ಶುಕ್ರವಾರ, ನವೆಂಬರ್ 22, 2019
27 °C

ಈದ್ ಮಿಲಾದ್ | ಏಕತೆ ಸಾರಿದ ಮೆರವಣಿಗೆ

Published:
Updated:
Prajavani

ಬೆಂಗಳೂರು: ಪ್ರವಾದಿ ಮೊಹಮ್ಮದ್‌ ಪೈಗಂಬರ ಅವರ ಜನ್ಮದಿನವಾದ ಈದ್ ಮಿಲಾದ್‌ ಅನ್ನು ನಗರದ ಮುಸ್ಲಿಂ ಬಾಂಧವರು ಭಾನುವಾರ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.

ಮುಸ್ಲಿಮರ ಮನೆಯಲ್ಲಿ ಬೆಳಿಗ್ಗೆಯಿಂದಲೇ ಸಂಭ್ರಮವಿತ್ತು. ಸಂಬಂಧಿಕರು ಹಾಗೂ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಬಿರಿಯಾನಿ, ಪಾಯಸ, ಸಿಹಿ– ತಿನಿಸುಗಳನ್ನು ಸೇವಿಸಿದರು.

ಹಲವರು ದವಸ–ಧಾನ್ಯ ಹಾಗೂ ನಗದು ದಾನ ಮಾಡಿದರು. ಮೊಹಮ್ಮದ್ ಪೈಗಂಬರ ಅವರ ಸಂದೇಶಗಳನ್ನು ಜನರಿಗೆ ತಿಳಿಸುವ ಕಾರ್ಯಕ್ರಮಗಳನ್ನು ಹಲವೆಡೆ ಆಯೋಜಿಸಲಾಗಿತ್ತು. ತಮ್ಮ ತಮ್ಮ ಪ್ರದೇಶಗಳಲ್ಲಿ ಮೆರವಣಿಗೆ, ಅನ್ನಸಂತರ್ಪಣೆ, ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಂಘಟಿಸಲಾಗಿತ್ತು.

ಶಿವಾಜಿನಗರ, ರಸೆಲ್ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಖರೀದಿಯೂ ಜೋರಾಗಿತ್ತು. 

ಏಕತೆ ಸಾರಿದ ಮೆರವಣಿಗೆ: ಪ್ರತಿ ವರ್ಷದಂತೆ ಈ ವರ್ಷವೂ ಕೆ.ಆರ್. ಮಾರುಕಟ್ಟೆಯಿಂದ ಪುರಭವನ ಮಾರ್ಗವಾಗಿ ನೃಪತುಂಗ ರಸ್ತೆಯ ವೈಎಂಸಿಎ ಮೈದಾನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. 

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಕೈಯಲ್ಲಿ ಬಲೂನ್‌ಗಳನ್ನು ಹಿಡಿದು ರಸ್ತೆಯುದ್ದಕ್ಕೂ ನೆರೆದಿದ್ದವರಿಗೆ ಶುಭಾಶಯ ಕೋರಿದರು. ಪೂರ್ತಿ ಮೆರವಣಿಗೆ ಏಕತೆ ಸಾರುವಂತಿತ್ತು. ಕಲಾ ತಂಡಗಳು ಮೆರವಣಿಗೆಯಲ್ಲಿ ಇದ್ದವು. ಮೊಹಮ್ಮದ್ ಪೈಗಂಬರ್ ಅವರ ಸಂದೇಶಗಳ ಫಲಕಗಳನ್ನು ಹೊಂದಿದ್ದ ವಾಹನಗಳು ಗಮನಸೆಳೆದವು.


ಟ್ಯಾನರಿ ರಸ್ತೆಯಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನ (ಎಡಚಿತ್ರ) ಮೆರವಣಿಗೆಯಲ್ಲಿ ಯುವಕರು ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು -– ಪ್ರಜಾವಾಣಿ ಚಿತ್ರ

ಯಲಹಂಕದಿಂದ ಹೆಗಡೆನಗರ ಮಾರ್ಗವಾಗಿ ಟ್ಯಾನರಿ ರಸ್ತೆಯವರೆಗೂ ಮೆರವಣಿಗೆ ನಡೆಸಲಾಯಿತು. ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿದ್ದವು. ಯುವಕರ ಗುಂಪೊಂದು ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿತು. ಮೆರವಣಿಗೆ ನಂತರ ಶಿವಾಜಿನಗರದಲ್ಲಿ ಸಭೆ ಆಯೋಜಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ಸಿಹಿ ತಿಂಡಿ ಹಾಗೂ ಪಾನೀಯ ವಿತರಿಸಲಾಯಿತು. ಬಾವುಟಗಳು ರಾರಾಜಿಸಿದವು.

ನಗರದ ಮಸೀದಿ, ದರ್ಗಾ ಹಾಗೂ ಮದರಸಾಗಳಿಗೆ ವಿಶೇಷ ವಿದ್ಯುತ್ ಹಾಗೂ ಬಣ್ಣದ ಕಾಗದಗಳ ಅಲಂಕಾರ ಮಾಡಲಾಗಿತ್ತು. ವಿದ್ಯುತ್‌ ಬೆಳಕಿನಲ್ಲಿ ಮಸೀದಿಗಳು ಕಂಗೊಳಿಸುತ್ತಿದ್ದವು. 

ಶಿವಾಜಿನಗರ, ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ, ಫ್ರೇಜರ್ ಟೌನ್, ಚಾಮರಾಜಪೇಟೆ, ಗೋರಿಪಾಳ್ಯ ಸೇರಿ ಹಲವೆಡೆಯ ಮಸೀದಿಗಳಿಗೆ ವಿದ್ಯುತ್ ಅಲಂಕಾರವಿತ್ತು.

ಪ್ರತಿಕ್ರಿಯಿಸಿ (+)