ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಜಾಲ: ಹೆಡ್‌ ಕಾನ್‌ಸ್ಟೆಬಲ್ ಬಂಧನ

Last Updated 20 ನವೆಂಬರ್ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾರಣಿ, ವೈದ್ಯ, ಉದ್ಯಮಿ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ಮಕ್ಕಳು ಸೇರಿಕೊಂಡು ನಡೆಸು
ತ್ತಿದ್ದ ಡ್ರಗ್ಸ್ ಜಾಲದ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಆರೋಪದಡಿ ಸದಾಶಿವನಗರ ಠಾಣೆ ಹೆಡ್ ಕಾನ್‌ಸ್ಟೆಬಲ್ ಪ್ರಭಾಕರ್ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಬಂಧಿತ ಪ್ರಭಾಕರ್, ಪೊಲೀಸರ ತನಿಖೆ ಬಗ್ಗೆ ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದರು. ಅದೇ ಕಾರಣಕ್ಕೆ ಅವರನ್ನು ಇತ್ತೀಚೆಗೆ ಅಮಾನತು ಮಾಡಲಾಗಿತ್ತು. ಇದೀಗ ಅವರನ್ನು ಪ್ರಕರಣದಡಿ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗುವುದು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ಖರೀದಿಸಿ ಅಂಚೆ ಮೂಲಕ ನಗರಕ್ಕೆ ತರಿಸಿ ಮಾರಾಟ ಮಾಡುತ್ತಿದ್ದ ಆರೋಪ
ದಡಿ ಇತ್ತೀಚೆಗಷ್ಟೇ ಎಂ.ಸುಜಯ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು. 500 ಗ್ರಾಂ ಹೈಡ್ರೊ ಗಾಂಜಾ ಜಪ್ತಿ ಮಾಡಿದ್ದರು. ಈ ಡ್ರಗ್ಸ್ ಜಾಲದಲ್ಲಿದ್ದ ಹೇಮಂತ್ ಮುದ್ದಪ್ಪ, ಪ್ರಸಿದ್ ಶೆಟ್ಟಿ, ಸುನೀಷ್ ಹಾಗೂ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅವರನ್ನೂ ಬಂಧಿಸಲಾಗಿತ್ತು’ ಎಂದೂ ತಿಳಿಸಿದರು.

‘ಜಾಲದ ಆರೋಪಿಗಳ ಜೊತೆ ನಂಟು ಹೊಂದಿದ್ದ, ಕಾಂಗ್ರೆಸ್ ಮುಖಂಡ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಅವರನ್ನೂ ಬಂಧಿಸಲಾಗಿತ್ತು. ಈ ಎಲ್ಲ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಹೇಳಿದರು.

ತಂತ್ರಜ್ಞಾನದಲ್ಲಿ ಪರಿಣತ: ‘ದೆಹಲಿಯಲ್ಲಿ ವಿಶೇಷ ತರಬೇತಿ ಪಡೆದಿದ್ದ ಹೆಡ್ ಕಾನ್‌ಸ್ಟೆಬಲ್, ತಂತ್ರಜ್ಞಾನದಲ್ಲಿ ಪರಿಣತ. ಹಲವು ಪ್ರಕರಣಗಳ ತನಿಖೆಯಲ್ಲಿ ತಾಂತ್ರಿಕ ನೆರವು ನೀಡಿದ್ದರು. ಆರೋಪಿಗಳ ಮೊಬೈಲ್ ನೆಟ್‌ವರ್ಕ್‌, ಕರೆಗಳ ವಿವರ ಸಂಗ್ರಹ.. ಹೀಗೆ ಹಲವು ತಾಂತ್ರಿಕ ಪುರಾವೆಗಳನ್ನು ಪ್ರಭಾಕರ್ ಪತ್ತೆ ಮಾಡುತ್ತಿದ್ದರು’ ಎಂದೂ ಸಿಸಿಬಿ ಅಧಿಕಾರಿ ತಿಳಿಸಿದರು.

ಪ್ರಭಾವಿ ವ್ಯಕ್ತಿಗಳ ಮಕ್ಕಳಿಗೆ ನೋಟಿಸ್

ಅಂತರರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಹಾಗೂ ಇತರೆ ಆರೋಪಿಗಳು, ಜಾಲದಲ್ಲಿ ಸಕ್ರಿಯರಾಗಿದ್ದರು ಎನ್ನಲಾದ ಹಲವು ಪ್ರಭಾವಿ ವ್ಯಕ್ತಿಗಳ ಮಕ್ಕಳ ಹೆಸರು ಬಾಯ್ಬಿಟ್ಟಿದ್ದಾರೆ. ಅವರ ಭಾಗಿ ಬಗ್ಗೆ ಸಿಸಿಬಿ ಪೊಲೀಸರು ಪರಿಶೀಲನೆ ನಡೆ ಸುತ್ತಿದ್ದ, ಪುರಾವೆ ಸಿಕ್ಕ ಕೂಡಲೇ ನೋಟಿಸ್ ನೀಡುವ ಸಾಧ್ಯತೆ ಇದೆ.

‘ಡ್ರಗ್ಸ್ ಪ್ರಕರಣದ ಆರೋಪಿಗಳು, ಮಾದಕ ವ್ಯಸನಿಗಳು. ರಾಜಕಾರಣಿ, ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಹಲವು ಪ್ರಭಾವಿಗಳ ಮಕ್ಕಳ ಜೊತೆ ಆರೋಪಿಗಳು ಸ್ನೇಹ ಇಟ್ಟುಕೊಂಡಿದ್ದರು. ಬಹುತೇಕ ಸ್ನೇಹಿತರಿಗೆ ಡ್ರಗ್ಸ್ ಪೂರೈಸುವುದು ಹಾಗೂ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದ ಸಂಗತಿ ಗೊತ್ತಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT