ಬೆಂಗಳೂರು: ‘ಸಂವಿಧಾನದ ಆಶಯಗಳು ಮತ್ತು ತತ್ವಗಳ ಚೌಕಟ್ಟಿನಲ್ಲೇ ಶಿಕ್ಷಣ ನೀತಿಯನ್ನು ರೂಪಿಸಬೇಕಿದೆ’ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ) ಭಾನುವಾರ ಆಯೋಜಿಸಿದ್ದ ‘ರಾಜ್ಯ ಶಿಕ್ಷಣ ನೀತಿ–ಉತ್ತಮ ಶಿಕ್ಷಣಕ್ಕಾಗಿ ರಾಜ್ಯಮಟ್ಟದ ಸಮಾವೇಶ’ದಲ್ಲಿ ಅವರು ಮಾತನಾಡಿದರು.
‘ಸಂವಿಧಾನದ ಆಶಯಗಳಾದ ಸಮಾನತೆ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಬಲಿಷ್ಠ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು. ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ, ಸತತವಾಗಿ ಈ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ’ ಎಂದು ದೂರಿದರು.
‘ಜಾತಿ, ಲಿಂಗ, ಧರ್ಮದ ಹೆಸರಿನಲ್ಲಿ ನಡೆಯುವ ತಾರತಮ್ಯಗಳನ್ನು ತಡೆಗಟ್ಟುವ ಶಿಕ್ಷಣ ನೀತಿ ರೂಪಿಸಬೇಕು. ಹಾಗೆಯೇ, ಮೂಲಭೂತ ಹಕ್ಕುಗಳನ್ನು ಆಧರಿಸಿ ಸಾರ್ವತ್ರಿಕ ಶಿಕ್ಷಣ ನೀಡುವಂತಹ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರಿಗೆ ಶಿಕ್ಷಣ ಸಿಗುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ ಆಗಿದೆ’ ಎಂದು ಹೇಳಿದರು.
‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕಾ ನಿಧಿ (ಸಿಎಸ್‌ಆರ್) ಬಳಸಿಕೊಂಡು ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಇದರಿಂದ, ಸರ್ಕಾರಿ ಶಾಲೆಗಳ ಬಲವರ್ಧನೆ ಹಾಗೂ ಗುಣಾತ್ಮಕ ಶಿಕ್ಷಣ ಪಡೆಯುವುದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
ಶಿಕ್ಷಣ ನೀತಿ ಎಂದರೆ ಯಾರೋ ನಾಲ್ಕು ಜನ ಮೇಧಾವಿಗಳು ಸೇರಿ ಮಾಡುವಂತಹದಲ್ಲ. ಶಿಕ್ಷಣದ ವಾರಸುದಾರರಾದ ಪಾಲಕರು ಶಿಕ್ಷಕರು ಮತ್ತು ಜನಸಾಮಾನ್ಯರ ಮಧ್ಯ ಚರ್ಚಿಸಿ ನೀತಿ ರೂಪಿಸಬೇಕು.ವಿ.ಪಿ. ನಿರಂಜನಾರಾಧ್ಯ ಶಿಕ್ಷಣ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.