ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಎಸ್‌ಎಸ್‌, ಎನ್‌ಸಿಸಿ ಕಡ್ಡಾಯ ಆಗಲಿ: ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

Last Updated 9 ಅಕ್ಟೋಬರ್ 2018, 19:23 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ಪದವಿ ಪಡೆಯಬೇಕಾದರೆ ಎನ್ಎಸ್ಎಸ್, ಎನ್‌ಸಿಸಿ ಅಥವಾ ಸ್ಕೌಟ್ಅಂಡ್ ಗೈಡ್ಸ್ ನಲ್ಲಿ ಯಾವುದಾದರೂ ಒಂದನ್ನು ಕಡ್ಡಾಯಗೊಳಿಸಬೇಕು ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.

ಸೆಂಟ್ರಲ್‌ ಕಾಲೇಜು ಸಭಾಂಗಣದಲ್ಲಿ ವಿ.ಪಿ. ದೀನದಯಾಳು ನಾಯ್ದು ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಜನತೆಯಲ್ಲಿ ಶಿಸ್ತು, ಮಾನವೀಯತೆ ರೂಢಿಸಲು ಇದು ಅಗತ್ಯ ಎಂದು ಪ್ರತಿಪಾದಿಸಿದರು.

ಕ್ಯಾಲಿಬರ್, ಕ್ಯಾರೆಕ್ಟರ್, ಕಾಂಡೆಕ್ಟ, ಕೆಪಾಸಿಟಿ ಇರುವವರನ್ನು ನಾವು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಬೇಕು. ಆದರೆ, ದುರಾದೃಷ್ಟವೆಂದರೆ ಕ್ಯಾಸ್ಟ್, ಕಮ್ಯುನಿಟಿ, ಕ್ಯಾಷ್ ಮತ್ತು ಕ್ರಿಮಿನಾಲಿಟಿ ಇರುವವರೇ ಸಾರ್ವಜನಿಕ ಜೀವನದಲ್ಲಿ ಹೆಚ್ಚು ಬರುತ್ತಿದ್ದಾರೆ ಎಂದು ವಿಷಾದಿಸಿದರು.

ಹಲವಾರು ನಾಯ್ಡುಗಳು, ಗೌಡರು, ಶರ್ಮರು, ಶಾಸ್ತ್ರಿಗಳು, ನಾಯಕರು ಆಗಿ ಹೋದರು. ಆದರೆ, ನಾವು ಕೆಲವರನ್ನು ಮಾತ್ರ ಸ್ಮರಿಸಿಕೊಳ್ಳುತ್ತೇವೆ. ದೇಶಕ್ಕಾಗಿ ದುಡಿದವರು, ಮಡಿದವರನ್ನು ನೆನಪಿಸಿಕೋಳ್ಳುತೇವೆ. ದೀನದಯಾಳು ನಾಯ್ಡು ಅಂಥವರು ಎಂದರು.

ಈಗ ಶಾಲೆಗಳಲ್ಲಿ ವಿಜ್ಞಾನವಿದೆ. ಆದರೆ ಮೌಲ್ಯಗಳು ಹೊರಟು ಹೋಗಿದೆ. ಹೀಗಾಗಿ ಯುವಕರಲ್ಲಿ ಮೌಲ್ಯವನ್ನು ಉತ್ತೇಜಿಸಬೇಕಾಗಿದೆ. ಹವಾಮಾನ ಬದಲಾವಣೆ ಬಗ್ಗೆಯೂ ಪ್ರಸ್ತಾಪಿಸಿದ ವೆಂಕಯ್ಯ ನಾಯ್ಡು, ಪ್ರಕೃತಿಯ ಮೇಲೆ ದೌರ್ಜನ್ಯ ನಿಲ್ಲಬೇಕು. ನದಿ, ಕೆರೆ, ರಸ್ತೆ ಯಾವುದನ್ನು ಬಿಡದೆ ಒತ್ತುವರಿ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿಯೇ ತಮಿಳುನಾಡು, ಕೇರಳ, ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಅನಾಹುತಗಳಿಗೆಮಾನವ ನಿರ್ಮಿತ ದೋಷಗಳೇ ಕಾರಣ. ಬೆಂಗಳೂರಿನ ಪರಿಸ್ಥಿತಿಯೂ ಹಾಗೆ ಆಗುತ್ತಿದೆ. ಪೊಲ್ಯೂಷನ್, ಕಂಜೇಷನ್ ಸಾಮಾನ್ಯ ಎಂಬಂತಾಗಿದೆ. ಮೋದಿಯವರು ಸ್ಮಾರ್ಟ್ ಸಿಟಿ ಘೋಷಣೆ ಮಾಡಿದ ಕಾರಣಕ್ಕೆ ಬೆಂಗಳೂರು ಸ್ಮಾರ್ಟ್ ಸಿಟಿ ಆಗಲ್ಲ. ಕುಮಾರಸ್ವಾಮಿಯವರಿಂದಲೂ ಸಾಧ್ಯವಿಲ್ಲ. ಜನರ ಸಹಕಾರ ಬೇಕು. ಒತ್ತುವರಿ ಪ್ರವೃತ್ತಿ ನಿಲ್ಲಬೇಕು ಎಂದರು.

ಸ್ಕೌಟ್ ಆಂದೋಲನದಲ್ಲಿ ಕರ್ನಾಟಕ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿದೆ. ದೀನದಯಾಳು ನಾಯ್ಡು ಆರಂಭಿಸಿದ ಇದನ್ನು ಈಗ ಪಿಜಿಆರ್ ಸಿಂಧ್ಯಾ ಮುಂದುವರಿಸಿದ್ದಾರೆ ಎಂದು ಬಣ್ಣಿಸಿದರು.

ರಾಜ್ಯಪಾಲವಜುಭಾಯಿ ವಾಲಾ ಮಾತನಾಡಿ, ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ವ್ಯಕ್ತಿಯ ಸ್ಮರಣಾರ್ಥ ನೀವೆಲ್ಲ ಬಂದಿದ್ದೀರಿ. ಅದಕ್ಕೆ ಅಭಿನಂದನೆಗಳು. ಇದು ಯಾವುದೋ ಮ್ಯೂಸಿಕಲ್ ನೈಟ್ ಅಥವಾ ಮನರಂಜನಾ ಕಾರ್ಯಕ್ರಮವಲ್ಲ. ಮಹಾನ್ ವ್ಯಕ್ತಿಯೊಬ್ಬರ ಜನ್ಮಶತಾಬ್ದಿ. ಕಬ್ಬಿಣವನ್ನು ಸ್ಪರ್ಷ ಮಣಿ ಸ್ಪರ್ಶಿಸಿದರೆ ಕಬ್ಬಿಣವೂ ಬಂಗಾರವಾಗುತ್ತದೆ. ಹಾಗೆ ಗಣ್ಯರು, ತ್ಯಾಗಿಗಳ ಜೀವನಸ್ಮರಣೆಯಿಂದಲೇ ಹಲವರ ಜೀವನ ಪರಿವರ್ತನೆ ಆಗುತ್ತದೆ ಎಂದರು.

ಈ ರಾಷ್ಟ್ರದಲ್ಲಿ ಹಲವರು ಬದುಕುತ್ತಾರೆ, ಸಾಯುತ್ತಾರೆ. ಆದರೆ ಎಲ್ಲರನ್ನೂ ಸ್ಮರಿಸಿಕೊಳ್ಳಲ್ಲ. ಯಾರು ದೇಶಕ್ಕಾಗಿ ದುಡಿಯುತ್ತಾರೋ ಮಡಿಯುತ್ತಾರೋ ಅವರು ಮಾತ್ರ ಅಮರರಾಗುತ್ತಾರೆ. ಯುವ‌ಜನತೆಗೆ ಯಾವುದೇ ಕಾರ್ಯ ಅಸಾಧ್ಯವಲ್ಲ. ಬೆಟ್ಟವನ್ನು ಕುಟ್ಡಿ ಪುಡಿ ಮಾಡಬಲ್ಲರು. ತೂಫಾನನ್ನು ಎದುರಿಸಿ ನಿಲ್ಲಬಲ್ಲರು. ಅಂತಹ ಯುವ ಶಕ್ತಿ ರಾಷ್ಟ್ರಕ್ಕಾಗಿ ಬಳಕೆಯಾಗುವಂತಾಗಬೇಕು ಎಂದು ಕರೆ ನೀಡಿದರು.

ಆರ್ಎಸ್ಎಸ್ ಸರ ಸಂಘಚಾಲಕ ಮೋಹನ್ ಭಾಗವತ್ಭಾಷಣವನ್ನು ಉಲ್ಲೇಖಿಸಿದ ಅವರು, ಆರ್ಎಸ್ಎಸ್ ಸಿದ್ಧಾಂತ ಒಪ್ಪುವವರನ್ನುಹಿಂದುತ್ವವಾದಿಗಳು ಎನ್ನುತ್ತಾರೆ. ಆದರೆ ಮೋಹನ್ ಭಾಗವತ್ ಹೇಳಿದ್ದಾರೆ, ಮೊದಲು ಭಾರತೀಯತೆ, ಭಾರತೀಯ ಸಂಸ್ಕೃತಿಯನ್ನು ಹೊಂದಬೇಕು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಆಗಲಿ ಅವರು ಮೊದಲು ಭಾರತೀಯರು ಎಂದು ಅರಿಯಬೇಕು ಎಂದಿದ್ದಾರೆ ಎಂದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ವೆಂಕಯ್ಯ ನಾಯ್ಡು

ನಾಲ್ಕು ದಶಕಗಳ ಕಾಲ ನಾನು ಈ ರಾಜ್ಯದ ಜತೆ ಬಾಂಧವ್ಯ ಹೊಂದಿದ್ದೇನೆ. ಈ ರಾಜ್ಯದ ಜನತೆಗೆ ನಾನು ಆಭಾರಿಯಾಗಿದ್ದೇನೆ. ಇಂದು‌ ಮಹಾನ್ ವ್ಯಕ್ತಿ ವಿ.ಪಿ. ದೀನದಯಾಳು ನಾಯ್ಡು ಅವರ ಶತಮಾನೋತ್ಸವದಲ್ಲಿ ಭಾಗಿಯಾಗಲು ನನಗೆ ಸಂತೋಷವಾಗುತ್ತಿದೆ" ಎಂದು ಕನ್ನಡದಲ್ಲೇ ಹೇಳಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಗೈರು

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಕಾರ್ಯಕ್ರಮಕ್ಕೆ ಗೈರಾದರು. ಮುಖ್ಯಮಂತ್ರಿ ಪರವಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಭಾಗವಹಿಸಿದರು.

‘ಬೆಳಗ್ಗಿನಿಂದ ಮುಖ್ಯಮಂತ್ರಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣಕ್ಕೆ ಅವರಿಗೆ ಬರಲು ಸಾಧ್ಯವಾಗಿಲ್ಲ. ನನ್ನ ಮೂಲಕ ಸಂದೇಶ ಕಳುಹಿಸಿದ್ದಾರೆ’ ಎಂದು ಹೇಳಿ ಕಾಶೆಂಪೂರ, ಸಂದೇಶ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT