ಸೋಮವಾರ, ಆಗಸ್ಟ್ 19, 2019
28 °C
ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಾಳೆ ಚುನಾವಣೆ

ನೌಕರರ ಸಂಘದ ಚುನಾವಣೆ ಮತದಾರರಿಗೆ ಆಮಿಷ–ಶಂಕೆ

Published:
Updated:

ಬೆಂಗಳೂರು: ಐದೂವರೆ ಲಕ್ಷ ನೌಕರರನ್ನು ಪ್ರತಿನಿಧಿಸುವ ‘ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ’ದ ಕೇಂದ್ರ ಘಟಕದ 2019–24ನೇ ಅವಧಿಯ ಅಧ್ಯಕ್ಷ ಮತ್ತು ಖಜಾಂಚಿ ಸ್ಥಾನಕ್ಕೆ ಬುಧವಾರ (ಆ.7) ಚುನಾವಣೆ ನಡೆಯಲಿದ್ದು, ಕೆಲವು ಮತದಾರರಿಗೆ ನಗದು, ಚಿನ್ನ, ಬೆಳ್ಳಿ ಉಡುಗೊರೆಯ ಆಮಿಷ ನೀಡಿರುವ ಗುಮಾನಿ ಇದೆ. 

ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ವಿವಿಧ ಇಲಾಖೆಗಳಿಂದ ಸಂಘದ ರಾಜ್ಯ ಪರಿಷತ್‌ಗೆ ಆಯ್ಕೆಯಾದ ಸದಸ್ಯರು ಸೇರಿ ಒಟ್ಟು 548 ಮತದಾರರಿದ್ದು, ಅಧ್ಯಕ್ಷ ಮತ್ತು ಖಜಾಂಚಿ ಸ್ಥಾನಕ್ಕೆ ಕ್ರಮವಾಗಿ ಹಾಲಿ ಅಧ್ಯಕ್ಷ ಎಚ್‌.ಕೆ. ರಾಮು ಮತ್ತು ಎಂ.ಸಿದ್ರಾಮಣ್ಣ, ಸಿ.ಎ. ಷಡಕ್ಷರಿ ಮತ್ತು ಆರ್‌. ಶ್ರೀನಿವಾಸ್‌, ಎಸ್‌. ಕೃಷ್ಣಮೂರ್ತಿ ಮತ್ತು ಸೋಮಶೇಖರ್‌, ಶಾಂತಾರಾಮ್‌ ಮತ್ತು ಬಿ. ಗಂಗಾಧರ್‌ ಹೀಗೆ ನಾಲ್ಕು ಪ್ಯಾನೆಲ್‌ಗಳಾಗಿ, ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು ಆಮಿಷ ಒಡ್ಡುತ್ತಿದ್ದಾರೆ.

ಪ್ರತಿ ಮತ ₹25 ಸಾವಿರದಿಂದ ₹ 50 ಸಾವಿರಕ್ಕೆ ಮಾರಾಟವಾಗುತ್ತಿದೆ. ಇಷ್ಟೇ ಅಲ್ಲ, ಒಂದು ಗ್ರಾಂ ಚಿನ್ನದ ಉಂಗುರ, ಬೆಳ್ಳಿ ತಟ್ಟೆ ಉಡುಗೊರೆಯಾಗಿ ನೀಡಿ ಮತದಾರರ ಓಲೈಕೆ ನಡೆಯುತ್ತಿದೆ ಎಂದು ಸಂಘದ ಸದಸ್ಯರೊಬ್ಬರು ಹೇಳಿದರು. ಸಂಘದ ಚುಕ್ಕಾಣಿ ಯಾರು ಹಿಡಿಯಬೇಕು ಎನ್ನುವ ವಿಚಾರ ಈ ಬಾರಿ ‘ಜಾತಿ’ ರಾಜಕೀಯದ ಬಣ್ಣ ಪಡೆದಿದ್ದು, ಆ ಆಧಾರದಲ್ಲೂ ಮತದಾರರು ವಿಭಜನೆಯಾಗುವ ಸಾಧ್ಯತೆ ಇರುವುದರಿಂದ ಕಣ ರಂಗೇರಿದೆ.

ಎಚ್‌.ಕೆ. ರಾಮು ಅವರಿಗೆ ಹಿಂದೆ ಅಧ್ಯಕ್ಷರಾಗಿದ್ದ ಭೈರಪ್ಪ, ಸಿಪ್ಪೇಗೌಡ ಅವರ ಬೆಂಬಲ ಇದೆ. ಎಸ್‌. ಕೃಷ್ಣಮೂರ್ತಿ ಅವರಿಗೆ ನಿಕಟಪೂರ್ವ ಅಧ್ಯಕ್ಷ ಮಂಜೇಗೌಡ, ಸಂಘದಲ್ಲಿ ಸಕ್ರಿಯರಾಗಿದ್ದ ಪಟೇಲ ಪಾಂಡು, ಯೋಗಾನಂದ ಅವರ ಅಭಯವಿದೆ. ಈ ಇಬ್ಬರು ‘ಒಕ್ಕಲಿಗ’ ಅಭ್ಯರ್ಥಿಗಳಿಗೆ ‘ಲಿಂಗಾಯತ’ ಸಮುದಾಯದ ಷಡಕ್ಷರಿ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಎಪಿಎಸ್ ಸಮಸ್ಯೆ ಎದುರಿಸುತ್ತಿರುವ ನೌಕರರ ಮತದ ಮೇಲೆ ಕಣ್ಣಿಟ್ಟು ಶಾಂತಾರಾಮ ಕಣದಲ್ಲಿದ್ದಾರೆ. 

Post Comments (+)