ಶನಿವಾರ, ಡಿಸೆಂಬರ್ 7, 2019
25 °C

ಹಣ ಕಳುಹಿಸದಿದ್ದರೆ ‘ಇ-ಮೇಲ್‘ ಹ್ಯಾಕ್ ‌ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇ-ಮೇಲ್ ಹ್ಯಾಕ್ ಮಾಡಿರುವುದಾಗಿ ಬಿಇಎಂಎಲ್ ನಿರ್ದೇಶಕರಿಗೆ ಸಂದೇಶ ಕಳುಹಿಸಿರುವ ಅಪರಿಚಿತನೊಬ್ಬ ಹಣ ಕಳುಹಿಸದಿದ್ದರೆ, ಅದರಲ್ಲಿರುವ ರಹಸ್ಯ ಮಾಹಿತಿಗಳನ್ನು ನಾಶ ಮಾಡುವುದಾಗಿ ಬೆದರಿಸಿದ್ದಾನೆ.

ಬಿಇಎಂಎಲ್‌ ನಿರ್ದೇಶಕ ದೀಪಕ್ ಹೋತ ಅವರ ಇ-ಮೇಲ್‌ಗೆ ನ. 17ರಂದು ರಾತ್ರಿ 3 ಗಂಟೆ ಸುಮಾರಿಗೆ ಬೆದರಿಕೆ ಸಂದೇಶ ಬಂದಿದೆ. ಈ ಸಂಬಂಧ ಬಿಇಎಂಎಲ್‌ ವ್ಯವಸ್ಥಾಪಕ ಬಿ.ವಿ. ಗಿರೀಶ್ ಅವರು ಸಂಪಂಗಿರಾಮನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ನಿಮ್ಮ ಇ-ಮೇಲ್ ಹ್ಯಾಕ್ ಮಾಡಿದ್ದೇವೆ. ಅದಲ್ಲಿರುವ ಎಲ್ಲ ಸಂದೇಶ, ವಿಡಿಯೊ ರೆಕಾರ್ಡ್ ಮತ್ತು ಇತರ ರಹಸ್ಯ ಮಾಹಿತಿಗಳು ನಮ್ಮ ಸುಪರ್ದಿಯಲ್ಲಿದೆ. ನನ್ನ ಖಾತೆಗೆ ಬಿಟ್ ಕಾಯಿನ್ ಮೂಲಕ 785 ಅಮೆರಿಕನ್ ಡಾಲರ್ ಪಾವತಿಸಬೇಕು. 48 ಗಂಟೆ ಒಳಗೆ ಹಣ ಕಳುಹಿಸದಿದ್ದರೆ ಇ-ಮೇಲ್‌ನಲ್ಲಿರುವ ಎಲ್ಲ ರಹಸ್ಯ ಮಾಹಿತಿಗಳನ್ನು ನಾಶಪಡಿಸುತ್ತೇವೆ. ಅಲ್ಲದೆ, ಅದರಲ್ಲಿರುವ ವಿಡಿಯೊ ರೆಕಾರ್ಡ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದಾನೆ’ ಎಂದು ದೂರು ನೀಡಿದ್ದಾರೆ.

ಬೆದರಿಕೆಯ ಇ-ಮೇಲ್ ಬ್ರೆಜಿಲ್ ದೇಶದಿಂದ ಬಂದಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)