ಶನಿವಾರ, ನವೆಂಬರ್ 28, 2020
19 °C
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಿಗೆ ಸಚಿವ ಕೆ.ಗೋಪಾಲಯ್ಯ ಭರವಸೆ

‘₹5ಲಕ್ಷದವರೆಗಿನ ವಿದ್ಯುತ್‌ ಕಾಮಗಾರಿ ತುಂಡು ಗುತ್ತಿಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ (ಎಸ್ಕಾಂ) ಕೈಗೆತ್ತಿಕೊಳ್ಳುವ ₹5 ಲಕ್ಷದವರೆಗಿನ ಕಾಮಗಾರಿಯನ್ನು ತುಂಡು ಗುತ್ತಿಗೆ ನೀಡಲು ರಾಜ್ಯಸರ್ಕಾರ ಒಪ್ಪಿದೆ. ಈ ಕುರಿತು ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶುಕ್ರವಾರ ಆದೇಶ ಹೊರಡಿಸಲಿದ್ದಾರೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಹೇಳಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ‘ಗುತ್ತಿಗೆದಾರರ ಉಳಿದ ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು. ನ.3ರ ಬಳಿಕ ಮುಖ್ಯಮಂತ್ರಿಯವರ ಜೊತೆ ಮಾತುಕತೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸಂಘದ ರಾಜ್ಯಘಟಕದ ಅಧ್ಯಕ್ಷ ಎಸ್.ಎಂ. ಕೃಷ್ಣ, ‘ಎಸ್ಕಾಂಗಳು ವಿದ್ಯುತ್‌ ಗುತ್ತಿಗೆದಾರರಿಗೆ ನಿರಂತರವಾಗಿ ತೊಂದರೆ ಮಾಡುತ್ತಿದ್ದಾರೆ. ಅಲ್ಲದೆ, ಎಲ್ಲ ವಿದ್ಯುತ್‌ ಕಾಮಗಾರಿಗಳನ್ನು ಒಟ್ಟುಗೂಡಿಸಿ, ₹900 ಕೋಟಿ ಮೊತ್ತದ ಬೃಹತ್‌ ಟೆಂಡರ್‌ ಅನ್ನು ಬಂಡವಾಳಶಾಹಿಗಳಿಗೆ ನೀಡುತ್ತಿರುವುದು ಸರಿಯಲ್ಲ’ ಎಂದರು.

ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಸುರೇಶ್, ‘ಎಸ್ಕಾಂನ ಹಿರಿಯ ಅಧಿಕಾರಿಗಳು ತಮಗೆ ಬೇಕಾದವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ವಿದ್ಯುತ್‌ ಜಾಲದ ಎಲ್ಲ ಕಾಮಗಾರಿಗಳನ್ನು ಒಗ್ಗೂಡಿ ಬಹುಕೋಟಿ ಮೊತ್ತದ ಟೆಂಡರ್‌ ನೀಡಲು ತಯಾರಿ ನಡೆಸಿದ್ದಾರೆ. ಇದರಿಂದ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯುತ್‌ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ’ ಎಂದರು.

‘ಎಸ್ಕಾಂಗಳನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಖಾಸಗೀಕರಣದಿಂದ ರೈತರು ಮತ್ತು ಗುತ್ತಿಗೆದಾರರಿಗೆ ಸಾಕಷ್ಟು ತೊಂದರೆಯಾಗಲಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.