ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪ್ರಮಾಣ ಇಳಿದರೂ ಪರೀಕ್ಷೆ ಕಡಿಮೆ ಮಾಡಿಲ್ಲ: ಬಿಬಿಎಂಪಿ ಆಯುಕ್ತ

Last Updated 20 ಜುಲೈ 2021, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಇಳಿಕೆಯಾದರೂ ಕೋವಿಡ್ ಪರೀಕ್ಷೆ ಪ್ರಮಾಣ ಇಳಿಕೆ ಮಾಡಿಲ್ಲ. ದೇಶದ ಬೇರೆ ಮಹಾನಗರಗಳಿಗಿಂತ ದುಪ್ಪಟ್ಟು ಪರೀಕ್ಷೆಗಳನ್ನು ನಮ್ಮಲ್ಲಿ ನಡೆಸಲಾಗುತ್ತಿದೆ’ ಎಂದು ಮುಖ್ಯ ಗೌರವ್ ಗುಪ್ತ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಮ್ಮಲ್ಲಿ ಅವಶ್ಯಕತೆಗಿಂತಲೂ ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ರಾಜ್ಯದಲ್ಲಿ ನಡೆಯುತ್ತಿರುವ ಕೋವಿಡ್‌ ಪರೀಕ್ಷೆಗಳಲ್ಲಿ ಅರ್ಧದಷ್ಟು ಪಾಲು ಬೆಂಗಳೂರಿನದು’ ಎಂದರು.

Caption
Caption

‘ಕೋವಿಡ್‌ ಮೂರನೇ ಅಲೆ ತಡೆಯಲು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ವರದಿ ನೀಡಿದೆ. ಬಿಬಿಎಂಪಿ ಹಂತದಲ್ಲಿ ರಚಿಸಲಾದ ಮಕ್ಕಳ ತಜ್ಞರ ಸಮಿತಿಯೂ ಕೆಲ ಸಲಹೆಗಳನ್ನು ನೀಡಿದೆ. ಇವುಗಳ ಆಧಾರದಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆಸ್ಪತ್ರೆಯ ಮೂಲಸೌಕರ್ಯ ಹೆಚ್ಚಳ ಮಾಡಲಾಗುತ್ತಿದೆ’ ಎಂದರು.

‘ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಪ್ರಸ್ತುತ 50 ಸಾವಿರಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ನಿತ್ಯ ಪತ್ತೆಯಾಗುತ್ತಿವೆ. ಕೋವಿಡ್‌ ಲಸಿಕೆ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನದಿಂದಾಗಿ ಅಲ್ಲಿ ರೋಗಿಗಳ ಸ್ಥಿತಿ ಗಂಭೀರ ಹಂತ ತಲುಪುತ್ತಿಲ್ಲ. ನಾವೂ ಲಸಿಕೆ ಕಾರ್ಯಕ್ರಮಕ್ಕೆ ಆದ್ಯತೆ ನೀಡಿದ್ದೇವೆ. ಹಾಗಾಗಿ ಮೂರನೇ ಅಲೆ ಕಾಣಿಸಿಕೊಂಡರೂ ಚಿಕಿತ್ಸೆಗೆ ಹಾಸಿಗೆಗಳ ಬೇಡಿಕೆ ಕಡಿಮೆ ಇರಲಿದೆ. ಲಸಿಕೆ ಪಡೆಯುವ ಅರ್ಹತೆ ಹೊಂದಿರುವ ಶೇ 55ರಷ್ಟು ಮಂದಿಗೆ ಮೊದಲ ಡೋಸ್‌ ನೀಡಲಾಗಿದೆ. ಶೇ 15ರಷ್ಟು ಮಂದಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ’ ಎಂದರು.

‘ಕಳೆದ ವಾರ ನಗರದಲ್ಲಿ ನಿತ್ಯ ಸರಾಸರಿ 400 ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ಈ ಪ್ರಮಾಣ ಮತ್ತಷ್ಟು ಕಡಿಮೆ ಆಗಿದೆ. ಕೋವಿಡ್‌ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆ ಆಗುತ್ತಿದೆ. ದಿನಕ್ಕೆ ಸರಾಸರಿ 30 ಮಂದಿ ಮಾತ್ರ ಸರ್ಕಾರಿ ಕೋಟಾದಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸದ್ಯ320 ಮಂದಿ ಮಾತ್ರ ಸರ್ಕಾರಿ ಕೋಟಾದಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಾಸ್ತಿ ಸಂಖ್ಯೆಯಲ್ಲಿ ಹಾಸಿಗೆಗಳನ್ನು ಬಿಬಿಎಂಪಿ ತೆಕ್ಕೆಗೆ ಪಡೆದರೆ ಅನ್ಯ ಕಾಯಿಲೆ ಹೊಂದಿರುವವರ ಚಿಕಿತ್ಸೆಗೆ ಅನನುಕೂಲ ಆಗಲಿದೆ’ ಎಂದರು.

‘ನಗರದಲ್ಲಿ 13 ಸಾವಿರದಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದಡಿ ಚಿಕಿತ್ಸೆಗೆ ಕಾಯ್ದಿರಿಸಲಾಗಿತ್ತು. ಈ ಸಂಖ್ಯೆಯನ್ನು 50ಸಾವಿರಕ್ಕೆ, ನಂತರ 1,800ಕ್ಕೆ ಇಳಿಕೆ ಮಾಡಲಾಗಿದೆ. ಇದನ್ನೂ ಇನ್ನಷ್ಟು ಕಡಿಮೆ ಮಾಡಲಿದ್ದೇವೆ. ಅವಶ್ಯಕತೆ ಬಿದ್ದಾಗಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಿನ ಹಾಸಿಗೆಗಳನ್ನು ನಮ್ಮ ತೆಕ್ಕೆಗೆ ಪಡೆಯುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT