ಬೆಂಗಳೂರು: ‘ನೇತ್ರದಾನ ಮನುಕುಲಕ್ಕೆ ನೀಡುವ ಶ್ರೇಷ್ಠ ಕೊಡುಗೆಯಾಗಿದ್ದು, ಅನೇಕರು ಸ್ವಯಂ ಪ್ರೇರಿತರಾಗಿ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅವರು ನಿಜವಾದ ಹೀರೊಗಳು’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಹೇಳಿದರು.
ನಾರಾಯಣ ನೇತ್ರಾಲಯ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ನೇತ್ರದಾನ ಪಾಕ್ಷಿಕ–2024’ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಹಲವರು ಸಾವಿನ ನಂತರ ಅಗತ್ಯವಿರುವವರಿಗೆ ದೃಷ್ಟಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಮತ್ತಷ್ಟು ಜನರಿಗೆ ನೇತ್ರದಾನ ಮಾಡಲು ಪ್ರೇರಣೆಯಾಗಲಿ’ ಎಂದರು.
ಚಲನಚಿತ್ರ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಮಾತನಾಡಿ, ‘ವರನಟ ರಾಜ್‍ಕುಮಾರ್ ಮತ್ತು ಡಾ. ಕೆ. ಭುಜಂಗ ಶೆಟ್ಟಿ ಇಬ್ಬರೂ ನೇತ್ರದಾನ ಕ್ಷೇತ್ರದಲ್ಲಿ ದಾರ್ಶನಿಕರಾಗಿದ್ದಾರೆ. ಇವರ ಪ್ರಯತ್ನಗಳು ಅನೇಕ ಯುವಕರಿಗೆ ನೇತ್ರದಾನಕ್ಕೆ ಪ್ರೇರಣೆಯಾಗಿವೆ’ ಎಂದು ಹೇಳಿದರು.
ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ, ‘ನೇತ್ರದಾನದ ಮೂಲಕ ಕಾರ್ನಿಯಾ ಅಂಧತ್ವವನ್ನು ನಿರ್ಮೂಲನೆ ಮಾಡಬಹುದು. ಜನರನ್ನು ನೇತ್ರದಾನಕ್ಕೆ ಪ್ರೋತ್ಸಾಹಿಸಬೇಕು’ ಎಂದರು.
ನಾರಾಯಣ ನೇತ್ರಾಲಯದ ಸಿಇಒ ಗ್ರೂಪ್ ಕ್ಯಾಪ್ಟನ್ ಎಸ್.ಕೆ.ಮಿತ್ತಲ್ ಮಾತನಾಡಿದರು.
ಪ್ರಶಸ್ತಿ ಪ್ರದಾನ: ಅತ್ಯುತ್ತಮ ನೇತ್ರ ಸಂಗ್ರಹಕ್ಕಾಗಿ ದೊಡ್ಡಬಳ್ಳಾಪುರದ ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹ ಕೇಂದ್ರಕ್ಕೆ ‘ಡಾ. ಕೆ ಭುಜಂಗ ಶೆಟ್ಟಿ ಪ್ರಶಸ್ತಿ’ ಹಾಗೂ ನೇತ್ರದಾನ ಜಾಗೃತಿಗಾಗಿ ಸಾರಕ್ಕಿಯ ಜ್ಞಾನ ಬೆಳಕಿನೆಡೆಗೆ ವೇದಿಕೆಗೆ ‘ಸಮಾಜಕ ಸೇವಕ ಹರೀಶ್ ನಂಜಪ್ಪ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.