ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಥ, ಶ್ರೇಷ್ಠ ಭಾರತ ನಿರ್ಮಾಣ ಅಗತ್ಯ: ಪ್ರೊ.ಕಾಳೇಗೌಡ ನಾಗವಾರ

ಕನ್ನಡ ರಾಜ್ಯೋತ್ಸವದಲ್ಲಿ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ lವಿವೇಕದ ದಾರಿಯಲ್ಲಿರುವಂತೆ ಕರೆ
Last Updated 29 ನವೆಂಬರ್ 2022, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮರ್ಥ, ಶ್ರೇಷ್ಠ ಹಾಗೂ ಹೊಸ ಭಾರತ ಕಟ್ಟಲು ಡಾ.ಬಿ.ಆರ್. ಅಂಬೇಡ್ಕರ್‌ ಹಾಗೂ ಲೋಹಿಯಾ ಕುರಿತ ಬರಹಗಳನ್ನು ಯುವಪೀಳಿಗೆ ಹಾಗೂ ಅಧಿಕಾರ ವರ್ಗ ಓದಿಕೊಳ್ಳುವುದು ಅಗತ್ಯ’ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಪ್ರತಿಪಾದಿಸಿದರು.

‘ಅಕ್ಕ’ ಐಎಎಸ್‌ ಅಕಾಡೆಮಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಂಚಭೂತಗಳಲ್ಲಿ ಮೋಸ ಎಂಬುದಿಲ್ಲ. ಸೂರ್ಯ, ಚಂದ್ರರಲ್ಲಿ ಭೇದಭಾವವೂ ಇಲ್ಲ. ಆದರೆ, ಜನರ ಮನಸ್ಸುಗಳಲ್ಲಿ ವಂಚನೆ ಇದೆ ಎಂದ ಅವರು, ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕೆಟ್ಟದ್ದನ್ನು ತ್ಯಜಿಸಬೇಕು. ಒಳಿತು ಅಳವಡಿಸಿಕೊಳ್ಳಬೇಕು. ಮಾತೃಭಾಷೆಯನ್ನು ಪ್ರೀತಿಸಿ, ಅನ್ಯಭಾಷೆಗಳ ಬಗ್ಗೆಯೂ ಗೌರವ ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಪ್ರಾಮಾಣಿಕರ ಬಗ್ಗೆ ಕೊನೆವರೆಗೆ ಅಭಿಮಾನ ಇರಲಿದ್ದು, ನೈತಿಕತೆ ಉಳಿಸಿಕೊಳ್ಳುವುದು ಅಗತ್ಯ. ಭ್ರಷ್ಟರು ಹಾಗೆಯೇ ಕಣ್ಮರೆ ಆಗಲಿದ್ದಾರೆ’ ಎಂದು ನುಡಿದರು.

‘ಸಂಪತ್ತು ಆಪತ್ತು ತರುವ ಸಾಧ್ಯತೆಯೇ ಹೆಚ್ಚು. ಸಂಪತ್ತಿನ ಹಿಂದೆ ಓಡಬಾರದು. ಆರೋಗ್ಯಕರ ಚಿಂತನೆ ಅಗತ್ಯ. ಉತ್ತಮ ಅಧಿಕಾರಿಗಳಾಗಿ ರೂಪುಗೊಳ್ಳಬೇಕು’ ಎಂದು ಐಎಎಸ್‌ ಆಕಾಂಕ್ಷಿಗಳಿಗೆ ಕರೆ ನೀಡಿದರು.

ಯುದ್ಧ ಬೇಕಿರಲಿಲ್ಲ: ‘ರಷ್ಯಾ– ಉಕ್ರೇನ್‌ ನಡುವೆ ಯುದ್ಧವೇ ಬೇಕಿರಲಿಲ್ಲ. ಕೊಲ್ಲುವ ವ್ಯಕ್ತಿ ಎಂದಿಗೂ ದೊಡ್ಡವನಾಗಲು ಸಾಧ್ಯವಿಲ್ಲ. ಈ ಯುದ್ಧದಲ್ಲಿ ಮಕ್ಕಳು ಕಣ್ಣೆದುರಿಗೇ ಮೃತಪಟ್ಟಿದ್ದು ಕಣ್ಣೀರು ತರಿಸಿತು. ಮನುಷ್ಯರು ಎಷ್ಟು ದೊಡ್ಡವರಾದರೂ ವಿವೇಕದ ದಾರಿಯಲ್ಲಿ ಸಾಗಬೇಕಿದೆ’ ಎಂದು ಕರೆ ನೀಡಿದರು.

‘ಭಾರತದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದರೂ ಮತ್ತಷ್ಟು ಆರೋಗ್ಯಕರ ಬದಲಾವಣೆಗಳು ನಡೆಯಬೇಕಿದೆ. ಉತ್ತಮ ಸಮಾಜ ನಿರ್ಮಾಣ ಆಗಬೇಕಿದ್ದರೆ ಸಾಮೂಹಿಕ ಹೊಣೆಗಾರಿಕೆ ಮುಖ್ಯ. ಇಂದು ಅವಕಾಶಗಳು ಸಾಕಷ್ಟಿವೆ. ಅನ್ಯಾಯ ಒಪ್ಪಿಕೊಳ್ಳದೇ ಪ್ರತಿಭಟಿಸಬೇಕು’ ಎಂದು ಕರೆ ನೀಡಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಉದ್ಘಾಟನಾ ಭಾಷಣ ಮಾಡಿದರು.

ಕೋಲಾರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಯು. ಸೋನಿಯಾ ವರ್ಣೇಕರ್‌, ಅಕಾಡೆಮಿ ಮಾರ್ಗದರ್ಶಕ ಬಸವರಾಜ ವಾಲೀಕಾರ್, ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT