ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಿಗೆ: ಮಾಜಿ ದಲಾಯತ್ ಸೆರೆ

ಜಿಎಸ್‌ಟಿ ಅಧಿಕಾರಿಗಳ ಸೋಗಿನಲ್ಲಿ ಕೃತ್ಯ– ಗುರುತಿನ ಚೀಟಿ ಪತ್ತೆ
Last Updated 28 ಸೆಪ್ಟೆಂಬರ್ 2021, 19:00 IST
ಅಕ್ಷರ ಗಾತ್ರ

ಬೆಂಗಳೂರು: ಜಿಎಸ್‌ಟಿ (ಸರಕು ಮತ್ತು ಸೇವೆಗಳ ತೆರಿಗೆ) ಅಧಿಕಾರಿಗಳ ಸೋಗಿನಲ್ಲಿ ಲಾರಿ ಮಾಲೀಕರನ್ನು ಸುಲಿಗೆ ಮಾಡುತ್ತಿದ್ದ ಆರೋಪದಡಿ ಚನ್ನಪ್ಪ (52) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ರಾಜಾಜಿನಗರದ ಚನ್ನಪ್ಪ ಅಲಿಯಾಸ್ ಚಂದ್ರೇಗೌಡ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಈ ಹಿಂದೆ ಗುತ್ತಿಗೆ ಆಧಾರದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದನೆಂದು ಗೊತ್ತಾಗಿದೆ. ಕೃತ್ಯದಿಂದ ಗಳಿಸಿದ್ದ ಹಣದಲ್ಲಿ ಖರೀದಿಸಿದ್ದ ಕಾರನ್ನು ಆತನಿಂದ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಇಲಾಖೆಯ ಜಂಟಿ ಆಯುಕ್ತ ಬಸವರಾಜು, ಆರೋಪಿಯ ಕೃತ್ಯದ ಬಗ್ಗೆ ಕೋರಮಂಗಲ ಠಾಣೆಗೆ ಇತ್ತೀಚೆಗೆ ದೂರು ನೀಡಿದ್ದರು. ಅದರನ್ವಯ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ವಿಶೇಷ ತಂಡವು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಆತನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ಚೆಕ್‌ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ: ‘ಜಿಎಸ್‌ಟಿ ಜಾರಿಯಾಗುವ ಮುನ್ನ ನಗರದ ಹಲವೆಡೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದ ಅಧಿಕಾರಿಗಳು, ವಸ್ತುಗಳ ಅಕ್ರಮ ಸಾಗಣೆ ಪತ್ತೆ ಮಾಡಿ ಪ್ರಕರಣ ದಾಖಲಿಸುತ್ತಿದ್ದರು. ಅಂಥ ಚೆಕ್‌ಪೋಸ್ಟ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಚನ್ನಪ್ಪ ಕೆಲಸ ಮಾಡುತ್ತಿದ್ದ’ ಎಂದೂ ಅಧಿಕಾರಿ ವಿವರಿಸಿದರು.

‘ಅಧಿಕಾರಿಗಳ ಜೊತೆ ಆರೋಪಿಯೂ ವಾಹನ ತಡೆಯುತ್ತಿದ್ದ. ಎಲ್ಲ ಪ್ರಕ್ರಿಯೆ ಬಗ್ಗೆ ತಿಳಿದುಕೊಂಡಿದ್ದ. ಜಿಎಸ್‌ಟಿ ಜಾರಿಯಾದ ಮೇಲೆ ಚೆಕ್‌ಪೋಸ್ಟ್‌ಗಳನ್ನು ಬಂದ್ ಮಾಡ ಲಾಗಿತ್ತು. ಚನ್ನಪ್ಪನ ಕೆಲಸವೂ ಹೋಗಿತ್ತು.’

‘ಬೇರೆಡೆ ಕೆಲಸಕ್ಕಾಗಿ ಆರೋಪಿ ಹುಡುಕಾಟ ನಡೆಸಿದ್ದ. ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಅಕ್ರಮ ಹಣ ಸಂಪಾದಿಸಲು ಮುಂದಾಗಿದ್ದ ಆತ, ಜಿಎಸ್‌ಟಿ ಅಧಿಕಾರಿ ಎಂಬುದಾಗಿ ಹೇಳಿಕೊಂಡು ಲಾರಿ ಮಾಲೀಕರ ಸುಲಿಗೆಗೆ ಇಳಿದಿದ್ದ’ ಎಂದೂ ಹೇಳಿದರು.

‘ನಗರದ ಹೊರವಲಯದಲ್ಲಿ ತನ್ನ ಕಾರಿನ ಜೊತೆ ನಿಲ್ಲುತ್ತಿದ್ದ ಆರೋಪಿ, ರಸ್ತೆಯಲ್ಲಿ ಹೋಗುತ್ತಿದ್ದ ಲಾರಿಗಳನ್ನು ಅಡ್ಡಗಟ್ಟುತ್ತಿದ್ದ. ತಪಾಸಣೆ ಮಾಡಬೇಕೆಂದು ದಾಖಲೆಗಳನ್ನು ಕೇಳುತ್ತಿದ್ದ. ನಂತರ, ಲಾರಿ ಬಿಡಲು ಹಣಕ್ಕೆ ಬೇಡಿಕೆ ಇರಿಸುತ್ತಿದ್ದ. ಇದೇ ರೀತಿ ಹಲವರ ಬಳಿ ಹಣ ಸುಲಿಗೆ ಮಾಡಿದ್ದಾನೆ. ಈ ಸಂಗತಿ ಇತ್ತೀಚೆಗೆ ಜಂಟಿ ಆಯುಕ್ತ ಬಸವರಾಜು ಅವರಿಗೆ ಗೊತ್ತಾಗಿತ್ತು’ ಎಂದೂ ಅಧಿಕಾರಿ ವಿವರಿಸಿದರು.

‘ಆರೋಪಿ ಬಳಿ ಗುರುತಿನ ಚೀಟಿ ಇರುವ ಮಾಹಿತಿ ಇದೆ. ಆ ಬಗ್ಗೆ ಪರಿಶೀಲಿಸಬೇಕಿದೆ’ ಎಂದೂ ಹೇಳಿದರು.

‘ತಿಂಗಳಿಗೆ ₹1 ಲಕ್ಷ ಹಫ್ತಾ ಕೇಳಿದ್ದ’

‘ಪ್ರಣವ್ ಟ್ರಾನ್ಸ್‌ಪೋರ್ಟ್ ಕಂಪನಿಯ ಮಾಲೀಕ ಪ್ರಮೋದ್ ಸಾಳುಂಕೆ ಅವರಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಲಾರಿಗಳು ಅತ್ತಿಬೆಲೆ, ಹುಬ್ಬಳ್ಳಿ ಹಾಗೂ ತುಮಕೂರಿನಲ್ಲಿ ಓಡಾಡುತ್ತವೆ. ತಪಾಸಣೆ ಮಾಡಬಾರದೆಂದರೆ ತಿಂಗಳಿಗೆ ₹ 1 ಲಕ್ಷ ನೀಡಬೇಕು’ ಎಂದಿದ್ದ. ಅದಕ್ಕ ಒಪ್ಪದ ಪ್ರಮೋದ್, ಜಂಟಿ ಆಯುಕ್ತ ಬಸವರಾಜು ಅವರಿಗೆ ಸೆ. 2ರಂದು ದೂರು ನೀಡಿದ್ದರು’ ಎಂದೂ ತಿಳಿಸಿದರು.

‘ಅತ್ತಿಬೆಲೆ ಚೆಕ್‌ಪೋಸ್ಟ್‌ ಬಳಿ ಆ. 27ರಂದು ಪ್ರಣವ್ ಟ್ರಾನ್ಸ್‌ಪೋರ್ಟ್ ಲಾರಿ ಅಡ್ಡಗಟ್ಟಿದ್ದ ಆರೋಪಿ, ₹ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಚಾಲಕ, ₹1,000 ಕೊಟ್ಟು ಸ್ಥಳದಿಂದ ಹೊರಟು ಹೋಗಿದ್ದೆ. ಕಡಿಮೆ ಹಣ ಕೊಟ್ಟಿದ್ದಕ್ಕೆ ಸಿಟ್ಟಾಗಿದ್ದ ಆರೋಪಿ, ಲಾರಿ ಫೋಟೊ ತೆಗೆದು ಜಿಎಸ್‌ಟಿ ಸಿಬ್ಬಂದಿಗೆ ಕಳುಹಿಸಿದ್ದ.’ ‘ತುಮಕೂರು ಬಳಿ ಜಿಎಸ್‌ಟಿ ಅಧಿಕಾರಿಗಳು ಲಾರಿ ಜಪ್ತಿ ಮಾಡಿದ್ದರು. ಪ್ರಮೋದ್ ಅವರ ಆಪ್ತ ಸಹಾಯಕ ಬಸಂತಕುಮಾರ್, ಚನ್ನಪ್ಪಗೆ ಕರೆ ಮಾಡಿ ಲಾರಿ ಬಿಡುಗಡೆ ಮಾಡಲು ಕೋರಿದ್ದ. ತುಮಕೂರಿಗೆ ಹೋಗಿ ಲಾರಿ ಬಿಡಿಸಿ ಕೊಳ್ಳಿ ಎಂಬುದಾಗಿ ಆತ ಹೇಳಿದ್ದ. ಸ್ಥಳಕ್ಕೆ ಹೋದಾಗ, ಚನ್ನಪ್ಪ ಎಂಬ ಅಧಿಕಾರಿಯೇ ಇಲ್ಲವೆಂಬ ಸಂಗತಿ ಗೊತ್ತಾಗಿತ್ತು. ಇದನ್ನೇ ಪ್ರಮೋದ್ ದೂರಿನಲ್ಲಿ ಉಲ್ಲೇಖಿಸಿದ್ದರು’ ಎಂದೂ ಸಿಸಿಬಿ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT