ಶುಕ್ರವಾರ, ಆಗಸ್ಟ್ 12, 2022
21 °C
ಪಾಲಿಕೆ ಆಸುಪಾಸಿನ 1 ಕಿ.ಮೀ ವ್ಯಾಪ್ತಿಯ ಗ್ರಾಮಗಳು ಹೊಸತಾಗಿ ಸೇರ್ಪಡೆ

ಮತ್ತಷ್ಟು ಹಿಗ್ಗಲಿದೆ ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಸುಪಾಸಿನ 111 ಗ್ರಾಮಗಳು, ಒಂದು ಪುರಸಭೆ ಹಾಗೂ ಏಳು ನಗರಸಭೆಗಳನ್ನು ತೆಕ್ಕೆಗೆ ಸೇರಿಸಿಕೊಂಡು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಿ (ಬಿಬಿಎಂಪಿ) 2007ರಲ್ಲಿ ಮೇಲ್ದರ್ಜೆಗೇರಿದ್ದ ಬಿಬಿಎಂ‍ಪಿ ವ್ಯಾಪ್ತಿ ಮತ್ತಷ್ಟು ಹಿಗ್ಗಲಿದೆ.

ಸರ್ಕಾರ ಅಂದುಕೊಂಡಂತೆ ಎಲ್ಲವೂ ನಡೆದರೆ ಈಗಿನ ಗಡಿಯ 1 ಕಿ.ಮೀ ವ್ಯಾಪ್ತಿಯ ಹಲವು ಗ್ರಾಮ ಪಂಚಾಯಿತಿಗಳು, ನಗರಸಭೆ ಹಾಗೂ ಪುರಸಭೆಗಳು ಬಿಬಿಎಂಪಿಗೆ ಮತ್ತೆ ಸೇರ್ಪಡೆಯಾಗಲಿವೆ.

ಬಿಬಿಎಂಪಿ ಗಡಿಯ ಆಚೆಗೆ ಇರುವ ಗ್ರಾಮ ಪಂಚಾಯಿತಿ, ನಗರಸಭೆ ಹಾಗೂ ಪುರಸಭೆಗಳ ಒಂದು ಕಿ.ಮೀ ವರೆಗಿನ ಪ್ರದೇಶವನ್ನು ಪಾಲಿಕೆಗೆ ಸೇರಿಸಲು ವಿಧಾನಮಂಡಲದ ಜಂಟಿ ‍ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ. ’ಬಿಬಿಎಂಪಿ ಮಸೂದೆ– 2020‘ ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ವರದಿಯನ್ನು ಅಧ್ಯಕ್ಷ ಎಸ್‌.ರಘು ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು.

ಕೊನೆ ಕ್ಷಣದ ತೀರ್ಮಾನ: ‘ಬಿಬಿಎಂಪಿ ವ್ಯಾಪ್ತಿಯನ್ನು ಹಿಗ್ಗಿಸುವಂತೆ ಒತ್ತಡ ಇರುವುದು ನಿಜ. ಆದರೆ, ಈಗಾಗಲೇ ಸೇರ್ಪಡೆಗೊಂಡ ಪ್ರದೇಶಗಳಿಗೆ ಮೂಲಸೌಕರ್ಯ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಬಿಬಿಎಂಪಿ ವ್ಯಾಪ್ತಿಯನ್ನು ಹೆಚ್ಚಿಸುವುದಿಲ್ಲ. ಈಗಿರುವಷ್ಟೇ ವ್ಯಾಪ್ತಿಯನ್ನು ಉಳಿಸಿಕೊಂಡು ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲಾಗುತ್ತದೆ’ ಎಂದು ಸಮಿತಿಯ ಅಧ್ಯಕ್ಷ ಎಸ್‌.ರಘು ಅವರು ಈ ಹಿಂದೆ ತಿಳಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ಹಿಗ್ಗಿಸುವ ತೀರ್ಮಾನವನ್ನು ಸಮಿತಿ ಕೈಗೊಂಡಿದೆ.

ಪ್ರಸ್ತುತ 198 ವಾರ್ಡ್‌ಗಳ ಬಿಬಿಎಂಪಿ 741.2 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಇನ್ನು ಎಷ್ಟು ಗ್ರಾಮಗಳು ಹೊಸತಾಗಿ ಸೇರ್ಪಡೆಯಾಗಲಿವೆ, ಆ ಗ್ರಾಮಗಳು ಯಾವುವು ಎಂಬ ವಿವರಗಳನ್ನು ಸಮಿತಿಯ ವರದಿಯಲ್ಲಿ ಉಲ್ಲೇಖಿಸಿಲ್ಲ. ಬಿಬಿಎಂಪಿ ಆಸುಪಾಸಿನ 1 ಕಿ.ಮೀ ವ್ಯಾಪ್ತಿಯ ಗ್ರಾಮಗಳನ್ನು ಸೇರ್ಪಡೆಗೊಳಿಸುವ ಬಗ್ಗೆಯಷ್ಟೇ ಸಮಿತಿ ವರದಿಯಲ್ಲಿ ಉಲ್ಲೇಖವಿದೆ. ಈ ಗ್ರಾಮಗಳು ಯಾವುವು ಎಂಬ ಬಗ್ಗೆ ಸರ್ಕಾರ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ.

ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಮಾಡಲು ಸರ್ಕಾರ ಐಎಎಸ್‌ ಅಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ಬಿಡಿಎ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ವಿಶೇಷ ಆಯುಕ್ತರು (ಕಂದಾಯ) ಈ ಸಮಿತಿಯಲ್ಲಿದ್ದಾರೆ. ಈ ಸಮಿತಿಯೇ ಬಿಬಿಎಂಪಿ ವ್ಯಾಪ್ತಿ ಎಷ್ಟು ವಿಸ್ತರಿಸಬಹುದು, ಯಾವೆಲ್ಲ ಗ್ರಾಮಗಳನ್ನು ಸೇರಿಸಿಕೊಳ್ಳಬಹುದು ಎಂಬ ಬಗ್ಗೆ ಶಿಫಾರಸು ಮಾಡಲಿದೆ.

ವಾರ್ಡ್ ಮರುವಿಂಗಡಣೆಯ ಮಾನದಂಡಗಳನ್ನು ಸರ್ಕಾರ ರೂಪಿಸಿಲ್ಲ. ಹಾಗಾಗಿ ಮಂಜುನಾಥ್‌ ಪ್ರಸಾದ್‌ ನೇತೃತ್ವದ ಸಮಿತಿಯು ಮರುವಿಂಗಡಣೆ ಕಾರ್ಯವನ್ನು ಅಧಿಕೃತವಾಗಿ ಇನ್ನೂ ಆರಂಭಿಸಿಲ್ಲ.

‘ಗ್ರಾಮಗಳ ಸೇರ್ಪಡೆಗೆ ಪ್ರತ್ಯೇಕ ಅಧಿಸೂಚನೆ ಅಗತ್ಯ’

‘ಪಾಲಿಕೆಯ ವ್ಯಾಪ್ತಿಯನ್ನು ಹಿಗ್ಗಿಸುವ ಬಗ್ಗೆ ಬಿಬಿಎಂಪಿ ಮಸೂದೆಯಲ್ಲೇ ಉಲ್ಲೇಖಿಸಿದರೆ ಸಾಲದು. ಅದಕ್ಕಾಗಿ ರಾಜ್ಯಪಾಲರು ಸೇರ್ಪಡೆಗೊಳ್ಳಲಿರುವ ಪ್ರದೇಶಗಳನ್ನು ಖಚಿತವಾಗಿ ಉಲ್ಲೇಖಿಸಿ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಈ ಬಗ್ಗೆ ರಾಜ್ಯಪತ್ರದಲ್ಲಿ ಕರಡು ಪಟ್ಟಿ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಅಥವಾ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕಾಗುತ್ತದೆ. ಜನರ ಪ್ರತಿಕ್ರಿಯೆ ಆಧರಿಸಿ ಹೊಸ ಗ್ರಾಮಗಳ ಸೇರ್ಪಡೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆಗೆ ಹೊಸ ಪ್ರದೇಶವನ್ನು ಸೇರ್ಪಡೆಗೊಳಿಸುವುದಕ್ಕೆ ಅಥವಾ ಯಾವುದಾದರೂ ಪ್ರದೇಶವನ್ನು ಕೈಬಿಡುವುದಕ್ಕೆ 1976ರ ಕೆಎಂಸಿ ಕಾಯ್ದೆಯ ಸೆಕ್ಷನ್‌ 4 (1) ಅವಕಾಶ ಮಾಡಿಕೊಡುತ್ತದೆ. ಬಿಬಿಎಂಪಿ ಮಸೂದೆ 2020’ಯಲ್ಲೂ ಈ ಅಂಶವನ್ನು ಸೇರಿಸಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. 

ವಾರ್ಡ್‌ನ ಸರಾಸರಿ ಜನಸಂಖ್ಯೆ ಎಷ್ಟು?

ಬಿಬಿಎಂಪಿ ವಾರ್ಡ್‌ಗಳಲ್ಲಿ ಪ್ರಸ್ತುತ ಜನಸಂಖ್ಯೆ ಸಮನಾಗಿ ಹಂಚಿಕೆಯಾಗಿಲ್ಲ. ಈ ಕುರಿತು ಏಕರೂಪತೆ ಸಾಧಿಸುವ ಸಲುವಾಗಿಯೇ ಸರ್ಕಾರ ಬಿಬಿಎಂಪಿ ಮರುವಿಂಗಡಣೆಗೆ ಮುಂದಾಗಿತ್ತು. ಬಿಬಿಎಂಪಿ ವ್ಯಾಪ್ತಿಯನ್ನು ಈಗಿನಷ್ಟೇ ಉಳಿಸಿಕೊಂಡು ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಈ ಮೊದಲು ಶಿಫಾರಸು ಮಾಡುವಾಗ ವಿಧಾನಮಂಡಲದ ಜಂಟಿ ‍ಪರಿಶೀಲನಾ ಸಮಿತಿಯು ಪ್ರತಿ ವಾರ್ಡ್‌ನಲ್ಲಿ ತಲಾ 35 ಸಾವಿರ ಜನಸಂಖ್ಯೆ ಇರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿತ್ತು. ಬಿಬಿಎಂಪಿ ವ್ಯಾಪ್ತಿ ಹೆಚ್ಚಾದರೆ ಪ್ರತಿ ವಾರ್ಡ್‌ನ ಸರಾಸರಿ ಜನಸಂಖ್ಯೆ ಏರುಪೇರಾಗುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು