ಶುಕ್ರವಾರ, ಜುಲೈ 1, 2022
26 °C

ರಾಜ್ಯದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಜಾರಿ: ಬಿ.ಸಿ. ನಾಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಕ್ಕಳಲ್ಲಿ ಕಲಿಕಾ ಹಿನ್ನಡೆ ಸರಿದೂಗಿಸಲು ಕಲಿಕಾ ಚೇತರಿಕೆ ಎಂಬ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ದೇಶದಲ್ಲೇ ಇಂತಹ ಕಾರ್ಯಕ್ರಮ ಜಾರಿಗೊಳಿಸುತ್ತಿರುವ ಮೊದಲ ರಾಜ್ಯ ನಮ್ಮದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ಜಯನಗರದಲ್ಲಿರುವಆರ್.ವಿ. ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್ ಸೋಂಕು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಹುದೊಡ್ಡ ಪೆಟ್ಟು ನೀಡಿದೆ. ಕೇಂದ್ರ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳು ನಡೆಸಿದ ಸಮೀಕ್ಷೆಯಿಂದ ಮಕ್ಕಳಲ್ಲಿ ಕಲಿಕಾ ಹಿನ್ನಡೆ ಭಾರಿ ಪ್ರಮಾಣದಲ್ಲಿ ಕಂಡುಬಂದಿದೆ. ಅದರ ಗಂಭೀರತೆ ಅರಿತು 2022ರ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಘೋಷಿಸಿ, ಕಲಿಕೆಗೆ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗಿದೆ’ ಎಂದರು.

‘ಕೋವಿಡ್‌ನಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಮಸ್ಯೆಯಾಗಿದೆ. ಶಿಕ್ಷಣ ಇಲಾಖೆಯಲ್ಲೂ ಸವಾಲುಗಳಿವೆ. ಮಕ್ಕಳು ಮಾತ್ರವಲ್ಲ ಶಿಕ್ಷಕರೂ ಬರವಣಿಗೆ ಮೇಲಿನ ಹಿಡಿತ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಕೈ ಬರಹ, ಬರವಣಿಗೆ ಸುಧಾರಣೆ ಅಗತ್ಯವಿದೆ’ ಎಂದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಇಲಾಖೆ ಆಯುಕ್ತ ಡಾ. ವಿಶಾಲ್. ಆರ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಎಂ. ದೀಪಾ ಮತ್ತು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ರಿಷಿಕೇಶ್ ಇದ್ದರು. ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ಸಂಪನ್ಮೂಲ ಸಾಹಿತ್ಯವನ್ನು ಬಿಡುಗಡೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು