ಬೆಂಗಳೂರು: ವಿಶ್ವ ಮಾದಕವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ನಿಮಿತ್ತ ವಿಶೇಷ ಅಭಿಯಾನ ನಡೆಸಿದ ಪೊಲೀಸರು, ಸೋಮವಾರ ₹ 21 ಕೋಟಿ ಮೌಲ್ಯದ 2,117 ಕೆ.ಜಿ ಡ್ರಗ್ಸ್ ನಾಶಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಬಿ.ದಯಾನಂದ್, ‘ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದ 2,053 ಕೆ.ಜಿ ಗಾಂಜಾ, 9 ಕೆ.ಜಿ ಹಶೀಷ್, 12 ಕೆ.ಜಿ ಅಫೀಮು, 9 ಕೆ.ಜಿ ಚರಸ್, 568 ಗ್ರಾಂ ಕೊಕೇನ್, 13 ಗ್ರಾಂ ಹೆರಾಯಿನ್, 5 ಕೆ.ಜಿ ಎಂಡಿಎಂಎ ಅನ್ನು ಕೋರ್ಟ್ ಆದೇಶ ಪಡೆದು ನಾಶಪಡಿಸಲಾಗಿದೆ’ ಎಂದರು.
‘ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ 2022ರ ಜನವರಿಯಿಂದ 2023ರ ಜೂನ್‌ವರೆಗೆ 6,191 ಪ್ರಕರಣ ದಾಖಲಾಗಿದೆ. ಈ ಸಂಬಂಧ 7,723 ಭಾರತೀಯರು, 159 ವಿದೇಶಿಯರನ್ನು ಬಂಧಿಸಿದ್ದು, ₹ 117 ಕೋಟಿ ಮೌಲ್ಯದ 6,261 ಕೆ.ಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಅವರು ವಿವರಿಸಿದರು.
‘ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ‘ಡ್ರಗ್ಸ್ ಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ’ ಕುರಿತು ಸಮಾವೇಶದ ಭಾಗವಾಗಿ ₹ 92 ಕೋಟಿ ಮೌಲ್ಯದ 4,397 ಕೆ.ಜಿ ಡ್ರಗ್ಸ್ ನಾಶಪಡಿಸಲಾಗಿತ್ತು’ ಎಂದು ದಯಾನಂದ್ ಅವರು ಸ್ಮರಿಸಿದರು.
ಶಾಲೆ–ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ: ‘ನಗರದ ಶಾಲೆ– ಕಾಲೇಜುಗಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಸಲಿದ್ದು, ಈವರೆಗೆ 1.95 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಡ್ರಗ್ಸ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದ್ದಾರೆ’ ಎಂದರು.
‘ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳ ದತ್ತಾಂಶ ಸಂಗ್ರಹಕ್ಕೆ ‘ಬಿಸಿಪಿ ಎನ್‌ಡಿಪಿಎಸ್’ ಪೋರ್ಟಲ್ ರೂಪಿಸಲಾಗಿದೆ. ಪೊಲೀಸರು ಈ ವ್ಯವಸ್ಥೆಯಿಂದ ಆರೋಪಿಗಳ ಜಾಡು ಪತ್ತೆ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಕಂಡುಬಂದರೆ ಸಾರ್ವಜನಿಕರು ‘ನಮ್ಮ 112’ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು. ಜನರ ಸಹಕಾರವಿದ್ದರೆ ಬುಡ ಸಮೇತ ಡ್ರಗ್ಸ್ ಜಾಲ ಕಿತ್ತೆಸೆಯಬಹುದುಬಿ. ದಯಾನಂದ್ ಬೆಂಗಳೂರು ನಗರ ಪೊಲೀಸ್ ಕಮಿಷನರ್
ಎನ್‌ಡಿಪಿಎಸ್: ವಿಶೇಷ ಕಾರ್ಯಾಗಾರ ಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಹಾಗೂ ಅದರ ತಿದ್ದುಪಡಿಗಳ ಬಗ್ಗೆ ಪೊಲೀಸರಿಗೆ ಅರಿವು ಮೂಡಿಸಲು ಸಿಸಿಬಿ ಕಚೇರಿಯಲ್ಲಿ ಸೋಮವಾರ ವಿಶೇಷ ಕಾರ್ಯಾಗಾರ ನಡೆಸಲಾಯಿತು. ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್ ‘ಕಾಯ್ದೆ ಬಗ್ಗೆ ಹೆಚ್ಚು ಜ್ಞಾನ ಹೊಂದಿರಬೇಕು. ಸೂಕ್ತ ಪುರಾವೆಗಳ ಮೂಲಕ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು’ ಎಂದರು ರಾಜ್ಯದ 100 ಪೊಲೀಸ್ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.