ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿ ಟೆಂಡರ್‌ ನಾಲ್ಕನೇ ಬಾರಿಯೂ ವಿಳಂಬ!

ಎಕ್ಸ್‌ಪ್ರೆಸ್‌ ವೇ ಪೂರೈಸಿದವರಿಗೆ 2.5 ಕಿ.ಮೀ ಮೇಲ್ಸೇತುವೆ ನಿರ್ಮಿಸಲಾಗಿಲ್ಲ: ಆಕ್ರೋಶ
Last Updated 28 ಮಾರ್ಚ್ 2023, 15:44 IST
ಅಕ್ಷರ ಗಾತ್ರ

ಬೆಂಗಳೂರು: ಈಜಿಪುರ ಮೇಲ್ಸೇತುವೆ ಬಾಕಿ ಉಳಿದಿರುವ ಕಾಮಗಾರಿಗೆ ನಾಲ್ಕನೇ ಬಾರಿಗೆ ಕರೆಯಲಾಗಿರುವ ಟೆಂಡರ್‌ ಪ್ರಕ್ರಿಯೆಯೂ ವಿಳಂಬವಾಗಿದೆ.

ಬಿಬಿಎಂಪಿ ಮಾರ್ಚ್‌ 1ರಂದು ನಾಲ್ಕನೇ ಬಾರಿಗೆ ಟೆಂಡರ್‌ ಆಹ್ವಾನಿಸಿತ್ತು. 17ರಂದು ತಾಂತ್ರಿಕ ಬಿಡ್‌ ತೆರೆದು ಈ ವೇಳೆಗಾಗಲೇ ಎಲ್ಲ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಬೇಕಿತ್ತು. ಆದರೆ, ಮೊತ್ತ ಕಡಿಮೆ ಮಾಡಲು ಈವರೆಗೆ ಏಕೈಕ ಬಿಡ್‌ದಾರರೊಂದಿಗೆ ಮಾತುಕತೆಯನ್ನು ಎಂಜಿನಿಯರ್‌ಗಳು ಪೂರ್ಣಗೊಳಿಸಿಲ್ಲ.

2017ರಲ್ಲಿ ಈಜಿಪುರ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದ್ದು, ಗುತ್ತಿಗೆದಾರರ ವಿಳಂಬದಿಂದ ‌ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತು. ‌ಬಿಬಿಎಂಪಿ ಗುತ್ತಿಗೆಯನ್ನು 2022ರ ಮಾರ್ಚ್‌ 9ರಂದು ರದ್ದುಪಡಿಸಿತು. ಹೈಕೋರ್ಟ್‌ ಮೂರು ತಿಂಗಳಲ್ಲಿ ಮರು ಟೆಂಡರ್‌ ಕರೆದು ಕಾಮಗಾರಿ ಆರಂಭಿಸಬೇಕು ಎಂದು ತಾಕೀತು ಮಾಡಿತು. ಇದಾಗಿ ಒಂದು ವರ್ಷವಾದರೂ ಟೆಂಡರ್‌ ಪ್ರಕ್ರಿಯೆಯನ್ನೇ ಬಿಬಿಎಂಪಿ ಇನ್ನೂ ಪೂರ್ಣಗೊಳಿಸಿಲ್ಲ.

‘ಬಾಕಿ ಉಳಿದಿರುವ ಮೇಲ್ಸೇತುವೆಯನ್ನು ಕೂಡಲೇ ನಿರ್ಮಿಸಬೇಕು’ ಎಂದು ಸ್ಥಳೀಯರು ಮೂರ್ನಾಲ್ಕು ಬಾರಿ ಹೋರಾಟವನ್ನೂ ಮಾಡಿದ್ದಾರೆ. ‘ಮಾರ್ಚ್‌ 20ರಂದು ತೆರೆದ ಬೃಹತ್‌ ಟೆಂಡರ್‌ಗಳೆಲ್ಲವೂ ಅನುಮೋದನೆಯಾಗಿ, ಕಾರ್ಯಾದೇಶ ನೀಡಲಾಗಿದೆ. ಆದರೆ, ಅದಕ್ಕಿಂತ ಮುನ್ನ ತೆರೆದ ಈಜಿಪುರ ಮೇಲ್ಸೇತುವೆಯ ಟೆಂಡರ್‌ ಪ್ರಕ್ರಿಯೆಯನ್ನು ಎಂಜಿನಿಯರ್‌ಗಳೂ ಪೂರೈಸುತ್ತಿಲ್ಲ’ ಎಂದು ನಾಗರಿಕರು ದೂರಿದರು.

‘ನಾಲ್ಕು ವರ್ಷಗಳಲ್ಲಿ ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ನಿರ್ಮಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ, ಏಳು ವರ್ಷದಿಂದ 2.5 ಕಿ.ಮೀ ಮೇಲ್ಸೇತುವೆಯನ್ನು ನಿರ್ಮಿಸಲಾಗಿಲ್ಲ. ಯಾರು ಯಾವ ರೀತಿಯ ಕ್ರೆಡಿಟ್‌ ಅನ್ನಾದರೂ ತೆಗೆದುಕೊಳ್ಳಲಿ. ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ಮುಗಿಸಿ ಸ್ಥಳೀಯ ಜನರ ಸಂಕಷ್ಟವನ್ನು ಪರಿಹರಿಸಲಿ’ ಎಂದು ಕೋರಮಂಗಲ ಎಸ್‌ಟಿ ಬೆಡ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ ಬಾಬು ಹೇಳಿದರು.

‘ಚುನಾವಣೆ ನೀತಿ ಸಂಹಿತೆ ಇದಕ್ಕೆ ಅಡ್ಡಿ ಬರುವುದಿಲ್ಲ, ಈ ಬಾರಿ ಟೆಂಡರ್‌ ಅಂತಿಮಗೊಳಿಸಿ ಕಾಮಗಾರಿ ಆರಂಭಿಸುತ್ತೇವೆ ಎಂದು ಮುಖ್ಯ ಆಯುಕ್ತರು, ಎಂಜಿನಿಯರ್‌ಗಳು ಭರವಸೆ ನೀಡಿದ್ದಾರೆ. ಇನ್ನೊಂದೆರಡು ದಿನ ಕಾದುನೋಡಿ ನಂತರ ನಿವಾಸಿಗಳು ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

ಮಾತುಕತೆ ನಡೆದಿದೆ: ಮುಖ್ಯ ಎಂಜಿನಿಯರ್‌

‘ಕಳೆದ ಬಾರಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್‌ ಮಾಡಿದ್ದರಿಂದ ಟೆಂಡರ್‌ ಪ್ರಕ್ರಿಯೆಯನ್ನು ಸರ್ಕಾರ ರದ್ದುಪಡಿಸಲು ಸೂಚಿಸಿತ್ತು. ಅದರಂತೆ ರದ್ದು ಮಾಡಿ, ಹೊಸದಾಗಿ ಟೆಂಡರ್‌ ಕರೆಯಲಾಗಿತ್ತು. ಇಬ್ಬರು ಗುತ್ತಿಗೆದಾರರು ಬಿಡ್‌ ಮಾಡಿದ್ದರು. ಅದರಲ್ಲಿ ಒಬ್ಬರಿಗೆ ಅರ್ಹತೆ ಇರಲಿಲ್ಲ. ಹೀಗಾಗಿ, ಒಬ್ಬರೇ ಗುತ್ತಿಗೆದಾರರು ಪ್ರಕ್ರಿಯೆಯಲ್ಲಿದ್ದು, ಅವರು ಹೆಚ್ಚಿನ ಮೊತ್ತ ದಾಖಲಿಸಿದ್ದಾರೆ. ಅವರು ದಾಖಲಿಸಿರುವ ಮೊತ್ತವನ್ನು ಕಡಿಮೆ ಮಾಡಲು ಮನವಿ ಮಾಡಲಾಗಿದೆ. ಅವರು ಅದಕ್ಕೆ ಸಮ್ಮತಿಸಿದ ಮೇಲೆ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಒಪ್ಪಿಗೆ ಬಂದ ಮೇಲೆ ಕಾಮಗಾರಿ ಆರಂಭಿಸಲಾಗುತ್ತದೆ. ಇದು ಮುಂದುವರಿದ ಕಾಮಗಾರಿಯಾಗಿರುವುದರಿಂದ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ’ ಎಂದು ಬಿಬಿಎಂಪಿ ಯೋಜನೆ ಇಲಾಖೆಯ ಮುಖ್ಯ ಎಂಜಿನಿಯರ್‌ ವಿನಾಯಕ ಸೂಗೂರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT