ಆದ್ಯತೆ ಮೇಲೆ ವಿದ್ಯುತ್‌ ಗುತ್ತಿಗೆದಾರರ ಬಿಲ್‌ ಪಾವತಿಗೆ ಅಸ್ತು

7
ಬಿಬಿಎಂಪಿ ಸಭೆಯಲ್ಲಿ ತೀವ್ರ ಚರ್ಚೆ

ಆದ್ಯತೆ ಮೇಲೆ ವಿದ್ಯುತ್‌ ಗುತ್ತಿಗೆದಾರರ ಬಿಲ್‌ ಪಾವತಿಗೆ ಅಸ್ತು

Published:
Updated:

ಬೆಂಗಳೂರು: ಬೀದಿ ದೀಪ ನಿರ್ವಹಿಸುವ ವಿದ್ಯುತ್‌ ಗುತ್ತಿಗೆದಾರರ ಬಾಕಿ ಬಿಲ್‌ನ್ನು ಆದ್ಯತೆ ಮೇಲೆ ಪಾವತಿಸಲು ಶುಕ್ರವಾರ ನಡೆದ ಬಿಬಿಎಂಪಿ ಸಭೆಯಲ್ಲಿ ನಿರ್ಣಯಿಸಲಾಯಿತು. 

ಸುಮಾರು ಒಂದು ತಿಂಗಳಿನಿಂದ ಪಾಲಿಕೆ ಆಡಳಿತ ಒಂದಲ್ಲ ಒಂದು ಪ್ರತಿಭಟನೆ ಎದುರಿಸುತ್ತಲೇ ಇದೆ. ಮುಷ್ಕರ ಆರಂಭಿಸಿದ್ದ ಬೀದಿ ದೀಪ ನಿರ್ವಾಹಕರು ಜೂನ್‌ 20ರಂದು ಸಾರ್ವಜನಿಕ ಸ್ಥಳಗಳ ವಿದ್ಯುತ್‌ ದೀಪಗಳನ್ನು ಆರಿಸಿದ್ದರು. ಇದರಿಂದಾಗಿ ಕೆಲವೆಡೆ ಕತ್ತಲು ಆವರಿಸಿತ್ತು. ಇದು ಆಕ್ರೋಶಕ್ಕೆ ಕಾರಣವಾಗಿತ್ತು. 

ವಿದ್ಯುತ್‌ ದೀಪ ನಿರ್ವಹಿಸುವ ಎಲ್ಲ ವಾಹನಗಳು ಎರಡು ದಿನಗಳಿಂದ ಪಾಲಿಕೆ ಕಚೇರಿ ಮುಂದೆ ಬೀಡುಬಿಟ್ಟಿವೆ. ಸಭೆಯ ಆರಂಭದಲ್ಲಿ ಇದೇ ಚರ್ಚೆಯ ಪ್ರಧಾನ ವಿಷಯವಾಯಿತು. ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ‘ಪಾಲಿಕೆಯಲ್ಲಿ ಪ್ರತಿಯೊಂದಕ್ಕೂ ಪ್ರತಿಭಟನೆ, ಮುಷ್ಕರ ನಡೆಸಬೇಕು. ಹಾಗಿದ್ದರೆ ಮಾತ್ರ ಬೇಡಿಕೆ ಈಡೇರುತ್ತದೆ ಎಂಬ ಭಾವನೆ ಬಂದುಬಿಟ್ಟಿದೆ. ಪೌರ ಕಾರ್ಮಿಕರ ಧರಣಿ, ಕಸ ಸಾಗಾಟಗಾರರ ಮುಷ್ಕರ, ಈಗ ವಿದ್ಯುತ್‌ ಗುತ್ತಿಗೆದಾರರ ಮುಷ್ಕರ ನಡೆದಿದೆ. ಹೀಗಾದರಷ್ಟೇ ಬಾಕಿ ಹಣ ಪಾವತಿಸುವುದೇ’ ಎಂದು ಪ್ರಶ್ನಿಸಿದರು. 

ಇದಕ್ಕೆ ಧ್ವನಿಗೂಡಿಸಿದ ಮೇಯರ್‌ ಆರ್‌.ಸಂಪತ್‌ರಾಜ್‌, ‘ಬಾಕಿ ಹಣ ಪಾವತಿಸುವಂತೆ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯಿಸಿದ್ದರೂ ಅಧಿಕಾರಿಗಳು ಏಕೆ ಹಣ ಪಾವತಿಸಿಲ್ಲ? ಸಭೆಯ ನಿರ್ಣಯಕ್ಕೆ ಬೆಲೆ ಇಲ್ಲವೇ’ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಪಷ್ಟನೆ ನೀಡಿದ ಜಂಟಿ ಆಯುಕ್ತ ಅತುಲ್‌, ‘ಈ ಹಿಂದೆ ಶೇ 50ರಷ್ಟು ಪಾವತಿಸುವ ಬಗ್ಗೆ ನಿರ್ಣಯಿಸಲಾಗಿತ್ತು. ಅಷ್ಟು ಪಾವತಿಸಲು ವಿದ್ಯುತ್‌ ಗುತ್ತಿಗೆದಾರರು ಒಪ್ಪಲಿಲ್ಲ. ಚುನಾವಣೆ ಮತ್ತಿತರ ಕಾರಣದಿಂದ ವಿಳಂಬವಾಗಿದೆ. ಈಗ ಆದ್ಯತೆ ಮೇಲೆ ಶೇ 80:20ರ ಅನುಪಾತದಲ್ಲಿ ಹಣ ಪಾವತಿಸಬಹುದು’ ಎಂದು ಹೇಳಿದರು. 

ಬಜೆಟ್‌ ಅನುಮೋದನೆಗೆ ಸ್ವಾಗತ: ರಾಜ್ಯ ಸರ್ಕಾರ ಪಾಲಿಕೆ ಬಜೆಟನ್ನು ಅನುಮೋದಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಸದಸ್ಯರು ‘ಆದಾಯದ ಇತಿಮಿತಿಯಲ್ಲೇ ವೆಚ್ಚ ಮಾಡಬೇಕು. ಆದಾಯ ಮೂಲಗಳನ್ನು ಬಲಪಡಿಸಬೇಕು. ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳಿಗೆ ಅನುದಾನದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಘನತ್ಯಾಜ್ಯ ನಿರ್ವಹಣೆ, ಪೌರಕಾರ್ಮಿಕರ ವೇತನ ಪಾವತಿ, ತುರ್ತು ಕಾಮಗಾರಿಗಳನ್ನು ಆದ್ಯತೆ ಮೇಲೆ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ‘60 ವರ್ಷ ಮೀರಿದ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ. ಹೀಗಾದರೆ ಅವರಿಗೆ ಜೀವನ ನಿರ್ವಹಣೆ ಕಷ್ಟವಾಗಲಿದೆ. ಅವರ ಕುಟುಂಬದವರಿಗೆ ಅದೇ ಉದ್ಯೋಗ ಕೊಡಬೇಕು.
ಪಾಲಿಕೆ ಅನುದಾನದಲ್ಲಿ ಒಂಟಿ ಮನೆ ನಿರ್ಮಿಸಿಕೊಂಡವರಿಗೆ ಹಣ ಪಾವತಿ ಆಗಬೇಕು. ಒಂಟಿ ಮನೆ ನಿರ್ಮಿಸಿಕೊಂಡ ಪ್ರಕರಣಗಳನ್ನು ನಿರ್ವಹಿಸಲು ಪ್ರತ್ಯೇಕ ವಿಭಾಗವನ್ನೇ ತೆರೆಯಬೇಕು ಎಂದು ಒತ್ತಾಯಿಸಿದರು.

ಉಪಮೇಯರ್‌ ಪದ್ಮಾವತಿ ನರಸಿಂಹಮೂರ್ತಿ, ಆಯುಕ್ತ ಮಹೇಶ್ವರರಾವ್‌ ಇದ್ದರು. 

ಸ್ವತಂತ್ರ ಸದಸ್ಯರ ಒಂಟಿ ಧ್ವನಿ

‘ನಾನು ಸ್ವತಂತ್ರ ಸದಸ್ಯ ಎಂದು ಎಲ್ಲರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪಾಲಿಕೆ ಆಡಳಿತ ಸಮಿತಿ ಅಧ್ಯಕ್ಷನಾದರೂ ನನ್ನನ್ನು ಯಾರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈಗಾಗಲೇ 6 ತಿಂಗಳು ಕಳೆದಿದೆ. ಕಚೇರಿಯ ಪತ್ರ ವ್ಯವಹಾರಗಳು ನನ್ನ ಗಮನಕ್ಕೆ ಬರುತ್ತಿಲ್ಲ. ಸ್ಥಾಯಿ ಸಮಿತಿಯವರ ಅಧಿಕಾರ ವ್ಯಾಪ್ತಿ ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಅಧಿಕಾರಿಗಳಿಗಂತೂ ಪಾಲಿಕೆ ಅಂದರೆ ಮಾವನ ಮನೆಯಂತಾಗಿದೆ. ಹಲವಾರು ವರ್ಷಗಳಿಂದ ಇಲ್ಲಿ ಝಂಡಾ ಊರಿದ್ದಾರೆ’ ಎಂದು ಲಕ್ಷ್ಮೀನಾರಾಯಣ ಬೇಸರಿಸಿದರು. ಇದಕ್ಕೆ ಪದ್ಮನಾಭ ರೆಡ್ಡಿ ಧ್ವನಿಗೂಡಿಸಿದರು. 

‘ಎಲ್ಲ ಸ್ಥಾಯಿ ಸಮಿತಿಗಳ ಅಧಿಕಾರ ವ್ಯಾಪ್ತಿ ಬಗ್ಗೆ ಸ್ಪಷ್ಟಪಡಿಸಲು ಒಂದು ಸಮಿತಿ ರಚಿಸಿ ನಿಯಮಾವಳಿ ರೂಪಿಸಬೇಕು’ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ನೂತನ ಶಾಸಕಿಗೆ ಅಭಿನಂದನೆ: ಏಟು – ತಿರುಗೇಟು

ಜಯನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ಅಭಿನಂದಿಸಲಾಯಿತು.  ಕೃತಜ್ಞತೆ ಅರ್ಪಿಸಿದ ಸೌಮ್ಯಾ, ನಗರದಲ್ಲಿ ಹಲವಾರು ಸಮಸ್ಯೆಗಳಿವೆ. ಸಮಸ್ಯೆಗಳು ಸಾರ್ವಕಾಲಿಕ. ಅವುಗಳನ್ನೆಲ್ಲಾ ಸರಿಪಡಿಸಿಕೊಂಡು ಮಾದರಿ ಬೆಂಗಳೂರನ್ನು ನಿರ್ಮಿಸಲು ಶ್ರಮಿಸೋಣ’ ಎಂದರು. 

ಈ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದ ಬಿಜೆಪಿಯ ಮಹಿಳಾ ಸದಸ್ಯರು, ‘ಸಮಸ್ಯೆಗಳಿವೆ ಎಂದರೆ ಏನರ್ಥ? ಜಯನಗರ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ದಿವಂಗತ ಬಿ.ಎನ್‌.ವಿಜಯಕುಮಾರ್‌ ಅವರ ಕೊಡುಗೆಯನ್ನು ಮರೆಯಬಾರದು. ನಿಮ್ಮ ಮಾತನ್ನು ಹಿಂದಕ್ಕೆ ಪಡೆಯಬೇಕು’ ಎಂದು ಪಟ್ಟು ಹಿಡಿದರು. ಅವರ ಮಾತಿಗೆ ತಿರುಗೇಟು ನೀಡಿದ ಸೌಮ್ಯಾ, ‘ನಾನೂ ವಿಜಯಕುಮಾರ್‌ ಅವರ ಅಭಿಮಾನಿ. ಸಮಸ್ಯೆಗಳಿವೆ ಎಂದಷ್ಟೇ ಹೇಳಿದೆ. ಜಯನಗರ ಕ್ಷೇತ್ರವೊಂದನ್ನೇ
ಉದ್ದೇಶಿಸಿ ಹೇಳಿಲ್ಲ. ನನ್ನ ಮಾತನ್ನು ತಪ್ಪಾಗಿ ಭಾವಿಸಬಾರದು’ ಎಂದು ಸ್ಪಷ್ಟಪಡಿಸಿದರು.

ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ, ‘ಸೌಮ್ಯಾ ಅವರು ತಮ್ಮ ತಂದೆ ರಾಮಲಿಂಗಾರೆಡ್ಡಿ ಅವರ ಮಾತು ಕೇಳಿ ಮುಂದುವರಿಯಬೇಕು. ಬೇರೆಯವರ ಮಾತಿಗೆ ಕಿವಿಗೊಡಬಾರದು. ಹೀಗಾದಾಗ ಒಳ್ಳೆಯದಾಗುತ್ತದೆ. ಪಾಲಿಕೆ ಸದಸ್ಯರ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಬಾರದು. ಸದಸ್ಯರ ಅಧಿಕಾರ ಇನ್ನಷ್ಟು ಹೆಚ್ಚಿಸಲು ಅವರು ಪ್ರಯತ್ನಿಸಬೇಕು’ ಎಂದು ಕಿವಿಮಾತು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !