ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಸ್ಕೇಪ್’ ಕಾರ್ತಿಕ್ ಸೆರೆ; ಒಂದು ಕೆ.ಜಿ ಚಿನ್ನ ಜಪ್ತಿ

Last Updated 18 ಆಗಸ್ಟ್ 2018, 20:38 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಂಟು ಮನೆಗಳಲ್ಲಿ ಕಳವು ಮಾಡಿ ಪರಾರಿಯಾಗಿದ್ದ ಆರೋ‍ಪಿ ಕಾರ್ತಿಕ್ ಅಲಿಯಾಸ್ ‘ಎಸ್ಕೇಪ್’ (27) ಎಂಬಾತನನ್ನು ವಿದ್ಯಾರಣ್ಯಪುರ ಪೊಲೀಸರು ಸೆರೆ ಹಿಡಿದಿದ್ದಾರೆ.

ಹೆಣ್ಣೂರು ಸಮೀಪದ ಪ್ರಕೃತಿ ಲೇಔಟ್ ನಿವಾಸಿಯಾದ ಆರೋಪಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪರಾರಿಯಾದ ಮೊದಲ ಕೈದಿ ಎಂಬ ಕುಖ್ಯಾತಿ ಹೊಂದಿದ್ದಾನೆ. ತಲೆಮರೆಸಿಕೊಂಡು ಓಡಾಡುತ್ತಿದ್ದ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ₹30 ಲಕ್ಷ ಮೌಲ್ಯದ 1 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

‘2006ರಿಂದಲೇ ಕಳ್ಳತನ ಎಸಗಲಾರಂಭಿಸಿದ್ದ ಕಾರ್ತಿಕ್‌ನ ವಿರುದ್ಧ 17 ಪ್ರಕರಣಗಳು ದಾಖಲಾಗಿವೆ. ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. 2007ರಲ್ಲಿ ಆತ ಜೈಲಿನಿಂದ ಪರಾರಿಯಾಗಿದ್ದ. 2018ರ ಜನವರಿಯಲ್ಲಿ ಆತನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದರು. ಎರಡು ತಿಂಗಳ ನಂತರ ಜಾಮೀನು ಮೇಲೆ ಜೈಲಿನಿಂದ ಹೊರಬಂದಿದ್ದ ಆತ, ಪುನಃ ಕಳ್ಳತನ ಎಸಗಲಾರಂಭಿಸಿದ್ದ’ ಎಂದು ವಿದ್ಯಾರಣ್ಯಪುರ ಪೊಲೀಸರು ಹೇಳಿದರು.

‘ವಿದ್ಯಾರಣ್ಯಪುರ, ಅಮೃತಹಳ್ಳಿ, ಕೊಡಿಗೇಹಳ್ಳಿ, ಆರ್‌.ಟಿ.ನಗರ ಹಾಗೂ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಮನೆಗಳವು ಮಾಡಿದ್ದ. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲೇ ಕೊಲ್ಕತ್ತಾಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ಆತನ ಪತ್ತೆಗೆ ರಚಿಸಿದ್ದ ವಿಶೇಷ ತಂಡವು ಕೊಲ್ಕತ್ತಾಕ್ಕೆ ಹೋಗಿತ್ತು. ಅದು ತಿಳಿಯುತ್ತಿದ್ದಂತೆ ನಗರಕ್ಕೆ ಹಿಂತಿರುಗಿದ್ದ’.

‘ಆರೋಪಿ ಮನೆ ಮೇಲೆ ದಾಳಿ ನಡೆಸಿದಾಗ ತಪ್ಪಿಸಿಕೊಂಡು ಓಡಲಾರಂಭಿಸಿದ್ದ. 2 ಕಿ.ಮೀವರೆಗೂ ಆತನನ್ನು ಬೆನ್ನಟ್ಟಿ ಹಿಡಿಯಲಾಯಿತು’ ಎಂದು ಪೊಲೀಸರು ತಿಳಿಸಿದರು.

‘ಕಳ್ಳತನದಿಂದ ಬಂದ ಹಣವನ್ನೆಲ್ಲ ಆರೋಪಿ ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದ. ಹಲವು ಮಹಿಳೆಯರ ಜತೆ ಸಲುಗೆ ಹೊಂದಿದ್ದು, ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ. ಬೆಲೆಬಾಳುವ ಉಡುಗೊರೆಗಳನ್ನು ಕೊಡುತ್ತಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT