ಗುರುವಾರ , ಜೂನ್ 17, 2021
21 °C

ಪ್ರಶಸ್ತಿ ದಕ್ಕಿಸಿಕೊಟ್ಟ ಪರಿಸರ ಕಾಳಜಿ, ಪ್ರಗತಿಯ ಹುರುಪು

ಶಿವರಾಜ್‌ ಮೌರ್ಯ Updated:

ಅಕ್ಷರ ಗಾತ್ರ : | |

ಕೆ.ಆರ್.ಪುರ: ಗ್ರಾಮಗಳ ಪರಿಸರ ಕಾಳಜಿ, ಸ್ವಚ್ಛತೆ, ಕಸದ ವೈಜ್ಞಾನಿಕ ನಿರ್ವಹಣೆ, ನೀರು ಸರಬರಾಜು, ಪಂಚಾಯಿತಿ ವ್ಯವಸ್ಥೆಗಳಲ್ಲಿ ಸೌರಶಕ್ತಿ ಬಳಕೆಗೆ ಕ್ರಮ, ಪಂಚಾಯತಿ ಆಸ್ತಿಗಳ ಡಿಜಿಟಲಿಕರಣ, ಬೆಸ್ಕಾಂ ಬಿಲ್ಲುಗಳ ಮರು ಸಮನ್ವಯ..

ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ 11 ಗ್ರಾಮಗಳ  ಸಮಗ್ರ ಅಭಿವೃದ್ಧಿಗಾಗಿ ಕಾರ್ಯಗತಗೊಳಿಸಿರುವ ಈ ವಿಶೇಷ ಕಾರ್ಯಕ್ರಮಗಳು ಮತ್ತು ನೂತನ ಯೋಜನೆಗಳು ಕೇಂದ್ರ ಸರ್ಕಾರದ ಗಮನವನ್ನೂ ಸೆಳೆದಿವೆ. 2021ನೇ ಸಾಲಿನ ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತಿಕರಣ ಪ್ರಶಸ್ತಿಯನ್ನೂ ದಕ್ಕಿಸಿಕೊಟ್ಟಿವೆ.

ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸಲಾಗುತ್ತಿದೆ. ಸಾಧ್ಯವಿರುವಲ್ಲೆಲ್ಲ ಸೌರವಿದ್ಯುತ್‌ ಬಳಕೆಯನ್ನು ಮಾಡಲಾಗುತ್ತಿದೆ. ಕೆರೆ, ಕಲ್ಯಾಣಿಗಳ ಅಭಿವೃದ್ಧಿಗೆ ಹಾಗೂ ಅವುಗಳ ಜಲಮರುಪೂರಣಕ್ಕೆ ಒತ್ತು ನೀಡಲಾಗುತ್ತಿದೆ. ಇಂಗುಗುಂಡಿ ರಚಿಸಿ, ಹರಿದು ಹೋಗುತ್ತಿದ್ದ ನೀರಿಗೆ ತಡೆಯೊಡ್ಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 18 ಕಲ್ಯಾಣಿಗಳನ್ನು ಅಭಿವೃದ್ಧಿ ಮಾಡಲಾಗಿದೆ. ಗ್ರಾಮಗಳಲ್ಲಿ ಸರ್ಕಾರಿ ಜಾಗ ಮತ್ತು ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸುವ ಮೂಲಕ ಗ್ರಾಮಗಳ ಸುಂದರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಒತ್ತುವರಿ ಜಾಗಗಳನ್ನು ವಶಪಡಿಸಿಕೊಂಡು ಅಲ್ಲೂ ಗಿಡ ನೆಟ್ಟು ಬೆಳೆಸಲಾಗುತ್ತಿದೆ.

ಲಭ್ಯ ಅನುದಾನದಲ್ಲಿ ಗ್ರಾಮಗಳ ಅಭಿವೃದ್ಧಿ ಹಾಗೂ ಕಸದ ವೈಜ್ಞಾನಿಕ ನಿರ್ವಹಣೆಯಂತಹ ಹಲವು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಘಟಕ ಸ್ಥಾಪಿಸಲಾಗಿದೆ. ಕಸದ ಮರುಬಳಕೆ ಉತ್ತೇಜಿಸಲಾಗುತ್ತಿದೆ. ಟ್ರ್ಯಾಕ್ಟರ್ ಮೂಲಕ ಮನೆಮನೆಗೆ ತೆರಳಿ ಹಸಿಕಸ ಮತ್ತು ಒಣ ಪ್ರತ್ಯೇಕಗೊಳಿಸಿ ಸಂಗ್ರಹಿಸಲಾಗುತ್ತಿದೆ. ಒಣಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತದೆ. ಹಸಿರು ದಳ ಮತ್ತು ಮಹೇಂದ್ರ ಟೆಕ್ ಸಂಸ್ಥೆಗಳ ಸಹಯೋಗದಲ್ಲಿ ಬಯೋ ಗ್ಯಾಸ್ ಘಟಕ ಸ್ಥಾಪಿಸಿ ಹಸಿ ಕಸದಿಂದ ಜೈವಿಕ ಅನಿಲ ಘಟಕ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ.

ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ಬಣ್ಣಗಳಲ್ಲಿ ಕಟ್ಟಡ ವಿನ್ಯಾಸ. ಗೋಡೆಗಳಿಗೆ ಪ್ರಾಣಿ ಪಕ್ಷಿಗಳ ಕಲರವ, ಪದ್ಯಗಳ ಸಾಲು ಕಿರುಚಿತ್ರಗಳ ಬಣ್ಣ ಬಳೆದು ಅಲಂಕರಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಡೆಸ್ಕ್, ಟಿವಿ ಸೌಕರ್ಯ ಒದಗಿಸಲಾಗಿದೆ.

‘ಈ ಪ್ರಶಸ್ತಿ ಬರುವಲ್ಲಿ ಶ್ರಮಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಶ್ರಮ, ಜನರ ಸಹಭಾಗಿತ್ವ ಮುಖ್ಯ ಪಾತ್ರ ವಹಿಸಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ ಮಂಜುನಾಥ್ ಹೇಳಿದರು.

ವರ್ಷಕ್ಕೆ ₹ 3 ಕೋಟಿ ಉಳಿತಾಯ
ಪ್ರತಿ ಪಂಚಾಯಿತಿ ಕಟ್ಟಡಗಳಲ್ಲಿ ಸೌರವಿದ್ಯುತ್‌ ಬಳಸಿ ತಾಲ್ಲೂಕು ಪಂಚಾಯಿತಿ ಉಸ್ತುವಾರಿಯಲ್ಲಿರುವ ಕಟ್ಟಡಗಳ ವಿದ್ಯುತ್‌ ಬಿಲ್ಲುಗಳ ಮರು ಸಮನ್ವಯ ಮಾಡಿ ಸರ್ಕಾರದ ಹಣ ಪೋಲಾಗುವುದನ್ನು ತಡೆಯಲಾಗಿದೆ. ಈ ಮೂಲಕ ವರ್ಷಕ್ಕೆ ₹ 3 ಕೋಟಿ ಹಣ ಉಳಿಸಲಾಗಿದೆ. ತೆರಿಗೆ ವಂಚನೆಯನ್ನು ತಡೆಗಟ್ಟುವಲ್ಲಿ ಪೂರ್ವ ತಾಲ್ಲೂಕು ಪಂಚಾಯಿತಿ ವಿಶೇಷ ಕ್ರಮ ಕೈಗೊಂಡಿದೆ.

**

ಈ ಪ್ರಶಸ್ತಿಯಿಂದ ಇನ್ನಷ್ಟು ಕೆಲಸ ಮಾಡಲು ಹುರುಪು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡುವ ಮೂಲಕ ಗ್ರಾಮಗಳ ಸಶಕ್ತೀಕರಣಕ್ಕೆ ಶ್ರಮಿಸುತ್ತೇವೆ.
-ಕೆ ಮಂಜುನಾಥ್ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ

**

ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪಿಡಿಒಗಳ ಪಾತ್ರ ಹಾಗೂ ಜನರ ಸಹಭಾಗಿತ್ವ ಮುಖ್ಯ. ಪ್ರಶಸ್ತಿ ಬಂದಿದ್ದು ಖುಷಿ ನೀಡಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಶ್ರದ್ಧೆಯ ಫಲವೂ ಇದರಲ್ಲಿದೆ.
-ಮಂಜುಳಾ ಮುನಿತಿಮ್ಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು