ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ನರಮೇಧ: ಎಂ.ಜೆ.ಅಕ್ಬರ್‌

7

ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ನರಮೇಧ: ಎಂ.ಜೆ.ಅಕ್ಬರ್‌

Published:
Updated:

ಬೆಂಗಳೂರು: ‘ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿ, ಸ್ವಾತಂತ್ರ್ಯ ಭಾರತದ ಜಲಿಯನ್‌ ವಾಲಾಬಾಗ್‌ ದುರಂತ’ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಹೇಳಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1947ರ ಆಗಸ್ಟ್‌ 15ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಅದನ್ನು 1975ರ ಜೂನ್‌ 16ರ ಮಧ್ಯರಾತ್ರಿ ದಮನ ಮಾಡಲಾಯಿತು. ಅಂದು ಕಾಂಗ್ರೆಸ್‌ ಸರ್ಕಾರ ಹೇರಿದ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ನರಮೇಧ’ ಎಂದರು.

‘19 ತಿಂಗಳ ಆ ಅವಧಿಯನ್ನು ನೆನಪಿಸಿಕೊಳ್ಳಲೂ ಭಯವಾಗುತ್ತಿದೆ. ಕರಾಳ ಹಾಗೂ ಅಪಾಯದ ಅವಧಿ ಅದಾಗಿತ್ತು. ವಾಕ್‌ ಸ್ವಾತಂತ್ರ್ಯವನ್ನಷ್ಟೇ ಅಲ್ಲ, ಬದುಕುವ ಹಕ್ಕನ್ನೂ ಕಸಿದುಕೊಂಡಿತು. ದೇಶದ ಮೇಲೆ ಸರ್ವಾಧಿಕಾರ ಹೇರಲಾಯಿತು. ಸರ್ಕಾರದ ನೀತಿಗಳು ಸಹ ಕ್ರೂರ ರೂಪ ಪಡೆದುಕೊಂಡವು. ಏನು ನಡೆಯುತ್ತಿದೆ ಎಂಬುದು ಸ್ವತಃ ಕಾಂಗ್ರೆಸ್‌ ಮುಖಂಡರಿಗೂ ತಿಳಿದಿರಲಿಲ್ಲ’ ಎಂದು ಅವರು ಹೇಳಿದರು.

‘ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ಪರಿಣಾಮ ದೇಶದಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಕೆಟ್ಟ ಸ್ವರೂಪ ಪಡೆಯಿತು. ಪಂಜಾಬ್‌, ಅಸ್ಸಾಂ ಹಾಗೂ ಆಂಧ್ರ ಪ್ರದೇಶದಲ್ಲಿ ದೇಶಕ್ಕೆ ಸವಾಲು ಎಸೆಯುವ ಸಂಘಟನೆಗಳು ಉದಯಿಸಿ ಬೆಳೆದವು’ ಎಂದರು.

‘ಮದ್ಯದ ಉದ್ಯಮಿ ವಿಜಯ್‌ ಮಲ್ಯ ಬ್ಯಾಂಕ್‌ ಸಾಲಗಳನ್ನು ಪಾವತಿಸಲು ಹಲವು ವರ್ಷಗಳು ಬೇಕಾಗಬಹುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಉಗ್ರರು ಸಮವಸ್ತ್ರ ಧರಿಸುತ್ತಾರಾ’

‘ದೇಶವನ್ನು ರಕ್ಷಿಸುತ್ತಿರುವ ಸೇನೆಯ ಬಗ್ಗೆ ಕಾಂಗ್ರೆಸ್‌ ಸಂಶಯ ವ್ಯಕ್ತಪಡಿಸುತ್ತದೆ. ಉಗ್ರರಿಗಿಂತ ನಾಗರಿಕರ ಹತ್ಯೆ ಹೆಚ್ಚಾಗಿದೆ ಎಂದು ಹುಯಿಲೆಬ್ಬಿಸುತ್ತಿದೆ. ಉಗ್ರರು ಸಮವಸ್ತ್ರ ಧರಿಸಿ ಬರುತ್ತಾರಾ’ ಎಂದು ಎಂ.ಜೆ.ಅಕ್ಬರ್‌ ಪ್ರಶ್ನಿಸಿದರು.

‘ಭಯೋತ್ಪಾದಕರು ಹಾಗೂ ಅವರ ನೆಲೆಯನ್ನು ನಾಶ ಮಾಡಲು ಗಡಿ ದಾಟಿ ದಾಳಿ ಮಾಡಿದ ಭಾರತೀಯ ಸೈನಿಕರ ಶೌರ್ಯವನ್ನು ಇಡೀ ಜಗತ್ತು ಪ್ರಶಂಸಿಸುತ್ತಿದೆ. ಆದರೆ, ಕಾಂಗ್ರೆಸ್‌ ಅನುಮಾನ ವ್ಯಕ್ತಪಡಿಸುತ್ತಿದೆ’ ಎಂದು ಕಿಡಿಕಾರಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !