ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತದಾರರ ಪಟ್ಟಿ: ‘ಆ್ಯಪ್‌’ ಮೂಲಕ ಪರಿಷ್ಕರಣೆ

ಅಕ್ಟೋಬರ್‌ 29ರಂದು ಕರಡು ಪಟ್ಟಿ, 2025ರ ಜನವರಿ 6ರಂದು ಮತದಾರರ ಅಂತಿಮ ಪಟ್ಟಿ
Published 20 ಆಗಸ್ಟ್ 2024, 23:30 IST
Last Updated 20 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭವಾಗಿದ್ದು, ಈ ಬಾರಿ ‘ಆ್ಯಪ್‌’ ಮೂಲಕವೇ ಮಾಹಿತಿಗಳನ್ನು ದಾಖಲಿಸಲಾಗುತ್ತದೆ.

ಕೇಂದ್ರ ಚುನಾವಣೆ ಆಯೋಗದ ಸೂಚನೆಯಂತೆ ‘ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ–2025’ ಆಗಸ್ಟ್‌ 20ರಿಂದ ಆರಂಭವಾಗಿದ್ದು, ಅಕ್ಟೋಬರ್‌ 29ರಂದು ಕರಡು ಪಟ್ಟಿ ಪ್ರಕಟಿಸಲಾಗುತ್ತದೆ. 2025ರ ಜನವರಿ 6ರಂದು ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ, ಮತದಾರರ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಹೊಸದಾಗಿ ಮನೆಗಳು ನಿರ್ಮಾಣವಾಗಿದ್ದರೆ, ಬೇರೆಡೆಯಿಂದ ಬಂದಿದ್ದರೆ ಪಟ್ಟಿಗೆ ಸೇರಿಸಲಾಗುತ್ತದೆ. ಮನೆ ಬದಲಾಯಿಸಿದವರು, ಮರಣ ಹೊಂದಿದವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಈ ಬಾರಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಪಟ್ಟಿಯಲ್ಲಿರುವ 4.13 ಲಕ್ಷ ಮತದಾರರು ಅಸ್ತಿತ್ವದಲ್ಲಿಲ್ಲ ಎಂಬ ಅಂದಾಜಿದ್ದು, ಅದನ್ನು ಪರಿಶೀಲಿಸಿ, ನಿಯಮಗಳಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮತಗಟ್ಟೆಗಳು ಮತದಾರರ ನಿವಾಸದ ಸಮೀಪವೇ ಇರುವಂತೆ ಹಾಗೂ ಒಂದು ಕುಟುಂಬ ಅಥವಾ ಕಟ್ಟಡದ ಜನರಿಗೆ ಒಂದೇ ಮತಗಟ್ಟೆಯಲ್ಲಿ ಮತದಾನದ ವ್ಯವಸ್ಥೆ ಇರುವಂತೆ ಪರಿಷ್ಕರಣೆ ಮಾಡಲಾಗುತ್ತದೆ. ಒಂಬತ್ತು ಸಾವಿರ ಮತಗಟ್ಟೆ ಅಧಿಕಾರಿಗಳಿದ್ದು, ಅವರ ಚಿತ್ರ ಮೊಬೈಲ್‌ ಸಂಖ್ಯೆಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೆಲವು ಬದಲಾವಣೆಗಳಿದ್ದು, ಅವುಗಳನ್ನು ಶೀಘ್ರವೇ ಸರಿಪಡಿಸಲಾಗುತ್ತದೆ ಎಂದು ತಿಳಿಸಿದರು.

ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟ್‌ಗಳು ಮತದಾರರ ಪಟ್ಟಿ ಪರಿಷ್ಕರಣೆ, ಹೊಸದಾಗಿ ಸೇರ್ಪಡೆ, ಆಧಾರ್‌ ಜೋಡಣೆಗೆ ಮತಗಟ್ಟೆ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಕೊಳ್ಳಲಾಗಿದೆ. ಅವರೆಲ್ಲರ ಸಹಕಾರದೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆ ಎಂದು ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದರು.

ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್‌. ಸೆಲ್ವಮಣಿ, ಜಿಲ್ಲಾ ಹೆಚ್ಚುವರಿ ಚುನಾವಣಾಧಿಕಾರಿಗಳಾದ ಸ್ನೇಹಲ್, ದಯಾನಂದ್, ಅವಿನಾಶ್ ಮೆನನ್ ರಾಜೇಂದ್ರನ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಶರಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT