ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪುರ ಮೇಲ್ಸೇತುವೆ: ಟೆಂಡರ್‌ ಮತ್ತೆ ವಿಳಂಬ- ಬಿಬಿಎಂಪಿ ಭರವಸೆ ಹುಸಿ

ಬಿಬಿಎಂಪಿ ಭರವಸೆ ಹುಸಿ: ಕೋರಮಂಗಲ ನಾಗರಿಕರ ಆಕ್ರೋಶ; ಹೋರಾಟಕ್ಕೆ ಸಜ್ಜು
Last Updated 5 ಫೆಬ್ರುವರಿ 2023, 19:04 IST
ಅಕ್ಷರ ಗಾತ್ರ

ಬೆಂಗಳೂರು: ಕೋರಮಂಗಲ ಹೊರ ವರ್ತುಲ ರಸ್ತೆ ಎಲಿವೇಟೆಡ್‌ ಕಾರಿಡಾರ್‌ ಯೋಜನೆ (ಈಜಿಪುರ ಮೇಲ್ಸೇತುವೆ) ಟೆಂಡರ್‌ ಪ್ರಕ್ರಿಯೆ ಮತ್ತೆ ವಿಳಂಬವಾಗಿದೆ.

ಎರಡು ಬಾರಿ ರದ್ದು ಮಾಡಿ ಮೂರನೇ ಬಾರಿಗೆ ಕರೆಯಲಾಗಿರುವ ಟೆಂಡರ್‌ ಅಂತಿಮಗೊಳಿಸಲು ಸಮಯ ಮೀರಿದ್ದರೂ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾಗರಿಕರು ಮತ್ತೆ ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿದ್ದಾರೆ.

2017ರಲ್ಲಿ ಆರಂಭವಾಗಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿ, ಗುತ್ತಿಗೆದಾರರ ವಿಳಂಬದಿಂದ ಸಾಕಷ್ಟು ಹಿನ್ನಡೆ ಅನುಭವಿಸಿತು. ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತು. ಕೊನೆಗೆ ಬಿಬಿಎಂಪಿ ಗುತ್ತಿಗೆಯನ್ನು 2022ರ ಮಾರ್ಚ್‌ 9ರಂದು ರದ್ದುಪಡಿಸಿತು. ಹೈಕೋರ್ಟ್‌ ಮೂರು ತಿಂಗಳಲ್ಲಿ ಮರು ಟೆಂಡರ್‌ ಕರೆದು ಕಾಮಗಾರಿ ಆರಂಭಿಸಬೇಕು. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿತು. ಇದಾಗಿ ಒಂದು ವರ್ಷವಾದರೂ ಟೆಂಡರ್‌ ಪ್ರಕ್ರಿಯೆಯನ್ನೇ ಬಿಬಿಎಂಪಿ ಪೂರ್ಣಗೊಳಿಸಿಲ್ಲ.

ಅಕ್ಟೋಬರ್‌ನಲ್ಲಿ ಒಂದು ಬಾರಿ, ಜನವರಿಯಲ್ಲಿ ಎರಡನೇ ಬಾರಿ ಟೆಂಡರ್‌ ಅನ್ನು ಬಿಬಿಎಂಪಿ ರದ್ದುಗೊಳಿಸಿತು. ನಿವಾಸಿಗಳ ಆಗ್ರಹ ಹೆಚ್ಚಾದಾಗ, ಡಿಸೆಂಬರ್‌ನಲ್ಲಿ ನಡೆದ ನಾಗರಿಕರ ಸಭೆಯಲ್ಲಿ ‘ಫೆಬ್ರುವರಿಯಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ದಕ್ಷಿಣ ವಲಯದ ಜಂಟಿ ಆಯುಕ್ತರು ಹಾಗೂ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ವಿನಾಯಕ ಎಸ್‌. ಸೂಗೂರ ಭರವಸೆ ನೀಡಿದ್ದರು.

ಮೂರನೇ ಬಾರಿಗೆ ಜ.6ರಂದು ಟೆಂಡರ್‌ ಕರೆಯಲಾಗಿತ್ತು. 25ರಂದು ಅದನ್ನು ತೆರೆಯಬೇಕಾಗಿತ್ತು. ಆದರೆ ಫೆ.4ರಂದು ಅದನ್ನು ತೆರೆಯಲಾಗಿದೆ. ಅದೂ ಇನ್ನೂ ಸಮಿತಿ ಮುಂದೆ ಹೋಗಿ, ಅನುಮತಿ ಪಡೆಯಬೇಕಾಗಿದೆ. ಹೀಗಾಗಿ ಇನ್ನಷ್ಟು ವಿಳಂಬ ಮಾಡುವ ಉದ್ದೇಶವಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.

ಹೆಚ್ಚು ವೆಚ್ಚ: ಈಜಿಪುರ ಮೇಲ್ಸೇತುವೆ 2.5 ಕಿ.ಮೀ. ಉದ್ದದ ಕಾರಿಡಾರ್‌ ಆಗಿದ್ದು, 2014ರಲ್ಲಿ ಇದರ ಯೋಜನೆ ರೂಪಿಸಲಾಗಿತ್ತು. 2017ರಲ್ಲಿ ₹157.66 ಕೋಟಿಗೆ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. 2019ರೊಳಗೆ ಯೋಜನೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಗುತ್ತಿಗೆದಾರರು ವಿಳಂಬ ಮಾಡಿದರು. ನಾಲ್ಕು ವರ್ಷ ಏಳು ತಿಂಗಳಾದರೂ ಶೇ 42ರಷ್ಟು ಮಾತ್ರ ಕಾಮಗಾರಿ ಮುಗಿದಿತ್ತು. ₹75.11 ಕೋಟಿ ಹಣವನ್ನೂ ಅವರಿಗೆ ಪಾವತಿ ಮಾಡಲಾಗಿತ್ತು. ಈಗ ಉಳಿದ ಕಾಮಗಾರಿಗೆ ₹143.80 ಕೋಟಿ ವೆಚ್ಚ ಮಾಡಲಾಗುತ್ತಿದೆ. ಟರ್ನ್‌ಕೀ ಯೋಜನೆಯಾಗಿದ್ದು, ಮೊತ್ತವನ್ನು ಹೆಚ್ಚಿಸಲಾಗುವುದಿಲ್ಲ. 15 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಬೇಕೆಂಬ ಷರತ್ತು ವಿಧಿಸಲಾಗಿದೆ. ₹157 ಕೋಟಿ ಯೋಜನೆ ಇದೀಗ ₹218 ಕೋಟಿಗೆ ತಲುಪಿದೆ. ಈಗ ಇದು ಆರಂಭವಾಗದಿದ್ದರೆ, ಮತ್ತಷ್ಟು ಕೋಟಿ ಹೆಚ್ಚು ವ್ಯಯವಾಗಲಿದೆ ಎಂಬ ಆತಂಕವೂ ಇದೆ.

ಒಂದು ವಾರದ ಗಡುವು...

‘ಬಿಬಿಎಂಪಿಯವರು ಸ್ಥಳೀಯರ ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಅರ್ಧಕ್ಕೆ ನಿಂತಿರುವ ಮೇಲ್ಸೇತುವೆಯಿಂದ ಇದು ಕಸದ ಗುಂಡಿಯಾಗಿದೆ. ಹೈಕೋರ್ಟ್‌ ಆದೇಶಕ್ಕೂ ಬಿಬಿಎಂಪಿ ಅಧಿಕಾರಿಗಳು ಮಣಿದಿಲ್ಲ. ಅವರದ್ಧೇ ಆಟವಾಗಿದೆ. ಏನು ರಾಜಕೀಯವೋ.. ನಾಗರಿಕರು ಮಾತ್ರ ಸಂಕಷ್ಟದಲ್ಲಿದ್ದಾರೆ. ಈ ವಾರ ಮಾತ್ರ ಕಾದು ನೋಡುತ್ತೇವೆ. ಕಾಮಗಾರಿ ಆರಂಭಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಕೋರಮಂಗಲ ಎಸ್‌ಟಿ ಬೆಡ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ ಬಾಬು ಹೇಳಿದರು.

3–4 ದಿನದಲ್ಲಿ ನಿರ್ಧಾರ...

‘ಬಿಬಿಎಂಪಿ ಟೆಂಡರ್‌ ಪ್ರಕ್ರಿಯೆಯಲ್ಲಿ ತೊಡಗಿದೆ. ಮೂರ್ನಾಲ್ಕು ದಿನದಲ್ಲಿ ಟೆಂಡರ್‌ ಅನುಮೋದನೆಗೆ ಸಮಿತಿ ಮುಂದಿರಿಸಲಾಗುತ್ತದೆ. ಅಲ್ಲಿನ ನಿರ್ಧಾರದಂತೆ ಮುಂದುವರಿಯಲಾಗುತ್ತದೆ’ ಎಂದು ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ವಿನಾಯಕ ಎಸ್‌. ಸುಗೂರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT