ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಹೆಸರಿನಲ್ಲಿ ಸುಲಿಗೆ

15 ವರ್ಷ; 32 ಪ್ರಕರಣ l ಸಿದ್ದಾಪುರ ಪೊಲೀಸರ ಕಾರ್ಯಾಚರಣೆ
Last Updated 30 ಮಾರ್ಚ್ 2023, 20:54 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತ, ಸಿಸಿಬಿ, ಸಿಐಡಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಅಂತರರಾಜ್ಯ ಜಾಲ ಭೇದಿಸಿರುವ ಸಿದ್ದಾಪುರ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ಕಡಪ ಜಿಲ್ಲೆಯ ನಾಗೇಶ್ವರ್ ರೆಡ್ಡಿ ಉಪ್ಪಲೂರ್ (33), ಬುಚುಪಲ್ಲಿ ವಿನೀತ್ ಕುಮಾರ ರೆಡ್ಡಿ (22) ಹಾಗೂ ಶಿವಕುಮಾರ್ ರೆಡ್ಡಿ ಪಂದಿಲ್ಲಾ ಲಾರ್ಲಿ (19) ಬಂಧಿತರು. ಇವರಿಂದ ಐದು ಮೊಬೈಲ್ ಜಪ್ತಿ ಮಾಡಲಾಗಿದೆ. ಜಾಲದ ಪ್ರಮುಖ ಆರೋಪಿ ಶ್ರೀನಾಥ್ ರೆಡ್ಡಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಜಂಟಿ ನಿರ್ದೇಶಕಿ ಆಶಾ ಭರತ್ ಅವರಿಗೆ ಇತ್ತೀಚೆಗೆ ಕರೆ ಮಾಡಿದ್ದ ಆರೋಪಿಗಳು, ಲೋಕಾಯುಕ್ತ ಕಡೆಯವರೆಂದು ಪರಿಚಯಿಸಿಕೊಂಡಿದ್ದರು. ‘ನಿಮ್ಮ ಮನೆ ಮೇಲೆ ಸದ್ಯದಲ್ಲೇ ದಾಳಿ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ದಾಳಿ ಬೇಡವೆಂದರೆ, ನಾವು ಕೇಳಿದಷ್ಟು ಹಣ ನೀಡಬೇಕು’ ಎಂದು ಬೆದರಿಸಿದ್ದರು. ಹೆದರಿದ್ದ ಆಶಾ, ₹ 1 ಲಕ್ಷ ನೀಡಿದ್ದರು. ಇದಾದ ಬಳಿಕವೂ ಆರೋಪಿಗಳು ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದರು. ಅನುಮಾನಗೊಂಡ ಆಶಾ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

15 ವರ್ಷದಲ್ಲಿ 32 ಪ್ರಕರಣಗಳಲ್ಲಿ ಭಾಗಿ: ‘ಮೊಬೈಲ್ ಕರೆಗಳ ವಿವರ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳು ವಂಚನೆಯನ್ನು ವೃತ್ತಿ ಮಾಡಿಕೊಂಡಿದ್ದರು. ಈ ಜಾಲದ ಆರೋಪಿಗಳು, 15 ವರ್ಷಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ 32 ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ರೈಲ್ವೆ ಇಲಾಖೆ ಉದ್ಯೋಗಿ: ‘ಆರೋಪಿ ನಾಗೇಶ್ವರ ರೆಡ್ಡಿ, ಡಿಪ್ಲೊಮಾ ಮುಗಿಸಿದ್ದ. ರೈಲ್ವೆ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕೆಲ ವರ್ಷ ಕೆಲಸ ಮಾಡಿದ್ದ. ಅಲ್ಲಿಯ ಕೆಲಸ ಬಿಟ್ಟು, ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಸೇರಿದ್ದ. ಆ ಕೆಲಸಕ್ಕೂ ರಾಜೀನಾಮೆ ನೀಡಿ ವ್ಯವಸಾಯ ಆರಂಭಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಅಕ್ರಮವಾಗಿ ಹಣ ಗಳಿಸಲು ಮುಂದಾಗಿದ್ದ ನಾಗೇಶ್ವರ, ಟ್ರಾವೆಲ್ಸ್ ಟಿಕೆಟ್ ಕಾಯ್ದಿರಿಸುವ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸಲಾರಂಭಿಸಿದ್ದ. ಈ ಸಂಬಂಧ ಒಂಬತ್ತು ಪ್ರಕರಣಗಳು ದಾಖಲಾಗಿದ್ದವು. ಆರೋಪಿ ಜೈಲಿಗೂ ಹೋಗಿ ಬಂದಿದ್ದ. ನಂತರ, ಎಟಿಎಂ ಕಾರ್ಡ್ ವಂಚನೆಗೆ ಇಳಿದು ತೆಲಂಗಾಣ ಸಿಐಡಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ಇದಾದ ಬಳಿಕವೂ ಆರೋಪಿ ಸಹಚರರ ಜೊತೆ ಸೇರಿ ಹಲವು ಕೃತ್ಯ ಎಸಗುತ್ತಿದ್ದ’ ಎಂದರು.

ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ ಕರೆ: ‘ಯಾವೆಲ್ಲ ಸರ್ಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ಆರೋಪವಿದೆ ಎಂಬುದನ್ನು ಗೂಗಲ್‌ ಮೂಲಕ ಆರೋಪಿಗಳು ತಿಳಿದುಕೊಳ್ಳುತ್ತಿದ್ದರು. ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ, ಇಲಾಖೆಯ ಜಾಲತಾಣಗಳ ಮೂಲಕ ಮೊಬೈಲ್ ನಂಬರ್ ಸಂಗ್ರಹಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸುತ್ತಿದ್ದ ಆರೋಪಿಗಳು, ಅಪರಿಚಿತರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ತೆರೆಯುತ್ತಿದ್ದ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಿದ್ದರು.
ಅದೇ ಹಣವನ್ನು ಹಂತ ಹಂತವಾಗಿ ತಮ್ಮ
ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಹಂಚಿಕೊಳ್ಳುತ್ತಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT