ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಂಡ್‌ ಬೆಂಗಳೂರಿನ ಖ್ಯಾತಿ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ: ಸಿಎಂ ಬೊಮ್ಮಾಯಿ

Last Updated 24 ಮಾರ್ಚ್ 2023, 3:25 IST
ಅಕ್ಷರ ಗಾತ್ರ

ಬೆಂಗಳೂರು:: ಬಿಬಿಎಂಪಿ ವತಿಯಿಂದ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಪಂತರಪಾಳ್ಯದಲ್ಲಿ ನಿರ್ಮಿಸಿರುವ “ಡಾ. ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ” ಹಾಗೂ ಅಭಿವೃದ್ಧಿಪಡಿಸಲಾಗಿರುವ 'ನಾಯಂಡಹಳ್ಳಿ ಕೆರೆ'ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಲೋಕಾರ್ಪಣೆ ಮಾಡಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನರು ಅದೃಷ್ಟವಂತರು. ನಂಬಿದ ಜನರಿಗೆ, ವಿಶ್ವಾಸಕ್ಕೆ ನಿಷ್ಠೆಯಿಂದ 24 ಗಂಟೆಗಳ ಕಾಲ ಜನಸೇವೆ ಮಾಡುವ ಸೋಮಣ್ಣರವರು ನಿಜವಾದ ಜನನಾಯಕ. ರಾಜ್ಯದಲ್ಲಿ 3 ಲಕ್ಷ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಅಲ್ಲದೇ ರಾಜ್ಯದಲ್ಲಿ 5 ಲಕ್ಷ ಮನೆ ನಿರ್ಮಿಸಲಾಗಿದೆ ಇದರ ಹಿಂದಿನ ಶಕ್ತಿ ಸೊಮಣ್ಣ. ಬೆಂಗಳೂರು ನಗರ ಬ್ರಾಂಡ್ ಆಗಿದೆ, ವಿದೇಶದಲ್ಲಿ ಸಹ ನಗರದ ಖ್ಯಾತಿ ಇದೆ. 7000 ಸಾವಿರ ಸಿಸಿ ಕ್ಯಾಮರವನ್ನು ಮಹಿಳೆಯರ ಸುರಕ್ಷತೆಗಾಗಿ ನಗರದಾದ್ಯಂತ ಆಳವಡಿಸಲಾಗಿದೆ. ರಾಜಾಕಾಲುವೆಗೆ 1000 ಕೋಟಿ ಅನುದಾನ, ಬೆಂಗಳೂರು ನಗರ ಅಭಿವೃದ್ದಿಗೆ 6500 ಕೋಟಿ ಅನುದಾನ ನೀಡಿದ್ದೇವೆ. ನಾಡಪ್ರಭು ಕೆಂಪೇಗೌಡರ ಬೆಂಗಳೂರು ಸುಂದರವಾಗಿದೆ. ಬ್ರಾಂಡ್ ಬೆಂಗಳೂರಿನ ಹೆಸರು ಉಳಿಸುವುದು ಬಹಳ ಕಷ್ಟ, ಹಾಳು ಮಾಡುವುದು ಸುಲಭ. ಆದ್ದರಿಂದ ನಾವೆಲ್ಲ ಬ್ರಾಂಡ್ ಬೆಂಗಳೂರಿನ ಹೆಸರನ್ನು ಉಳಿಸೋಣ. ಎಲ್ಲರ ಸಹಕಾರದಿಂದ ಬೆಂಗಳೂರಿಗೆ ಉತ್ತಮ ಹೆಸರು ಬರಲಿದೆ. ಇದೇ ಸಂದರ್ಭದಲ್ಲಿ ಸ್ವಯಂ ಪ್ರಭ ಕನ್ಸ್ಟ್ರಕ್ಷನ್ ಕಂಪೆನಿಯು ಕೇವಲ ನಾಲ್ಕೂವರೆ ತಿಂಗಳಲ್ಲಿ ಡಾ. ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ ಎಂದು ಅಭಿನಂದನೆಯನ್ನು ತಿಳಿಸಿದರು.

ಸಚಿವ ವಿ.ಸೋಮಣ್ಣ ಮಾತನಾಡಿ ಕರ್ನಾಟಕ ರತ್ನ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ರವರ ಹೆಸರಿನಲ್ಲಿ ಪಂತರಪಾಳ್ಯ ಸುತ್ತಮುತ್ತಲ ನಿವಾಸಿಗಳಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಹಿಂದೆ ಇದು ಸ್ಲಂ ಪ್ರದೇಶ, ಕಳ್ಳಕಾಕರ ಪ್ರದೇಶವಾಗಿದ್ದು ಇದೀಗ ಸ್ಥಳೀಯ ಜನರ ಆಶೀರ್ವಾದದಿಂದ ಡಾ.ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. ದಾಸರಹಳ್ಳಿಯಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರಿನಲ್ಲಿ 300 ಹಾಸಿಗೆ ಮತ್ತು ಪಂತರಪಾಳ್ಯದಲ್ಲಿ 205 ಹಾಸಿಗೆಗಳ ಆಸ್ಪತ್ರೆ ಮತ್ತು 10 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಶಾಲಾ ಕಾಲೇಜುಗಳು, ದೇವಸ್ಥಾನಗಳು, ಉದ್ಯಾನಗಳು, 10ಕ್ಕೂ ಅಧಿಕ ಶುದ್ದ ಕುಡಿಯುವ ನೀರಿನ ಘಟಕ, ನೂತನ ಪೊಲೀಸ್ ಠಾಣೆ ಹಾಗೂ 60ಕ್ಕೂ ಹೆಚ್ಚು ಉದ್ಯಾನವನಗಳನ್ನು ನವೀಕರಿಸಲಾಗಿದೆ. ನಾಯಂಡಹಳ್ಳಿ ಕೆರೆಯನ್ನು ಅಭಿವೃದ್ದಿಗೊಳಿಸಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಏಳು ಐ.ಎ.ಎಸ್.ತರಬೇತಿ ಕೇಂದ್ರಗಳಿದ್ದು, ಬಡವರ್ಗದ ವಿದ್ಯಾರ್ಥಿಗಳ ಒಳಿತಿಗಾಗಿ ಸರಕಾರಿ ಶಾಲೆಗಳನ್ನು ಆಧುನಿಕರಣಗೊಳಿಸಲಾಗಿದೆ. ಸಾಮಾನ್ಯ ಜನರ ಒಡನಾಡಿಯಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಅಲ್ಪ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಸ್ವಯಂ ಪ್ರಭ ಕನ್ಸ್‌ಸ್ಟ್ರಕ್ಷನ್‌ ಕಂಪೆನಿಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ನಟ ರಾಘವೇಂದ್ರ ರಾಜ್ ಕುಮಾರ್ ಅವರು ಮಾತನಾಡಿ ಅಭಿಮಾನಿ ದೇವರುಗಳಿಗೆ ಸಾಷ್ಟಂಗ ನಮಸ್ಕಾರ. ಪುನೀತ್ ಅವರ ಹೆಸರಿನಲ್ಲಿ ಇಂಥ ಆಸ್ಪತ್ರೆಯನ್ನು ನಿರ್ಮಿಸಿದ ಸಚಿವ ಸೋಮಣ್ಣ ಅವರಿಗೆ ಧನ್ಯವಾದಗಳು. ನೂತನವಾಗಿ ಲೋಕಾರ್ಪಣೆಯಾದ ಈ ಆಸ್ಪತ್ರೆಯನ್ನು ದೇವಸ್ಥಾನ ಎಂದು ಭಾವಿಸಿ. ಈ ಆಸ್ಪತ್ರೆಯನ್ನು ಶುಚಿಯಾಗಿಟ್ಟುಕೊಂಡು ಸದ್ಬಳಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದ ಅವರು, ಪುನೀತ್ ರಾಜ್ ಕುಮಾರ್ ಅವರಿಗೆ ಅಣ್ಣನಾಗಿ ಇದ್ದೆ ಎಂಬುದೇ ಸಂತೋಷ. ಪುನೀತ್ ದೊಡ್ಡತನ ಅದರಿಂದ ಅವನ ಮೇಲಿನ‌ ಗೌರವ ಹೆಚ್ಚಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್, ಚಲನಚಿತ್ರ ನಟ,ನಿರ್ಮಾಪಕ ಡಾ.ರಾಘವೇಂದ್ರ ರಾಜ್ ಕುಮಾರ್, ಚಲನಚಿತ್ರ ನಿರ್ಮಾಪಕರಾದ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್.ಆರ್.ರಮೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡ, ಬಿಬಿಎಂಪಿ ಮಾಜಿ ಸದಸ್ಯರು, ಅಧಿಕಾರಿಗಳು, ಕಾರ್ಯಕರ್ತರು,ಸ್ವಯಂ ಪ್ರಭ ಕನ್ಸ್‌ಸ್ಟ್ರಕ್ಷನ್‌ ಕಂಪೆನಿಯ ಮುಖ್ಯಸ್ಥರಾದ ರತ್ನಾಕರ ಕಾಮತ್‌, ಗಣೇಶ್‌ ಆರ್. ಕಾಮತ್‌ ಹಾಗೂ ಸಿಬ್ಬಂದಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT