಕಾರಿಗಳ ಕಾರ್ಯಾಚರಣೆ; ಇಬ್ಬರ ಬಂಧನ

ಪಾತ್ರೆಗಳಲ್ಲಿ ₹ 20 ಕೋಟಿ ಮೌಲ್ಯದ ಡ್ರಗ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ₹ 20 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ್ದಾರೆ.

ಅಡುಗೆಗೆ ಬಳಸುವ ಪಾತ್ರೆಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಿಸುತ್ತಿದ್ದ ಜಾಲವನ್ನು ಎನ್‌ಸಿಬಿಯ ಬೆಂಗಳೂರು ಹಾಗೂ ಹೈದರಾಬಾದ್ ವಲಯದ ಅಧಿಕಾರಿಗಳು ಭೇದಿಸಿದ್ದಾರೆ. ಇಬ್ಬರು ಆರೋಪಿಗಳನ್ನು ತಮಿಳುನಾಡಿನಲ್ಲಿ ಸೆರೆಹಿಡಿದಿದ್ದಾರೆ.

‘ತಮಿಳುನಾಡಿನ ನಿವಾಸಿಗಳಾದ ಎಂ. ಮೈದೀನ್ ಹಾಗೂ ಕೆ. ಮೇರನ್ ಬಂಧಿತರು. ಪ್ರಕರಣದಲ್ಲಿ ಒಟ್ಟು ₹ 20 ಕೋಟಿ ಮೌಲ್ಯದ 49.35 ಕೆ.ಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಎನ್‌ಸಿಬಿ ಬೆಂಗಳೂರು ವಲಯದ ನಿರ್ದೇಶಕ ಅಮಿತ್ ಗಾವಟೆ ತಿಳಿಸಿದರು.

‘ಅಡುಗೆ ಪಾತ್ರೆಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಿಸುತ್ತಿದ್ದ ಮಾಹಿತಿ ಬಂದಿತ್ತು. ಹೈದರಾಬಾದ್‌ ಅಧಿಕಾರಿಗಳು, ಕೋರಿಯರ್ ಕೇಂದ್ರವೊಂದರ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಅಲ್ಲಿ ಅಡುಗೆ ಪಾತ್ರೆಗಳಲ್ಲಿ ಬಚ್ಚಿಟ್ಟಿದ್ದ 4.35 ಕೆ.ಜಿ ಡ್ರಗ್ಸ್ ಪತ್ತೆಯಾಗಿತ್ತು. ಬಳಿಕ ಜಂಟಿ ಕಾರ್ಯಾಚರಣೆ ಆರಂಭಿಸಲಾಗಿತ್ತು.’

‘ಕೋರಿಯರ್‌ಗೆ ಸಂಬಂಧಪಟ್ಟ ಮಾಹಿತಿ ಕಲೆಹಾಕಿ ತನಿಖೆ ಮುಂದುವರಿಸಿದಾಗ ಇಬ್ಬರು ಆರೋಪಿಗಳು, ತಮಿಳುನಾಡಿನ ಚೆಂಗಲಪಟ್ಟುವಿನಲ್ಲಿ ಸಿಕ್ಕಿಬಿದ್ದರು. ಅವರ ಬಳಿ 45 ಕೆ.ಜಿ ಎಪಿಡ್ರೈನ್ ಡ್ರಗ್ಸ್ ಪತ್ತೆಯಾಯಿತು’ ಎಂದೂ ಹೇಳಿದರು.

‘ವ್ಯವಸ್ಥಿತವಾಗಿ ಕೃತ್ಯ ಎಸಗುತ್ತಿದ್ದ ಆರೋಪಿಗಳು, ಡ್ರಗ್ಸ್ ಇರುತ್ತಿದ್ದ ಅಡುಗೆ ಪಾತ್ರೆಗಳನ್ನೇ ವಿದೇಶಗಳಿಗೆ ಕೋರಿಯರ್ ಮೂಲಕ ಸಾಗಣೆ ಮಾಡುತ್ತಿದ್ದರು. ಈ ಜಾಲದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ಅಮಿತ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.