ಸೋಮವಾರ, ಡಿಸೆಂಬರ್ 9, 2019
20 °C
ಎಸ್‌ಬಿಐ ಕರೆನ್ಸಿ ಚಸ್ಟ್‌ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್

ಆರ್‌ಬಿಐಗೆ ಜಮೆಯಾದ 328 ಖೋಟಾ ನೋಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಾಗೂ ಇತರೆ ಬ್ಯಾಂಕ್‌ಗಳ ವ್ಯವಸ್ಥಾಪಕರು ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾ (ಆರ್‌ಬಿಐ) ಕಚೇರಿಗೆ ಜಮೆ ಮಾಡಿದ್ದ ಹಣದ ಪೈಕಿ ₹ 32,800 ಮೌಲ್ಯದ ಖೋಟಾ ನೋಟುಗಳು ಪತ್ತೆ ಆಗಿವೆ. 

ಜಮೆ ಆಗಿದ್ದ ಹಣವನ್ನು ಆರ್‌ಬಿಐ ಅಧಿಕಾರಿಗಳು ಯಂತ್ರದಲ್ಲಿ ತಪಾಸಣೆ ನಡೆಸಿದಾಗ ₹ 100 ಮುಖಬೆಲೆಯ 328 ಖೋಟಾ ನೋಟುಗಳು ಸಿಕ್ಕಿವೆ. ಆ ಬಗ್ಗೆ ಆರ್‌ಬಿಐ ವಿತರಣಾ ವಿಭಾಗದ ವ್ಯವಸ್ಥಾಪಕಿ ಲಕ್ಷ್ಮಿ ಅವರು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದಾರೆ.

‘ಎಸ್‌ಬಿಐ ಮಲ್ಲೇಶ್ವರ ಶಾಖೆ ಹಾಗೂ ಇತರೆ ಬ್ಯಾಂಕ್‌ಗಳ ಕರೆನ್ಸಿ ಚಸ್ಟ್‌ನವರು ಮಾರ್ಚ್‌ 1ರಿಂದ ಮಾರ್ಚ್ 31ರ ಅವಧಿಯಲ್ಲಿ ಆರ್‌ಬಿಐಗೆ ಹಣ ಜಮೆ ಮಾಡಿದ್ದರು. ಆ ಹಣದಲ್ಲೇ ₹ 32,800 ಮೌಲ್ಯದ ಖೋಟಾ ನೋಟುಗಳು ಪತ್ತೆಯಾಗಿವೆ. ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಲಕ್ಷ್ಮಿ ಅವರು ದೂರಿನಲ್ಲಿ ತಿಳಿಸಿದ್ದಾರೆ. 

ಪ್ರತಿ ವರ್ಷವೂ ದೂರು: ‘ಆರ್‌ಬಿಐ ಅಧಿಕಾರಿಗಳು, ಪ್ರತಿವರ್ಷವೂ ಆಂತರಿಕ ಪರಿಶೋಧನೆ ನಡೆಸುತ್ತಾರೆ. ಆ ವೇಳೆ ಖೋಟಾ ನೋಟು ಕಂಡುಬಂದರೆ ದೂರು ಕೊಡುತ್ತಾರೆ. ಅದೇ ರೀತಿ ಈ ವರ್ಷವೂ ಕೊಟ್ಟಿದ್ದಾರೆ’ ಎಂದು ಹಲಸೂರು ಗೇಟ್ ಪೊಲೀಸರು ಹೇಳಿದರು.

‘ನೋಟುಗಳ ನಕಲಿ ತಯಾರಿಕೆ ಅಥವಾ ನಕಲಿ ನೋಟುಗಳನ್ನು ಅಸಲಿಯಂತೆ ಬಳಸುವಿಕೆ (ಐಪಿಸಿ 489–ಬಿ) ಹಾಗೂ ನಕಲಿ ನೋಟು ಇಟ್ಟುಕೊಂಡ (ಐಪಿಸಿ 489–ಸಿ) ಆರೋಪದಡಿ ಎಸ್‌ಬಿಐ ಹಾಗೂ ಇತರೆ ಬ್ಯಾಂಕ್‌ಗಳ ಕರೆನ್ಸಿ ಚಸ್ಟ್‌ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು