ಬೆಂಗಳೂರು: ಜಾಲಹಳ್ಳಿ ವಾಯುನೆಲೆ ವ್ಯಾಪ್ತಿಯಲ್ಲಿ ಈಚೆಗೆ ಬೀದಿ ನಾಯಿಗಳ ದಾಳಿಯಿಂದ ವೃದ್ಧೆಯೊಬ್ಬರು ಮೃತಪಟ್ಟ ಸಂಬಂಧ ಲೋಕಾಯುಕ್ತವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಕರ್ತವ್ಯ ಲೋಪದ ಸಂಬಂಧ ಬಿಬಿಎಂಪಿಯ ಎಂಟು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
‘ಇದೇ ಆಗಸ್ಟ್ 29ರಂದು ವಾಯುನೆಲೆ ಕ್ಯಾಂಪಸ್‌ನ ಸಾರ್ವಜನಿಕ ರಸ್ತೆಯಲ್ಲಿ ಬೆಳಿಗ್ಗೆ 6.30ರ ವೇಳೆಗೆ ವಾಯುವಿಹಾರಕ್ಕೆ ತೆರಳಿದ್ದ ನಿವೃತ್ತ ಶಿಕ್ಷಕಿ ರಾಜದುಲಾರಿ ಸಿನ್ಹಾ (76) ಅವರ ಮೇಲೆ ಹಲವು ಬೀದಿ ನಾಯಿಗಳು ದಾಳಿ ನಡೆಸಿದ್ದವು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಈ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದ್ದಾರೆ.
ಬೀದಿ ನಾಯಿಗಳ ಸಂತಾನ ಮತ್ತು ಹಾವಳಿ ನಿಯಂತ್ರಣ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಂದ ಲೋಪವಾಗಿದೆ. ಅಲ್ಲದೇ ಶಿಕ್ಷಕಿ ಮೃತಪಟ್ಟ ಪ್ರಕರಣದ ಸಂಬಂಧ ಈವರೆಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ವಿವರಿಸಿ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ, ಯಲಹಂಕ ವಲಯ ಆಯುಕ್ತ, ಯಲಹಂಕ ವಲಯ ಜಂಟಿ ಆಯುಕ್ತ ಸೇರಿ ಎಂಟು ಅಧಿಕಾರಿಗಳಿಗೆ ಲೋಕಾಯಕ್ತ ನೋಟಿಸ್ ನೀಡಿದೆ.
ಪಿಡಿಒಗಳಿಗೆ ನೋಟಿಸ್: ಕರ್ತವ್ಯ ಲೋಪದ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಸನಪುರ ಮತ್ತು ಅಡಕಮಾರನಹಳ್ಳಿ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಈಚೆಗೆ ಭೇಟಿ ನೀಡಿದ್ದ ವೇಳೆ ಎರಡೂ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ನಗದು ವಹಿ ನಿರ್ವಹಣೆ ಮಾಡದೇ ಇರುವುದು ಪತ್ತೆಯಾಗಿತ್ತು. ಜತೆಗೆ ನಮೂದು ಮಾಡದೇ ಇದ್ದ ಹಣ ಪತ್ತೆಯಾಗಿತ್ತು. ಸುಮಾರು ₹16.50 ಕೋಟಿ ತೆರಿಗೆ ಸಂಗ್ರಹ ಮಾಡದೇ ಇರುವುದು ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾಗಿತ್ತು.
ಈ ಸಂಬಂಧ ವಿವರ ನೀಡುವಂತೆ ಪಿಡಿಒ ಮತ್ತು ಇತರ ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದು, ಅಕ್ಟೋಬರ್ 15ರ ಒಳಗೆ ವಿವರ ಸಲ್ಲಿಸುವಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.