ಶುಕ್ರವಾರ, ನವೆಂಬರ್ 27, 2020
18 °C

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್‌ ಪರೀಕ್ಷಾರ್ಥ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಿಲಿಕಾನ್ ಸಿಟಿ ಜನರ ಬಹುದಿನಗಳ ಕನಸಾಗಿದ್ದ ಎಲೆಕ್ಟ್ರಿಕ್ ಬಸ್‍ಗಳ ಸಂಚಾರಕ್ಕೆ ಕಾಲ ಸನ್ನಿಹಿತವಾಗಿದೆ.  ‘ಓಲೆಕ್ಟ್ರಾ’ ಕಂಪನಿಯ ದೇಶಿ ನಿರ್ಮಿತ ಎಲೆಕ್ಟ್ರಿಕ್‌ ಬಸ್‌ಗಳ ಪರೀಕ್ಷಾರ್ಥ ಸಂಚಾರವನ್ನು ಬಿಎಂಟಿಸಿ ಗುರುವಾರ ಆರಂಭಿಸಿದೆ.

‘ಬಸ್‌ನಲ್ಲಿ ಹಿರಿಯ ನಾಗರಿಕರಿಗೆ ವೀಲ್‌ಚೇರ್ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್, ಯುಎಸ್‌ಬಿ ಚಾರ್ಜಿಂಗ್ ಅವಕಾಶ ಇದೆ. ತುರ್ತು ಅಲಾರಂ, ನಿಲುಗಡೆ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗಾಜು ಒಡೆಯುವ ಸುತ್ತಿಗೆಗಳು, ತುರ್ತು ನಿರ್ಗಮನಕ್ಕೆ ಅವಕಾಶ ಸೇರಿದಂತೆ ಎಲ್ಲ ಸುರಕ್ಷತಾ ವ್ಯವಸ್ಥೆಯನ್ನು ಈ ಹೈಟೆಕ್ ಬಸ್ ಒಳಗೊಂಡಿದೆ’ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಬ್ಯಾಟರಿ ತಂತ್ರಜ್ಞಾನದ ಹೊರತಾಗಿ ಬಸ್‌ ಸಂಪೂರ್ಣ ದೇಶಿಯವಾಗಿ ನಿರ್ಮಿತವಾಗಿದೆ. ಏರ್ ಸಸ್ಪೆನ್ಷನ್, ಟ್ರಾಕ್ಷನ್ ಬ್ಯಾಟರಿಯ ಕೂಲೆಂಟ್ ಮೆಕಾನಿಸಂ ಹೊಂದಿದೆ. ಇದು ಬ್ಯಾಟರಿ ಉಷ್ಣಾಂಶ ನಿಯಂತ್ರಿಸುವ ಮೂಲಕ ಹೆಚ್ಚಿನ ಮೈಲೇಜ್‌ಗೆ ಸಹಕಾರಿಯಾಗಲಿದೆ. ಪ್ರತಿ ಕಿಲೋ ಮೀಟರ್‌ಗೆ 1.2ರಿಂದ 1.4 ಕೆಡಬ್ಲ್ಯೂಎಚ್ ವಿದ್ಯುತ್‍ ಬಳಕೆಯಾಗಲಿದೆ. ಇಡೀ ಬ್ಯಾಟರಿ ಚಾರ್ಜಿಂಗ್‌ಗೆ 2ರಿಂದ 3 ಗಂಟೆ ಅವಧಿ ಸಾಕಾಗಲಿದೆ’ ಎಂದು ವಿವರಿಸಿದ್ದಾರೆ.

‘ಓಲೆಕ್ಟ್ರಾ ಕಂಪನಿಯ ಎಲೆಕ್ಟ್ರಿಕ್ ಬಸ್‍ಗಳು ಸದ್ಯ ಹೈದರಾಬಾದ್, ಪುಣೆ–ಮುಂಬೈ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿವೆ. ಉತ್ತರಾಖಂಡದ ತಿಲ್ವಾಸ, ಅಸ್ಸಾಂನ ಗುವಾಹಟಿ, ಮಧ್ಯಪ್ರದೇಶದ ಇಂದೋರ್, ಸೂರತ್, ಭೋಪಾಲ್, ಜಬಲ್‍ಪುರ, ಉಜ್ಜಯನಿ ಸೇರಿ ಹಲವೆಡೆ ಸಂಚಾರಕ್ಕೆ ಅವಕಾಶ ದೊರೆತಿದ್ದು, ಇದಕ್ಕಾಗಿ 800 ಬಸ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಓಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ತಿಳಿಸಿದೆ.

‘ತಿರುಮಲ ಮತ್ತು ಶಬರಿಮಲೆ ಬೆಟ್ಟ ಪ್ರದೇಶಗಳಲ್ಲೂ ಯಶಸ್ವಿಯಾಗಿ ಕಾರ್ಯಾಚರಿಸಲಾಗುತ್ತಿದೆ. ಹೈದರಾಬಾದ್‌ನಲ್ಲಿ ಬಸ್ ತಯಾರಿಕಾ ಘಟಕ ಇದೆ’ ಎಂದು ವಿವರಿಸಿದೆ.

ಬಸ್ ಚಾಲನೆ ಮಾಡಿದ ಸವದಿ

ಶಾಂತಿನಗರದ ಬಿಎಂಟಿಸಿ ನಿಲ್ದಾಣದಿಂದ ವಿಧಾನಸೌಧದ ತನಕ ಎಲೆಕ್ಟ್ರಿಕ್ ಬಸ್‌ ಚಾಲನೆ ಮಾಡಿಕೊಂಡು ಬಂದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಬಸ್‌ನ ಕಾರ್ಯಕ್ಷಮತೆಯನ್ನು ಖುದ್ದು ಪರಿಶೀಲಿಸಿದರು.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಸ್‌ ವೀಕ್ಷಿಸಿ ಹೈಟೆಕ್ ವ್ಯವಸ್ಥೆಯನ್ನು ಶ್ಲಾಘಿಸಿದರು.

‘ಕೇಂದ್ರ ಸರ್ಕಾರದ ಫೇಮ್-2 ಯೋಜನೆ ಅಡಿಯಲ್ಲಿ ಪ್ರತಿ ಬಸ್ಸಿಗೆ ನೀಡುವ ₹55 ಲಕ್ಷ ಮತ್ತು ರಾಜ್ಯ ಸರ್ಕಾರ ನೀಡುವ ₹33 ಲಕ್ಷ ನೆರವು ಒಟ್ಟುಗೂಡಿಸಿ ಪ್ರತಿ ಬಸ್ಸಿಗೆ ₹88 ಲಕ್ಷ ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯನ್ನು ಹಂತ ಹಂತವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸವದಿ ತಿಳಿಸಿದರು.

‘ವಿವಿಧ ಕಂಪನಿಗಳು ತಯಾರಿಸಿರುವ ಎಲೆಕ್ಟ್ರಿಕ್ ಬಸ್‌ಗಳನ್ನು ನಿಗದಿತ ಅವಧಿಗೆ ಪರೀಕ್ಷಾರ್ಥ ಸಂಚಾರಕ್ಕೆ ಒದಗಿಸಲಿವೆ. ಪ್ರಯಾಣಿಕರ ರಹಿತವಾಗಿ ಬಿಎಂಟಿಸಿಯ ಹಲವು ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಿವೆ. ಅವುಗಳ ಕಾರ್ಯಕ್ಷಮತೆ ಪರಿಶೀಲಿಸಿದ ಬಳಿಕ ಹೆಚ್ಚಿನ ಪ್ರಮಾಣದ ಬಸ್ ಒದಗಿಸಲು ಅನುಮತಿ ನೀಡುವ ಉದ್ದೇಶ ಇದೆ. ಎಲೆಕ್ಟ್ರಿಕ್ ಬಸ್‌ಗಳ ಬಳಕೆಯಿಂದ ಮಾಲಿನ್ಯದ ಪ್ರಮಾಣ, ಜಾಗತಿಕ ತಾಪಮಾನ, ಇಂಧನ ವೆಚ್ಚ ಕಡಿಮೆಯಾಗಲಿದೆ. ಜನರಿಗೆ ಗುಣಮಟ್ಟದ ಸೇವೆ ಲಭ್ಯವಾಗಲಿದೆ’ ಎಂದು ಹೇಳಿದರು.

ಬಸ್‌ನ ವೈಶಿಷ್ಟ್ಯಗಳು

* 12 ಮೀಟರ್ ಉದ್ದ

* 34+1 ಪ್ರಯಾಣಿಕರ ಆಸನಗಳು

* ಸ್ವಯಂ ಚಾಲಿತ ಗೇರ್ ವ್ಯವಸ್ಥೆ

* ಎಲ್ಲ ಚಕ್ರಗಳಿಗೂ ಡಿಸ್ಕ್ ಬ್ರೇಕ್ ವ್ಯವಸ್ಥೆ

* 3 ಗಂಟೆ ಚಾರ್ಜ್ ಮಾಡಿದರೆ 200-250 ಕಿಲೋ ಮೀಟರ್ ಸಂಚಾರ

* ಹಿರಿಯ ನಾಗರಿಕರಿಗೆ, ಅಂಗವಿಕಲರಿಗಾಗಿ ವೀಲ್ ಚೇರ್ ವ್ಯವಸ್ಥೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು