ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ, ಸುರಕ್ಷಿತ ಗಣೇಶೋತ್ಸವ– ಪಾಲಿಕೆ ಮನವಿ

ಮೂರ್ತಿ ವಿಸರ್ಜನೆಗೆ ಕೆರೆಗಳ ಬಳಿ ಕಲ್ಯಾಣಿ ಇಲ್ಲ * ಮೆರವಣಿಗೆಗೆ ಅವಕಾಶ ಇಲ್ಲ
Last Updated 21 ಆಗಸ್ಟ್ 2020, 20:35 IST
ಅಕ್ಷರ ಗಾತ್ರ

ಬೆಂಗಳೂರು: ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಹಾಗೂ ಎಲ್ಲೂ ಜನ ದಟ್ಟಣೆ ಉಂಟಾಗುವುದಕ್ಕೆ ಅವಕಾಶ ನೀಡದೆ ಸರಳ ರೀತಿಯಲ್ಲಿ ಆಚರಣೆ ಮಾಡಬೇಕು ಎಂದು ಬಿಬಿಎಂಪಿ ಕೋರಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿವರ್ಷವೂ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ ಈ ಹಬ್ಬವನ್ನು ಕೆಲವೊಂದು ಮುಂಜಾಗ್ರತಾ ಕ್ರಮ ವಹಿಸಿ,ಸುರಕ್ಷಿತವಾಗಿ ಆಚರಿಸಬೇಕು.ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲೂ ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಸುರಕ್ಷತೆ ಕಾಪಾಡಬೇಕು’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ನಗರದ ಜನರಲ್ಲಿ ಮನವಿ ಮಾಡಿದ್ದಾರೆ.

‘ಈ ಬಾರಿ ಪಾಲಿಕೆಯು ಕೆರೆ, ತೊಟ್ಟಿ, ಹಾಗೂ ಕಲ್ಯಾಣಿಗಳಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಿಲ್ಲ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಒಯ್ಯುವಾಗ ಮತ್ತು ವಿಸರ್ಜನಾ ಸಮಯದಲ್ಲಿ ಯಾವುದೇ ಮೆರವಣಿಗೆಗೆ ಅವಕಾಶವಿಲ್ಲ. ಸಾರ್ವಜನಿಕವಾಗಿ ಪೂಜೆಗೊಳ್ಳುವ ಗಣಪತಿ ವಿಗ್ರಹಗಳನ್ನು ಪಾಲಿಕೆ ನಿಯೋಜನೆ ಮಾಡಿರುವ ವಾಹನಗಳಲ್ಲೇ ವಿಸರ್ಜನೆ ಮಾಡಬೇಕು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ವಾರ್ಡ್‌ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಯೂ ಗರಿಷ್ಠ 3 ದಿನಗಳಿಗೆ ಸೀಮಿತ. ಪೂಜಾ ಸ್ಥಳಗಳಲ್ಲೂ ಏಕಕಾಲದಲ್ಲಿ 20ಕ್ಕಿಂತ ಹೆಚ್ಚುಮಂದಿ ಸೇರದಂತೆ ನೋಡಿಕೊಳ್ಳಬೇಕು. ಆ. 24ರಷ್ಟರ ಒಳಗೆ ಎಲ್ಲ ಮೂರ್ತಿಗಳ ವಿಸರ್ಜನೆ ಪೂರ್ಣಗೊಳ್ಳಬೇಕು. ಈ ಸಂದರ್ಭದಲ್ಲಿಯಾವುದೇ ರೀತಿಯ ಸಾಂಸ್ಕೃತಿಕ, ಸಂಗೀತ ಅಥವಾ ನೃತ್ಯ ಕಾರ್ಯಕ್ರಮ ಆಯೋಜಿಸುವ ಮೂಲಕ ಜನಜಂಗುಳಿ ಸೇರುವುದಕ್ಕೆ ಅವಕಾಶ ನೀಡಬಾರದು. ಭಕ್ತರು ಮನೆಯಲ್ಲಿಯೇ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪೂಜಿಸಿ ಮನೆಯಲ್ಲೇ ಅವುಗಳನ್ನು ವಿಸರ್ಜನೆ ಮಾಡಬೇಖು’ ಎಂದು ಅವರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

‘ಗಣೇಶೋತ್ಸವ ಆಚರಿಸುವಾಗ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ 2005ರ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT