ಬುಧವಾರ, ಫೆಬ್ರವರಿ 26, 2020
19 °C
ಕೆಆರ್‌ಡಿಸಿಎಲ್‌ ವಿರುದ್ಧ ಪರಿಸರವಾದಿಗಳು, ನಾಗರಿಕ ಸಂಘಟನೆಗಳ ಆಕ್ರೋಶ

8 ಸಾವಿರ ಮರಗಳಿಗೆ ಕೊಡಲಿ?

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್‌ಡಿಸಿಎಲ್‌) ರಸ್ತೆಗಳ ವಿಸ್ತರಣೆಗಾಗಿ ಎಂಟು ಸಾವಿರಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲು ಮುಂದಾಗಿದೆ. ಆದರೆ, ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಕೇಳಿಲ್ಲ ಎಂದು ವಿವಿಧ ನಾಗರಿಕ ಸಂಘಟನೆಗಳು ಆರೋಪ ಮಾಡಿವೆ.  

‘ನಿಗಮದ ವೆಬ್‌ಸೈಟ್‌ನಲ್ಲಿಯೇ ಈ ಮಾಹಿತಿ ಇದೆ. ನೂರಾರು ವರ್ಷ ಹಳೆಯ, 15ರಿಂದ 20 ಅಡಿ ವಿಸ್ತಾರವಿರುವ ಮರಗಳನ್ನು ರಸ್ತೆ ವಿಸ್ತರಣೆ ನೆಪದಲ್ಲಿ ಕಡಿಯಲಾಗುತ್ತಿದೆ. ಸ್ಥಳೀಯರ ಅಭಿಪ್ರಾಯ ಪಡೆಯದೆ, ರಸ್ತೆ ವಿಸ್ತರಣೆ ಅವಶ್ಯವೇ ಇರದಿದ್ದರೂ ಈ ಕಾರ್ಯ ಮಾಡಲಾಗುತ್ತಿದೆ’ ಎಂದು ಸಿಟಿಜನ್ಸ್‌ ಅಜೆಂಡಾ ಫಾರ್ ಬೆಂಗಳೂರು ಸಂಸ್ಥೆಯ ಸ್ಥಾಪಕ ಸಂದೀಪ್‌ ಅನಿರುದ್ಧನ್‌ ದೂರುತ್ತಾರೆ. 

‘ಮರಗಳನ್ನು ಗುರುತಿಸುವ, ಕಡಿಯುವ ಪ್ರಕ್ರಿಯೆಯಲ್ಲಿಯೇ ದೋಷವಿದೆ. ಸಮಗ್ರ ಸಂಚಾರ ಯೋಜನೆಯಡಿಯಲ್ಲಿಯೇ (ಸಿಎಂಪಿ) ಈ ಪ್ರಕ್ರಿಯೆ ಅಕ್ರಮವಾಗಿ ನಡೆಯುತ್ತಿದೆ. ಮುಖ್ಯವಾಗಿ, ಪರಿಷ್ಕೃತ ನಗರ ಮಹಾಯೋಜನೆ (ಆರ್‌ಎಂಪಿ) ಅಡಿ ಇದನ್ನು ಮಾಡಬೇಕಿತ್ತು. ಸ್ಥಳೀಯರೊಂದಿಗೆ ಚರ್ಚಿಸಿ, ಯಾವ ರಸ್ತೆ, ಎಷ್ಟು ಅಗಲ ಬರಬೇಕು ಎಂದು ಚರ್ಚಿಸಿ ನಿರ್ಧಾರಿಸಬೇಕು’ ಎಂದರು. 

‘ಗ್ರಾಮಸಭಾದಿಂದ ಹಿಡಿದು ಏರಿಯಾ ಸಭಾ, ವಾರ್ಡ್‌ ಕಮಿಟಿಯ ಸಲಹೆ ಪಡೆದು, ಯಾವ ರಸ್ತೆ ವಿಸ್ತರಣೆ ಮಾಡಬೇಕು, ಯಾವುದೇ ಬೇಡ ಎಂಬ ಬಗ್ಗೆ ಸಲಹೆ ಸೂಚನೆ ಪಡೆದು ನಿರ್ಧರಿಸಬೇಕು. ಮಹಾನಗರ ಪಾಲಿಕೆ ಕಾಯ್ದೆಯಡಿ 24ನೇ ತಿದ್ದುಪಡಿಯಲ್ಲಿ ಈ ಬಗ್ಗೆ ನಿರ್ದಿಷ್ಟವಾಗಿ ಹೇಳಿದ್ದಾರೆ. ಹೈಕೋರ್ಟ್‌ ಕೂಡ ಇದನ್ನೇ ಹೇಳಿದೆ. ಈ ಎಲ್ಲ ಸಮಿತಿಗಳ ಜೊತೆಗೆ ಮಹಾನಗರ ಯೋಜನಾ ಸಮಿತಿ ಸೇರಿಕೊಂಡು ನಗರಕ್ಕೆ ಸಮಗ್ರ ಯೋಜನೆ ರೂಪಿಸಬೇಕು. ಆದರೆ, ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಸಾವಿರಾರು ಮರಗಳನ್ನು ಕಡಿಯಲು  ಕೆಆರ್‌ಡಿಸಿಎಲ್‌ ಮುಂದಾಗಿರುವುದು ಪ್ರಜಾಸತ್ತಾತ್ಮಕ ವಿರೋಧಿ ನಡೆ’ ಎಂದು ಅವರು ಹೇಳಿದರು. ‘ಟಿಂಬರ್‌ ಲಾಬಿ ಮತ್ತು ಗುತ್ತಿಗೆ ದಾರರ ಲಾಬಿಗೆ ಮಣಿದು ಕೆಆರ್‌ಡಿಸಿಎಲ್‌ ಈ ಕ್ರಮಕ್ಕೆ ಮುಂದಾಗಿದೆ’ ಎಂದು ದೂರಿದರು.

‘ವರ್ತೂರು ಸೇರಿದಂತೆ ಹಲವು ಕಡೆ ಹೊಸ ರಸ್ತೆಗಳು ನಿರ್ಮಾಣವಾಗಿದ್ದರೂ ವಿಸ್ತರಣೆ ನೆಪದಲ್ಲಿ ಮರಗಳನ್ನು ಕಡಿಯಲು ನಿಗಮ ಮುಂದಾಗಿದೆ. ಇದಕ್ಕಾಗಿ ಸಮಗ್ರ ಯೋಜನಾ ವರದಿಯನ್ನೂ ರೂಪಿಸಿಲ್ಲ. ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ನಾವೆಲ್ಲರೂ ನಿರ್ಧರಿಸಿದ್ದೇವೆ’ ಎಂದೂ ಸಂದೀಪ್‌ ಹೇಳಿದರು.

***

ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಬಾರದು ಎಂದು ಅರಣ್ಯ ಸಚಿವರು ಸ್ಪಷ್ಟ ಸೂಚನೆ ನೀಡಿದ್ದಾರೆ. ಹೀಗಾಗಿ, ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ

- ಬಿ.ಎಸ್. ಶಿವಕುಮಾರ್, ಕೆಆರ್‌ಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು