ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್; ಮಹಿಳಾ ಉದ್ಯಮಿ, ವೈದ್ಯ ಬಂಧನ

Last Updated 31 ಆಗಸ್ಟ್ 2021, 16:52 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಮಹಿಳಾ ಉದ್ಯಮಿ ಸೋನಿಯಾ ಅಗರವಾಲ್ ಹಾಗೂ ಎಂಬಿಬಿಎಸ್ ವೈದ್ಯ ಡಾ. ದಿಲೀಪ್ ಎಂಬುವರನ್ನು ಗೋವಿಂದಪುರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ನೈಜೀರಿಯಾದ ಥಾಮಸ್ ಕಲ್ಲು ಎಂಬಾತನನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು. ಆತ ಹಾಗೂ ಇತರೆ ಪೆಡ್ಲರ್‌ಗಳ ಬಳಿ ಆರೋಪಿಗಳಾದ ಸೋನಿಯಾ ಮತ್ತು ದಿಲೀಪ್ ಡ್ರಗ್ಸ್ ಖರೀದಿಸಿ ಸೇವಿಸಿದ್ದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ, ಅವರಿಬ್ಬರನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಐದು ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸೌಂದರ್ಯ ವರ್ಧಕ ಮಾರಾಟ ಕಂಪನಿ ನಡೆಸುತ್ತಿದ್ದ ಸೋನಿಯಾ, ರೂಪದರ್ಶಿಯೂ ಆಗಿದ್ದರು. ಎಂಬಿಬಿಎಸ್ ವೈದ್ಯರಾಗಿದ್ದ ದಿಲೀಪ್, ಕಾಲೇಜೊಂದರಲ್ಲಿ ಎಂ.ಎಸ್ ಮಾಡುತ್ತಿದ್ದರು. ಎರಡೂವರೆ ವರ್ಷಗಳಿಂದ ಅವರಿಬ್ಬರು ಸ್ನೇಹಿತರಾಗಿದ್ದರು. ಒಟ್ಟಿಗೆ ಪಾರ್ಟಿಗಳಿಗೂ ಹೋಗಿ ಬರುತ್ತಿದ್ದರು’ ಎಂದೂ ತಿಳಿಸಿದರು.

ದಾಳಿ ವೇಳೆ ಗಾಂಜಾ ಜಪ್ತಿ; ‘ನೈಜೀರಿಯಾ ಪ್ರಜೆ ನೀಡಿದ್ದ ಮಾಹಿತಿ ಆಧರಿಸಿ ಸೋನಿಯಾ ಅವರ ರಾಜಾಜಿನಗರದಲ್ಲಿರುವ ಮನೆ ಮೇಲೆ ಸೋಮವಾರ ದಾಳಿ ಮಾಡಲಾಗಿತ್ತು. ಅಲ್ಲಿ ಗಾಂಜಾ ಸಿಕ್ಕಿತು. ದಿಲೀಪ್ ಅವರ ಕಾರಿನಲ್ಲಿ ತಪಾಸಣೆ ನಡೆಸಿದಾಗಲೂ ಗಾಂಜಾ ಸಿಕ್ಕಿದೆ’ ಎಂದು ಅಧಿಕಾರಿ ಹೇಳಿದರು.

‘ದಾಳಿ ಸಂದರ್ಭದಲ್ಲೇ ಇಬ್ಬರನ್ನೂ ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಇಬ್ಬರೂ ಡ್ರಗ್ಸ್ ಸೇವನೆ ಮಾಡಿರುವುದನ್ನು ಖಚಿತಪಡಿಸಿ ವೈದ್ಯರು ವರದಿ ನೀಡಿದ್ದಾರೆ. ಅದನ್ನು ಆಧರಿಸಿ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿದರು.

‘ಬಂಧಿತ ಆರೋಪಿಗಳ ಜೊತೆ ನಾಲ್ವರು ಒಡನಾಟ ಹೊಂದಿರುವ ಮಾಹಿತಿ ಸಿಕ್ಕಿದೆ. ವಿಚಾರಣೆಗಾಗಿ ಠಾಣೆಗೆ ಬರುವಂತೆ ನಾಲ್ವರಿಗೂ ನೋಟಿಸ್ ನೀಡಲಾಗಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT