ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್ಗಾ ಮೈದಾನ: ಖಾತಾ ತಿದ್ದಿದ ಅನುಮಾನ, ಬಿಬಿಎಂಪಿ –ವಕ್ಫ್‌ ಮಂಡಳಿ ಮಧ್ಯೆ ತಿಕ್ಕಾಟ

Last Updated 8 ಜೂನ್ 2022, 20:08 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಆಸ್ತಿ ಮಾಲೀಕತ್ವ ವಿಷಯದಲ್ಲಿಬಿಬಿಎಂಪಿ ಮತ್ತು ವಕ್ಫ್‌ ಮಂಡಳಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಬಿಬಿಎಂಪಿ ಖಾತಾ ರಿಜಿಸ್ಟ್ರಾರ್ ಅನ್ನೇ ತಿದ್ದಿರುವ ಅನುಮಾನವನ್ನು ಸ್ವತಃ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೇ ವ್ಯಕ್ತಪಡಿಸಿದ್ದಾರೆ.

‘ಬಿಬಿಎಂಪಿ ಖಾತಾ ರಿಜಿಸ್ಟ್ರಾರ್ ಪ್ರಕಾರ ಆಟದ ಮೈದಾನ ಎಂದೇ ಇದೆ. ಭೂಮಾಪನ ಇಲಾಖೆ ನಡೆಸಿರುವ ನಗರ ಸರ್ವೆ ದಾಖಲೆಗಳಲ್ಲೂ ಬಿಬಿಎಂಪಿ ಆಟದ ಮೈದಾನ ಎಂದೇ ಇದೆ. ಮೈದಾನ ನಮ್ಮ ಸುಪರ್ದಿಯಲ್ಲೇ ಇದೆ. ಆದರೆ, 1964ರಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಅಧಿಕೃತ ಪ್ರತಿ ಇಲ್ಲ. ಹೀಗಾಗಿ ಗೊಂದಲ ಇದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು
ಹೇಳಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳ ಖಾತೆಯನ್ನು ಪಾಲಿಕೆಯೇ ನಿರ್ವಹಿಸುತ್ತದೆ. ಅದನ್ನು ತರಿಸಿ ನೋಡಿದ್ದೇನೆ. 306 ಚದರ ಅಡಿ ಜಾಗದಲ್ಲಿ ನಿರ್ಮಲ ಶೌಚಾಲಯ(2005ರಲ್ಲಿ ನಿರ್ಮಿಸಲಾಗಿದೆ), ಉಳಿದ 95,929 ಚದರ ಅಡಿ ಆಟದ ಮೈದಾನ ಎಂದಿದೆ. ಅದರ ನಡುವೆ ಬೇರೆ ಶಾಯಿಯಲ್ಲಿ, ಬೇರೆ ಹಸ್ತಾಕ್ಷರದಲ್ಲಿ ಈದ್ಗಾ ಮೈದಾನ ಎಂದು ಸೇರಿಸಲಾಗಿದೆ. ‘ದರ್ಗಾ’ ಎಂದೂ ಬರೆಯ
ಲಾಗಿದ್ದು, ಇದೆಲ್ಲವನ್ನೂ ಸೇರಿಸಿ 2012–13ರಲ್ಲಿ ಖಾತಾ ಪ್ರತಿಯೊಂದನ್ನು ವಿತರಿಸಲಾಗಿದೆ. ಈದ್ಗಾ ಮೈದಾನ ಎಂಬ ಪದವನ್ನು ಏಕೆ ಸೇರ್ಪಡೆ ಮಾಡಲಾಯಿತು ಎಂಬುದಕ್ಕೆ ಆಧಾರವಿಲ್ಲ’ ಎಂದರು.

‘ಈಗ ಜಾಗದ ಮಾಲೀಕತ್ವದ ಬಗ್ಗೆ ಹಕ್ಕು ಮಂಡಿಸುತ್ತಿರುವ ವಕ್ಫ್ ಮಂಡಳಿ ಬಳಿ ದಾಖಲೆಗಳಿದ್ದರೆ ಸಲ್ಲಿಸಲಿ. ಅರ್ಧ ಸತ್ಯದ ಮೇಲೆ ಯಾವುದೇ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಸುಪ್ರೀಂ ಕೋರ್ಟ್‌ ಆದೇಶದ ಅಧಿಕೃತ ಪ್ರತಿ ತರಿಸಿಕೊಂಡು ಕಾನೂನು ಸಲಹೆ ಪಡೆದು ಮುಂದುವರಿಯುತ್ತೇವೆ’ ಎಂದು ಹೇಳಿದರು.

‘ಮೈದಾನದಲ್ಲಿ ವರ್ಷಕ್ಕೆ ಎರಡು ದಿನ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಿ ಬಾಕಿ ದಿನಗಳಂದು ಸಭೆ–ಸಮಾರಂಭ ನಡೆಸಲು ಅನುಮತಿ ನೀಡುವ ಬಗ್ಗೆ ಪಶ್ಚಿಮ ವಲಯದ ಜಂಟಿ ಆಯುಕ್ತರು ನಿರ್ಧಾರ ಕೈಗೊಳ್ಳುತ್ತಾರೆ. ಪೊಲೀಸ್ ಪೊಲೀಸ್ ಮತ್ತು ಗುಪ್ತಚರ ಇಲಾಖೆಯ ಸಲಹೆಯನ್ನೂ ಪಡೆದು ಮುಂದುವರಿಯುತ್ತಾರೆ’ ಎಂದು ತಿಳಿಸಿದರು.

‘ಬಿಬಿಎಂಪಿಯೇ ದಾಖಲೆ ಒದಗಿಸಲಿ’
‘2 ಎಕರೆ 10 ಗುಂಟೆ ವಿಸ್ತೀರ್ಣದ ಈದ್ಗಾ ಮೈದಾನ ವಕ್ಫ್ ಮಂಡಳಿ ಆಸ್ತಿ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ನಮ್ಮ ಬಳಿ ಇದೆ’ ಎಂದು ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್.ಕೆ. ಷಾಫಿ ಸಾ– ಆದಿ ಹೇಳಿದರು.

‘1879ರಿಂದಲೂ ‘ಸುನ್ನಿ ಈದ್ಗಾ ಚಾಮರಾಜಪೇಟೆ’ ಎಂಬ ದಾಖಲೆಗಳಿವೆ. ‘ದರ್ಗಾ’ ಹೆಸರಿನಲ್ಲಿ ಖಾತಾ ಕೂಡ ಆಗಿದೆ. ಸರ್ವೆ ಮಾಡಿ ಗಡಿಯನ್ನು ಗುರುತಿಸಲಾಗಿದೆ. ನಮ್ಮ ಬಳಿ ಇರುವ ದಾಖಲೆಗಳನ್ನು ಬಿಬಿಎಂಪಿಗೆ ಕೊಡುವ ಅಗತ್ಯವಿಲ್ಲ. ಪಾಲಿಕೆಗೆ ಸೇರಿದ ಆಸ್ತಿ ಎಂಬುದಕ್ಕೆ ಅವರ ಬಳಿ ದಾಖಲೆ ಇದ್ದರೆ ನಮಗೆ ಸಲ್ಲಿಸಲಿ’ ಎಂದರು.

*
ಈದ್ಗಾ ಮೈದಾನದಲ್ಲಿ ವರ್ಷದಲ್ಲಿ ಎರಡು ದಿನ ಮಾತ್ರ ನಮಾಜ್‌ಗೆ ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಇಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಬಂದಿರುವ ಮನವಿ ಪರಿಶೀಲಿಸಲಾಗುತ್ತದೆ.
-ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT