ಎಚ್‌ಎಎಲ್‌ ಬಳಿ ಸ್ಫೋಟ; ಬೆಚ್ಚಿದ ಜನ

7
ಕಸದ ರಾಶಿಯಲ್ಲಿದ್ದ ಜಿಲೆಟಿನ್ ಕಡ್ಡಿ; ಸಮೀಪದ ಮನೆ ಗೋಡೆಗಳಲ್ಲಿ ಬಿರುಕು

ಎಚ್‌ಎಎಲ್‌ ಬಳಿ ಸ್ಫೋಟ; ಬೆಚ್ಚಿದ ಜನ

Published:
Updated:
ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸುತ್ತಿರುವುದು

ಬೆಂಗಳೂರು: ಎಚ್‌ಎಎಲ್‌ ಸಮೀಪದ ಲಾಲ್ ಬಹದ್ಧೂರ್ ಶಾಸ್ತ್ರಿನಗರದಲ್ಲಿ ಮಂಗಳವಾರ ಸಂಜೆ ಭಾರಿ ಸ್ಫೋಟ ಸಂಭವಿಸಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಸ್ಫೋಟದ ತೀವ್ರತೆ ಸುಮಾರು 1 ಕಿ.ಮೀವರೆಗೆ ವ್ಯಾಪಿಸಿ ಹತ್ತಕ್ಕೂ ಹೆಚ್ಚು ಮನೆಗಳ ಕಿಟಕಿ ಗಾಜುಗಳು ಒಡೆದು ಹೋದವು. ಕೆಲ ಮನೆಗಳ ಗೋಡೆಗಳೂ ಬಿರುಕುಬಿಟ್ಟವು. ಮಹಡಿಯಲ್ಲಿದ್ದ ನೀರಿನ ಟ್ಯಾಂಕ್ ಕೂಡ ಛಿದ್ರಗೊಂಡಿತು.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ವೈಟ್‌ಫೀಲ್ಡ್ ಪೊಲೀಸರು, ಸ್ಫೋಟಗೊಂಡ ಸ್ಥಳಕ್ಕೆ ಸಮೀಪದಲ್ಲಿದ್ದ ಶೆಡ್‌ಗಳಿಂದ 300ಕ್ಕೂ ಹೆಚ್ಚು ಕಾರ್ಮಿಕರನ್ನು ಹೊರಗೆ ಕಳುಹಿಸಿದರು. ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಸ್ಫೋಟಗೊಂಡಿರುವುದು ಜಿಲೆಟಿನ್ ಕಡ್ಡಿ ಎಂಬುದು ಖಚಿತವಾಯಿತು.

ಘಟನೆ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಡಿಸಿಪಿ ಅಬ್ದುಲ್ ಅಹದ್, ‘8.5 ಎಕರೆ ವಿಸ್ತೀರ್ಣವಿರುವ ಈ ಜಾಗದಲ್ಲಿ ಎಚ್‌ಎಎಲ್‌ನವರು ವಸತಿ ಸಮುಚ್ಚಯ ನಿರ್ಮಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆ ಪಾಯ ತೆಗೆಯುವಾಗ ಜಿಲೆಟಿನ್ ಬಳಸಿ ಬಂಡೆಗಳನ್ನು ಸಿಡಿಸಿದ್ದಾರೆ. ಕೆಲಸ ಮುಗಿದ ಬಳಿಕ ಉಳಿದ ಕಡ್ಡಿಗಳನ್ನು ಪಕ್ಕದ ಗುಂಡಿಯಲ್ಲೇ ಎಸೆದಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಬಂದಿರುವ ಕಾರ್ಮಿಕರು, ಆ ಗುಂಡಿಯಲ್ಲೇ ನಿತ್ಯ ಕಸ ಎಸೆಯುತ್ತಾರೆ. ಮಧ್ಯಾಹ್ನ ಯಾರೋ ಕಸಕ್ಕೆ ಬೆಂಕಿ ಹಚ್ಚಿದಾಗ, ಜಿಲೆಟಿನ್ ಸ್ಫೋಟಗೊಂಡಿದೆ’ ಎಂದು ಹೇಳಿದರು.

‘ಯಾರೂ ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿಲ್ಲ. ಸ್ಫೋಟಕ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದರಿಂದ ಸ್ಫೋಟ ಸಂಭವಿಸಿದೆ. ಎಚ್‌ಎಎಲ್‌ನವರ ವಿರುದ್ಧ ಹಾಗೂ ಕೆಲಸದ ಗುತ್ತಿಗೆ ಪಡೆದಿದ್ದವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ’ ಎಂದು ಅಭಯ ನೀಡಿದರು.

ಪಾಲಿಕೆಯಿಂದ ನೋಟಿಸ್: ‘ಎಚ್‌ಎಎಲ್‌ನವರು ಬಿಬಿಎಂಪಿಯಿಂದ ಅನುಮತಿ ಪಡೆಯದೆ ನಿರ್ಮಾಣ ಕೆಲಸ ಪ್ರಾರಂಭಿಸಿದ್ದಾರೆ. ಬಂಡೆ ಸ್ಫೋಟ ಮಾಡುವುದಕ್ಕೂ ಕೆಲವು ನಿಯಮಗಳನ್ನು ಪಾಲಿಸಬೇಕು. ಆದರೆ, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತಮ್ಮಿಷ್ಟದಂತೆ ನಡೆದುಕೊಂಡಿದ್ದಾರೆ. ಹೀಗಾಗಿ, ಎಚ್‌ಎಎಲ್‌ ಅಧಿಕಾರಿಗಳಿಗೆ ಪಾಲಿಕೆ ವತಿಯಿಂದ ನೋಟಿಸ್ ನೀಡುತ್ತೇವೆ. ತನಿಖೆ ಪೂರ್ಣಗೊಳ್ಳುವವರೆಗೂ ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸುತ್ತೇವೆ’ ಎಂದು ವಿಜ್ಞಾನನಗರ ವಾರ್ಡ್‌ ಕಾರ್ಪೊರೇಟರ್ ಎಸ್‌.ಜಿ.ನಾಗರಾಜ್ ಹೇಳಿದರು.

**

‘ಉಗ್ರರ ಕೃತ್ಯ ಎನಿಸಿತ್ತು’

‘ಸಂಜೆ ಸ್ಫೋಟದ ಸದ್ದು ಕೇಳಿಸುವುದರ ಜತೆಗೆ ಒಂದು ಕ್ಷಣ ನೆಲವೂ ಅದುರಿದಂತಾಯಿತು. ಭೂಕಂಪದ ಅನುಭವವಾಗಿದ್ದರಿಂದ ತಕ್ಷಣ ಮನೆಯಿಂದ ಹೊರಗೆ ಓಡಿದೆ. ಬಡಾವಣೆಯ ಎಲ್ಲರೂ ಆತಂಕದಿಂದ ಹೊರಬಂದು ನಿಂತಿದ್ದರು’ ಎಂದು ಸ್ಥಳೀಯ ನಿವಾಸಿ ಶಾಹಿರಾ ಬಾನು ವಿವರಿಸಿದರು.

‘ಕೆಲವೇ ನಿಮಿಷಗಳಲ್ಲಿ ಪೊಲೀಸರು, ಅಗ್ನಿಶಾಮಕ ದಳದವರು, ಬಾಂಬ್‌ ನಿಷ್ಕ್ರಿಯ ದಳದವರು ಬಂದರು. ಈ ಬೆಳವಣಿಗೆಗಳು, ಮೊದಲೇ ಉಗ್ರರ ಕರಿನೆರಳಿನಲ್ಲಿರುವ ಬೆಂಗಳೂರಿನಲ್ಲಿ ಭಯೋತ್ಪಾದಕರು ಸ್ಫೋಟ ನಡೆಸಿಬಿಟ್ಟರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದವು. ಎಚ್‌ಎಎಲ್‌ ಹತ್ತಿರದಲ್ಲೇ ಈ ಘಟನೆ ನಡೆದಿದ್ದರಿಂದ ಎಲ್ಲರಲ್ಲೂ ಅದೇ ಸಂಶಯವಿತ್ತು. ಬಾಂಬ್ ಸ್ಫೋಟವಲ್ಲ ಎಂದು ಪೊಲೀಸರು ಖಚಿತಪಡಿಸಿದ ಬಳಿಕ ನಿರಾಳರಾದೆವು’ ಎಂದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !