ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಸದಿದ್ದರೂ ಬಂತು ದುಬಾರಿ ಬಿಲ್‌: ಸಂಕಷ್ಟ ಕಾಲದಲ್ಲಿ ವಿದ್ಯುತ್‌ ಶುಲ್ಕ ‘ಬರೆ’

ಬಳಸಿದ ಯುನಿಟ್‌ ಆಧಾರದಲ್ಲಿ ಬಿಲ್‌ ನೀಡಲು ಆಗ್ರಹ
Last Updated 8 ಮೇ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಸ್ಥಗಿತಗೊಂಡಿದ್ದರೂ ಸರಾಸರಿ ಬಳಕೆ ಆಧಾರದ ಮೇಲೆ ವಿದ್ಯುತ್‌ ಬಿಲ್‌ ವಸೂಲಿಗೆ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ)ಮುಂದಾಗಿರುವುದು ಸಂಕಷ್ಟ ಕಾಲದಲ್ಲಿ ಗ್ರಾಹಕರ ಮೇಲೆ ಬರೆ ಎಳೆಯುವ ಕ್ರಮ ಎಂಬ ಟೀಕೆ ವ್ಯಕ್ತವಾಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಬಿಲ್‌ ನೀಡದ ಎಸ್ಕಾಂಗಳು, ಮೇನಲ್ಲಿ ಎರಡು ತಿಂಗಳ ಬಿಲ್‌ ನೀಡಿವೆ. ಹಿಂದಿನ ಮೂರು ತಿಂಗಳ ಸರಾಸರಿ ವಿದ್ಯುತ್‌ ಬಳಕೆ ಆಧಾರದ ಮೇಲೆ ಬಿಲ್‌ ನೀಡುತ್ತಿರುವುದು ಅವೈಜ್ಞಾನಿಕ ಎನ್ನವುದು ಗ್ರಾಹಕರ ಅಭಿಪ್ರಾಯ.

‘ಮಾರ್ಚ್‌ನಲ್ಲಿ ನಾವು 55 ಯುನಿಟ್‌ ಬಳಸಿದ್ದೇವೆ. ಮಾರ್ಚ್‌ ಕೊನೆಯ ವಾರದಿಂದ, ಮೇ ಮೊದಲ ವಾರದವರೆಗೂ ನಾವು ಊರಿನಲ್ಲಿ ಇರಲಿಲ್ಲ. ವಿದ್ಯುತ್‌ ಬಳಸಿಯೇ ಇಲ್ಲ. ಆದರೂ, ₹492 ಬಿಲ್‌ ಬಂದಿದೆ. ವಿದ್ಯುತ್ ಬಳಸದೇ ನಾವೇಕೆ ಬಿಲ್‌ ಕಟ್ಟಬೇಕು’ ಎಂದು ಗೃಹಿಣಿ ಗೀತಾ ಪ್ರಶ್ನಿಸುತ್ತಾರೆ.

‘ಬೆಸ್ಕಾಂ ಸಹಾಯವಾಣಿಗೆ ಸಂಪರ್ಕಿಸಿದರೆ, ತಪ್ಪಾಗಿದೆ ಸರಿಪಡಿಸುತ್ತೇವೆ ಎಂದು ಬಿಲ್‌ ರೀಡರ್‌ ಅವರ ದೂರವಾಣಿ ಸಂಖ್ಯೆ ನೀಡಿದರು. ಅವರು ಸಂಪರ್ಕಕ್ಕೇ ಸಿಗುತ್ತಿಲ್ಲ’ ಎಂದು ದೂರಿದರು.

ಬಳಸದೇ ಬಿಲ್‌:‘ಲಾಕ್‌ಡೌನ್‌ ಅವಧಿಯಲ್ಲಿ ಎಷ್ಟು ಬಳಕೆಯಾಗಿದೆಯೋ ಅಷ್ಟೇ ಬಿಲ್‌ ತೆಗೆದುಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ಮೊದಲಿನಷ್ಟು ವಿದ್ಯುತ್‌ ಬಳಸಲು ಸಾಧ್ಯವೇ ಇಲ್ಲ. ಮೊದಲು, ನಮ್ಮ ಕ್ಯಾಂಪಸ್‌ ವಿದ್ಯುತ್‌ ಶುಲ್ಕ ₹20 ಲಕ್ಷ ಬರುತ್ತಿತ್ತು. ಆದರೆ, ಈಗ ₹ 2 ಸಾವಿರ ಮೌಲ್ಯದ ವಿದ್ಯುತ್‌ ಕೂಡ ಬಳಸಿಲ್ಲ’ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್. ದೊರೆಸ್ವಾಮಿ ಹೇಳಿದರು.

‘ಕೈಗಾರಿಕೆಗಳು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಎಷ್ಟು ವಿದ್ಯುತ್‌ ಬಳಸಲಾಗಿದೆಯೋ ಅಷ್ಟೇ ತೆಗೆದುಕೊಳ್ಳಬೇಕು ತೆಲಂಗಾಣ ಸರ್ಕಾರ ಹೇಳಿದೆ. ಇದೇ ಕ್ರಮವನ್ನು ರಾಜ್ಯ ಸರ್ಕಾರವೂ ಅನುಸರಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದೇನೆ’ ಎಂದು ಅವರು ತಿಳಿಸಿದರು.

ಸಂಕಷ್ಟದಲ್ಲಿ ಸಂಕಷ್ಟ:‘ಲಾಕ್‌ಡೌನ್‌ ಸಂದರ್ಭದಲ್ಲಿ ಕೈಗಾರಿಕೆಗಳ ಚಟುವಟಿಕೆ ಸ್ತಬ್ಧವಾಗಿತ್ತು. ವ್ಯಾಪಾರ–ವಹಿವಾಟು ನಡೆದಿಲ್ಲ. ಆದರೂ, ಕಾರ್ಮಿಕರಿಗೆ ವೇತನ ಪಾವತಿಸಬೇಕಾಗಿದೆ. ಈ ಸಂದರ್ಭದಲ್ಲಿ, ಸರಾಸರಿ ಬಳಕೆ ಆಧಾರದ ಮೇಲೆ ವಿದ್ಯುತ್‌ ಬಿಲ್‌ ನೀಡಲಾಗಿದೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್. ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ದುಬಾರಿ ವಿದ್ಯುತ್‌ ಬಿಲ್‌ ನೀಡಲಾಗುತ್ತಿದೆ ಎಂದು ಹಲವು ಸಣ್ಣ ಕೈಗಾರಿಕೆಗಳ ಮಾಲೀಕರು ಅಳಲು ತೋಡಿಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಕೈಗಾರಿಕೆಗಳಿಂದ ನಿಶ್ಚಿತ ಶುಲ್ಕ ಪಡೆಯಲಾಗುತ್ತಿತ್ತು. ಅಲ್ಲದೆ, ಸರಾಸರಿ ಅಥವಾ ಹಿಂದಿನ ತಿಂಗಳ ಬಳಕೆ ಆಧರಿಸಿ ಬಿಲ್‌ ನೀಡಲಾಗಿದೆ. ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದು, ನಿಶ್ಚಿತ ಶುಲ್ಕ ತೆಗೆದುಕೊಳ್ಳುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಜಿ.ಆರ್. ಜನಾರ್ದನ ತಿಳಿಸಿದರು.

‘ವಿದ್ಯುತ್‌ ಬಳಕೆಯಷ್ಟೇ ಬಿಲ್’
‘ಗ್ರಾಹಕರು ಎಷ್ಟು ಯೂನಿಟ್‌ ಬಳಸಿದ್ದಾರೋ, ಅಷ್ಟೇ ಯೂನಿಟ್‌ಗೆ ಶುಲ್ಕ ವಿಧಿಸಲಾಗಿದೆ. 60 ದಿನಗಳ ಬಿಲ್‌ ಒಟ್ಟಿಗೇ ನೀಡಿರುವುದರಿಂದ ಶುಲ್ಕ ಹೆಚ್ಚು ಎನಿಸುತ್ತದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಗಳಲ್ಲಿ ಗ್ರಾಹಕರು ಹೆಚ್ಚು ವಿದ್ಯುತ್‌ ಬಳಸಿದ್ದಾರೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ತಿಂಗಳಲ್ಲಿ ಬಳಸಿದ ಒಟ್ಟು ಯೂನಿಟ್‌ಗಳನ್ನು ಪರಿಗಣಿಸಿದರೆ ವಿದ್ಯುತ್‌ ಶುಲ್ಕ ಹೆಚ್ಚಾಗುತ್ತದೆ ಎಂಬುದು ಸರಿಯಲ್ಲ. ಮೊದಲು, ಸೊನ್ನೆಯಿಂದ 30 ಯೂನಿಟ್‌ವರೆಗಿನ ಪ್ರತಿ ಯೂನಿಟ್‌ಗೆ ₹3.75 ಪೈಸೆ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಸೊನ್ನೆಯಿಂದ 60 ಯೂನಿಟ್‌ವರೆಗಿನ ಪ್ರತಿ ಯೂನಿಟ್‌ ಬಳಕೆಗೆ ₹3.75 ಪೈಸೆ ವಿಧಿಸಲಾಗಿದೆ. ಒಟ್ಟು ಬಿಲ್‌ ಮೊತ್ತವನ್ನು ಎರಡರಿಂದ ವಿಭಾಗಿಸಿದರೆ ತಿಂಗಳಿಗೆ ಮೊದಲು ಬರುತ್ತಿದ್ದಷ್ಟೇ ಶುಲ್ಕ ಬಂದಂತಾಗುತ್ತದೆ’ ಎಂದು ಅವರು ಹೇಳಿದರು.

ಗ್ರಾಹಕರ ದೂರುಗಳ ಬಗ್ಗೆ ಗಮನ ಸೆಳೆದಾಗ, ‘ಇದೇ ಮೊದಲ ಬಾರಿಗೆ 60 ದಿನಗಳ ಬಿಲ್‌ ಒಟ್ಟಿಗೇ ನೀಡಿದ್ದರಿಂದ ಕೆಲವು ಕಡೆ ಗೊಂದಲವಾಗಿರಬಹುದು. ವಿದ್ಯುತ್‌ ಶುಲ್ಕದ ಬಗ್ಗೆ ಅನುಮಾನವಿದ್ದರೆ ಗ್ರಾಹಕರು ಸಹಾಯವಾಣಿಯನ್ನು ಸಂಪರ್ಕಿಸಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT