ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳೂರು ಸಂತೆ: ಸೌಕರ್ಯದ್ದೇ ಚಿಂತೆ

ನಿರ್ವಹಣೆ ಇಲ್ಲದೆ ಸೊರಗಿದ ಶೌಚಾಲಯ; ರೈತರು, ವ್ಯಾಪಾರಸ್ಥರು, ಗ್ರಾಹಕರ ಪಡಿಪಾಟಲು
Last Updated 25 ಮೇ 2018, 5:49 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ ವಾಣಿಜ್ಯ ಕೇಂದ್ರ ಬೆಳ್ಳೂರಿನಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಆದರೆ, ಮೂಲಸೌಕರ್ಯಗಳ ಕೊರತೆಯಿಂದಾಗಿ ಸಂತೆಗೆ ಬರುವವರು ಪಡಿಪಾಟಲು ಅನುಭವಿಸುವಂತಾಗಿದೆ.

ಸಂತೆ ಆವರಣದಲ್ಲಿರುವ ಶೌಚಾಲಯವು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಸಂತೆಗೆ ಬರುವ ವ್ಯಾಪಾರಿಗಳು, ರೈತರು ಹಾಗೂ ಗ್ರಾಹಕರು ರಸ್ತೆ ಬದಿಗಳಲ್ಲಿ ಬಹಿರ್ದೆಸೆ ಮಾಡುವಂತಾಗಿದೆ. ಇದರಿಂದ ರಸ್ತೆಗಳ ಇಕ್ಕೆಲಗಳು ಗಬ್ಬೆದ್ದು ನಾರುತ್ತಿವೆ.

ಬೆಳ್ಳೂರನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ತಾಲ್ಲೂಕಿನಲ್ಲೇ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಯುವ ಸ್ಥಳವಾಗಿ ಗುರುತಿಸಿಕೊಂಡಿದೆ. ಬೆಳ್ಳೂರು, ಬಿಂಡಿಗನವಿಲೆ, ಕಸಬಾ ಹೋಬಳಿಯ ಜನರು ಈ ಸಂತೆಯನ್ನು ಅವಲಂಬಿಸಿದ್ದಾರೆ. ಹೀಗಾಗಿ, ಇಲ್ಲಿ ವ್ಯಾಪಾರ ಬಲುಜೋರು. ತಾಲ್ಲೂಕು ಕೇಂದ್ರ ನಾಗಮಂಗಲವಾದರೂ ಬೆಳ್ಳೂರು ಅದನ್ನು ಮೀರಿ ವಾಣಿಜ್ಯ ಹಾಗೂ ಶೈಕ್ಷಣಿಕವಾಗಿ ಬೆಳೆದಿದೆ. ಆದರೆ, ಮೂಲಸೌಕರ್ಯ ಒದಗಿಸಲು ಸ್ಥಳೀಯ ಆಡಳಿತ ವಿಫಲವಾಗಿದೆ.

ತೆಂಗಿನಕಾಯಿ, ತಾಜಾ ತರಕಾರಿ, ವಿವಿಧ ರೀತಿಯ ಕಾಳುಗಳು, ಕೊಬ್ಬರಿಎಣ್ಣೆ, ನಾಗಮಂಗಲದ ಸೊಗಡಿನ ಬೆಣ್ಣೆಗೆ ಸಂತೆ ಖ್ಯಾತಿ ಪಡೆದಿದೆ. ಪ್ರತಿ ಸಂತೆ ವೇಳೆ ತೆಂಗಿನಕಾಯಿ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ. ಪಾಂಡವಪುರ ಮತ್ತಿತರ ಕಡೆಗಳಿಂದ ರೈತರು ತರಕಾರಿಗಳನ್ನು ತಂದು ಮಾರುತ್ತಾರೆ.

ಕೃಷಿ ಉತ್ಪನ್ನ ಮಾರುಕಟ್ಟೆಯು 2007ರಲ್ಲಿ ನಬಾರ್ಡ್ ಅನುದಾನದಲ್ಲಿ ಶೆಡ್ ಮತ್ತು ಶೌಚಾಲಯವನ್ನು ನಿರ್ಮಿಸಿ ಅದನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿತ್ತು. ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡುತ್ತಿರುವ ಗ್ರಾಮ ಪಂಚಾಯಿತಿಯು ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

‘ಶೌಚಾಲಯ ನಿರ್ವಹಣೆ ಮಾಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ರೈತರು ಮತ್ತು ವ್ಯಾಪಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ರೈತ ಮುಖಂಡ ಶ್ರೀರಂಗಪುರ ರಂಗೇಗೌಡ ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ರಫೀಕ್, ‘ಈಗ ಇರುವ ಶೌಚಾಲಯವು ನಮ್ಮ ಅಧೀನದಲ್ಲಿಲ್ಲ. ಹೀಗಾಗಿ, ಸಮಿತಿಯು ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಅದನ್ನು ಗ್ರಾಮ ಪಂಚಾಯಿತಿಯೇ ಅಭಿವೃದ್ಧಿ ಪಡಿಸಬೇಕು’ ಎಂದು ತಿಳಿಸಿದರು.

ಶೌಚಾಲಯ ನಿರ್ಮಾಣ

ಸಂತೆ ಆವರಣದಲ್ಲಿ ಶೌಚಾಲಯವಿದೆ. ಆದರೆ, ಸಂತೆಗೆ ಹೆಚ್ಚಿನ ಸಂಖ್ಯೆಯ ಜನರು ಬರುತ್ತಿದ್ದಾರೆ. ಹೀಗಾಗಿ, ಒಂದು ಸಾಕಾಗುತ್ತಿಲ್ಲ. ಮತ್ತೊಂದು ಶೌಚಾಲಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಶೀಘ್ರದಲ್ಲೇ ನಿರ್ಮಿಸಲಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಆಧಿಕಾರಿ ರಫೀಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT