ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿ– ಒಣ ಕಸ ಸಂಗ್ರಹದ ಗುತ್ತಿಗೆ ಒಬ್ಬರಿಗೇ ಇರಲಿ: ಪಿ.ಆರ್‌.ರಮೇಶ್

Last Updated 27 ಆಗಸ್ಟ್ 2020, 22:09 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಸ ವಿಲೇವಾರಿ ಸಂಬಂಧ ನ್ಯಾಯಾಲಯದ ಆದೇಶದ ಪ್ರಕಾರವೇ ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿ ವಾರ್ಡ್‌ನಲ್ಲೂ ಹಸಿ ಕಸ ಮತ್ತು ಒಣ ಕಸವನ್ನು ಸಂಗ್ರಹಿಸುವ ಗುತ್ತಿಗೆಯನ್ನು ಒಬ್ಬರಿಗೇ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ಪತ್ರ ಬರೆದಿರುವ ರಮೇಶ್‌, ‘ಕಸ ವಿಲೇವಾರಿ ಟೆಂಡರ್‌ ಪ್ರಕ್ರಿಯೆಯನ್ನು ಪರಾಮರ್ಶಿಸಲು ಮೇಯರ್‌ ಅಧ್ಯಕ್ಷತೆಯ ಸಮಿತಿ 2020ರ ಜೂನ್‌ 4, ಜೂನ್‌ 8 ಹಾಗೂ ಜೂನ್‌ 25ರಂದು ಸಭೆ ಸೇರಿತ್ತು. 198 ವಾರ್ಡ್‌ಗಳಿಗೆ ಹೊಸತಾಗಿ ಟೆಂಡರ್‌ ಕರೆಯುವ ಸಮಿತಿ ನಿರ್ಣಯವನ್ನು ಜೂನ್‌ 30ರ ಕೌನ್ಸಿಲ್‌ ಸಭೆಯಲ್ಲಿ ಅನುಮೋದಿಸಲಾಗಿತ್ತು. ಮತ್ತೆ ಮೇಯರ್‌ ಅಧ್ಯಕ್ಷತೆಯಲ್ಲಿ ಅನಧಿಕೃತ ಸಮಿತಿಯು ಆ .4 ಮತ್ತು 7ರಂದು ಮತ್ತೆ ಸಭೆ ಸೇರಿ ಪಾಲಿಕೆಯ ಹಿಂದಿನ ನಿರ್ಣಯಕ್ಕೆ ವ್ಯತಿರಿಕ್ತವಾಗಿ ನಿರ್ಣಯ ಕೈಗೊಂಡಿದೆ. ಈ ನಿರ್ಣಯ ಒಪ್ಪುವ ಕುರಿತು ಆ.10ರಂದು ನಡೆದ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದು ಕೆಎಂಸಿ ಕಾಯ್ದೆ ಕಲಂ 71 (2)ರ ಹಾಗೂ ಕಲಂ 72 ಹಾಗೂ ಪಾಲಿಕೆ ಸಭೆಯ ನಿಬಂಧನೆಗಳ ನಿಯಮ 49 ಮತ್ತು 51ರ ಉಲ್ಲಂಘನೆ’ ಎಂದು ಅವರು ದೂರಿದ್ದಾರೆ.

‘ಅರ್ಜಿದಾರರ ಟೆಂಡರ್‌ಗಳ ಮರುಮೌಲ್ಯಮಾಪನ ನಡೆಸಲುಹೈಕೋರ್ಟ್‌ 2019ರ ಆ. 30ರಂದು ಸೂಚಿಸಿತ್ತು. ಈ ಬಗ್ಗೆ ಕಾನೂನು ಸಲಹೆಗಾರರು, ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ನ್ಯಾಯಾಲಯದ ಮೊರೆ ಹೋಗಬೇಕಾಗಿಲ್ಲ ಎಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲೇಖಿಸಿ ಸಲಹೆ ನೀಡಿದ್ದರು. 45 ವಾರ್ಡ್‌ಗಳ ಯಶಸ್ವಿ ಟೆಂಡರ್‌ಗಳಿಗೆ ಕಾರ್ಯಾದೇಶ ನೀಡಬೇಕು ಎಂದು ಹೈಕೋರ್ಡ್ 2020ರ ಫೆ. 20ರಂದು ಸೂಚಿಸಿದ್ದರೂ 7 ವಾರ್ಡ್‌ಗಳಿಗೆ ಇನ್ನೂ ಕಾರ್ಯಾದೇಶ ನೀಡಿಲ್ಲ. ಕೆಲ ವಾರ್ಡ್‌ಗಳ ಗುತ್ತಿಗೆದಾರರಿಗೆ ಮಾತ್ರ ಆ.5ರಂದು ಕಾರ್ಯಾದೇಶ ನೀಡಲಾಗಿದೆ. ಇದು ಕಾನೂನುಬಾಹಿರ’ ಎಂದು ಅವರು ಆರೋಪ ಮಾಡಿದ್ದಾರೆ.

2019ರಲ್ಲೇ ಕಸ ವಿಲೇವಾರಿಗೆ ಟೆಂಡರ್‌ ಕರೆದು ಒಂದೂವರೆ ವರ್ಷವಾದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಲಯದ ಆದೇಶಗಳು, ಕಾನೂನು ಸಲಹೆಗಾರರ ಅಭಿಪ್ರಾಯ, ಹಿಂದಿನ ಆಯುಕ್ತರ ಟಿಪ್ಪಣಿ, ಪಾಲಿಕೆ ಕೌನ್ಸಿಲ್‌ ಸಭೆಯ ನಿರ್ಣಯಗಳನ್ನು ನೋಡಿದರೆ ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಸಂಶಯವಿದೆ. ಕೋವಿಡ್‌ ಇರುವ ಸಂದರ್ಭವನ್ನು ಪರಿಗಣಿಸಿ ಹಿಂದಿನ ಟೆಂಡರ್‌ ರದ್ದುಪಡಿಸಿ ಹೊಸ ಟೆಂಡರ್‌ ಕರೆಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT