ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ಪ್ರವೇಶಾತಿ: ಡಿ.31ರವರೆಗೂ ಪ್ರವೇಶಾವಕಾಶ

Last Updated 17 ಡಿಸೆಂಬರ್ 2021, 21:21 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಮತ್ತು ಇತರ ಕೋರ್ಸುಗಳಿಗೆ ಡಿ.31ರವರೆಗೂ ಪ್ರವೇಶಾವಕಾಶ ಕಲ್ಪಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರತಿ ವರ್ಷ ಜುಲೈ 31ರೊಳಗೆ ಪ್ರವೇಶಾತಿ ಮುಗಿಸುವಂತೆ ಈ ಹಿಂದೆ (2012ರಲ್ಲಿ) ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಂಜಿನಿಯರಿಂಗ್ ಮತ್ತು ಫಾರ್ಮಸಿ ಕೋರ್ಸ್‌ಗಳಿಗೆ ಡಿ.31ರವರೆಗೂ ಪ್ರವೇಶ ಪಡೆಯಲು ಅವಕಾಶ ನೀಡಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿ ಸಲ್ಲಿಸಿತ್ತು. ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯದ ಮನವಿಯನ್ನು ಪುರಸ್ಕರಿಸಿದೆ ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟಿನ ಆದೇಶದಂತೆ ಇದೇ ತಿಂಗಳ 31ರ ಒಳಗೆ ಎಂಜಿನಿಯರಿಂಗ್ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮುಗಿಸಬೇಕಾಗಿದೆ. ಹೀಗಾಗಿ ವೈದ್ಯಕೀಯ ಸೀಟು ಹಂಚಿಕೆಯ ನಂತರ ಖಾಲಿ ಉಳಿದ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಫಾರ್ಮಸಿ ಮುಂತಾದ ಸೀಟುಗಳಿಗೆ ಮತ್ತೊಮ್ಮೆ ‘ಕ್ಯಾಶುಯಲ್ ವೇಕೆನ್ಸಿ ರೌಂಡ್’ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಹಿಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟುಗಳನ್ನು ಒಟ್ಟಿಗೇ ಹಂಚಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಆದಾಯ ಮಿತಿ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಇದು ಇತ್ಯರ್ಥವಾಗುವವರೆಗೂ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶಾತಿ ಕೈಗೊಳ್ಳದಂತೆ ತಡೆಯಾಜ್ಞೆ ನೀಡಲಾಗಿದೆ. ಹೀಗಾಗಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ) ಮತ್ತು ಭಾರತೀಯ ಮೆಡಿಕಲ್ ಕೌನ್ಸಿಲ್ ಜತೆ ಚರ್ಚಿಸಿ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳಿಗೆ ಸಂಯೋಜಿತವಾಗಿ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT