ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಮೇಲ್ಸೇತುವೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ್ದ ಅಪಘಾತಕ್ಕೆ ಕಾರು ಚಾಲಕ ಪಿ.ನಿತೀಶ್ (23) ಅಜಾಗರೂಕತೆಯೇ ಕಾರಣ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಬೊಮ್ಮಸಂದ್ರದ ತಿರುಪಾಳ್ಯ ಗ್ರಾಮದ ನಿತೀಶ್, ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿಯತ್ತ ಬಲೆನೊ ಕಾರಿನಲ್ಲಿ ಅತಿ ವೇಗವಾಗಿ ಹೊರಟಿದ್ದ. ಆತನ ನಿಯಂತ್ರಣ ತಪ್ಪಿದ ಕಾರು ತಡೆಗೋಡೆ ಭೇದಿಸಿಕೊಂಡು ಮೇಲ್ಸೇತುವೆಯ ಪಕ್ಕದವಾಹನ ನಿಲುಗಡೆ ಸ್ಥಳದಲ್ಲಿ (ಲೇ ಬೇ) ನಿಂತಿದ್ದ ಪ್ರೀತಂಕುಮಾರ್ (30) ಹಾಗೂ ಕೃತಿಕಾರಾಮನ್ (28) ಅವರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಇಬ್ಬರೂ ಕೆಳಗಿನ ರಸ್ತೆಗೆ ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು
ಹೇಳಿದ್ದಾರೆ.
‘ಜೆ.ಪಿ.ನಗರದ 8ನೇ ಹಂತದಲ್ಲಿರುವ ಅಕ್ಷಯ್ ಪ್ರೈಡ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನೆಲೆಸಿದ್ದ ಪ್ರೀತಂ, ಸರ್ಜಾಪುರ ರಸ್ತೆಯಲ್ಲಿರುವ ಕಂಪನಿಯೊಂದರಲ್ಲಿ ಕ್ವಾಲಿಟಿ ಕಂಟ್ರೋಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ಚೆನ್ನೈನವರಾದ ಕೃತಿಕಾ ಮಹದೇವಪುರದಲ್ಲಿರುವ ಕಾಯಿನ್ ಸ್ವಿಚ್ ಕಂಪನಿಯಲ್ಲಿ ಇತ್ತೀಚೆಗಷ್ಟೇ ಉದ್ಯೋಗಕ್ಕೆ ಸೇರಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ’
ಎಂದರು.
‘ಆರೋಪಿ ನಿತೀಶ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆತನನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಜ್ಞೆ ಬಂದ ಬಳಿಕ ಆತನಿಂದ ಘಟನೆ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತದೆ’ ಎಂದು ತಿಳಿಸಿದ್ದಾರೆ.
‘ಕಾರು ಚಾಲಕನ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಆತ ಮದ್ಯಪಾನ ಮಾಡಿದ್ದನೊ ಅಥವಾ ಡ್ರಗ್ಸ್ ಸೇವಿಸಿದ್ದನೊ ಎಂಬುದು ವರದಿ ಬಂದ ಬಳಿಕ ಗೊತ್ತಾಗಲಿದೆ. ಪ್ರೀತಂ ಮತ್ತು ಕೃತಿಕಾ ಸ್ನೇಹಿತನ ಬೈಕ್ ಪಡೆದು ನಗರದಲ್ಲಿ ಸುತ್ತಾಡಿದ್ದರು’ ಎಂದು ಮಾಹಿತಿ ನೀಡಿದ್ದಾರೆ.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮಂಗಳವಾರ ರಾತ್ರಿ 9.15ರ ಸುಮಾರಿಗೆ ನಡೆದಿರುವಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
‘ಪ್ರೀತಂ ಅವರು ಹೆದ್ದಾರಿಯಲ್ಲಿ ‘ಒನ್ ವೇ’ಯಲ್ಲಿ ನಿಧಾನವಾಗಿ ಬೈಕ್ ಓಡಿಸಿಕೊಂಡು ಹೋಗುತ್ತಿದ್ದು ಅವರ ಹಿಂದೆ ಕೃತಿಕಾ ನಡೆದು ಸಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇವರಿಬ್ಬರುಲೇ ಬೇಯಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆಯುತ್ತದೆ. ಸುಮಾರು 40 ಅಡಿ ಎತ್ತರದಿಂದ ಸರ್ವಿಸ್ ರಸ್ತೆ ಮೇಲೆ ಬಿದ್ದ ದೇಹಗಳು ಒಮ್ಮೆ ಪುಟಿದು200 ಮೀಟರ್ ದೂರ ಉರುಳಿಕೊಂಡು ಹೋಗುತ್ತವೆ. ಇದನ್ನು ಕಂಡು ಪಾದಚಾರಿಯೊಬ್ಬರು ಹೌಹಾರುತ್ತಾರೆ’.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.