ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಕಲಿಕೆ: ಏಕೆ?

ಚಿಂತನಾ ಸಾಮರ್ಥ್ಯದ ಉನ್ನತೀಕರಣವು ಇತಿಹಾಸ ಕಲಿಕೆಯ ಉದ್ದೇಶ
Last Updated 13 ಜೂನ್ 2018, 20:09 IST
ಅಕ್ಷರ ಗಾತ್ರ

ಇನ್ನು ನೂರಾರು ವರ್ಷಗಳ ನಂತರ ನಮ್ಮ ಮೊಮ್ಮಕ್ಕಳು ನಮ್ಮ ಬಗ್ಗೆ ಕಲ್ಪಿಸಿಕೊಳ್ಳುವ, ಕಟ್ಟಿಕೊಳ್ಳುವ ಚಿತ್ರಗಳು ನಿಜವಾಗಿ ನಾವೇನಾಗಿದ್ದೇವೋ ಅದೇ ಆಗಿರುತ್ತವೆ ಎನ್ನಲಾಗದು. ಅವರಿಗೆ ಸಾಕ್ಷಿಯಾಗಿ, ಕಲ್ಪನೆಯಾಗಿ, ಅಂದಾಜಿಸುವಿಕೆಯಾಗಿ ಸಿಗದೆ ಇರುವ ಅದೆಷ್ಟೋ ಸತ್ಯಗಳು ನಮ್ಮೊಂದಿಗೆ ನಾಶವೂ ಆಗಿರುತ್ತವೆ. ನಮ್ಮೆದುರಿನಲ್ಲಿ ಪ್ರತಿನಿತ್ಯ ಕಾಣುವ ವ್ಯಕ್ತಿ ನಿಜವಾಗಿ ಏನು ಎಂದು ನಮಗೆ ಗೊತ್ತಾಗುವುದಿಲ್ಲ. ಆತನ ಕುರಿತು ಅಂದಾಜಿಸುವಿಕೆಗಳಷ್ಟೇ ಇರುತ್ತವೆ. ಕಣ್ಣೆದುರಿನ ವ್ಯಕ್ತಿಗಳ ಸ್ಥಿತಿ ಹೀಗಾದರೆ ಐತಿಹಾಸಿಕ ವ್ಯಕ್ತಿಗಳು ಹೀಗೆಯೇ ಇದ್ದರು ಎಂದು ಹೇಳುವುದು ಹೇಗೆ? ಇತಿಹಾಸವು ಕೆಲವು ಅಂದಾಜಿಸುವಿಕೆಗಳ ಮೇಲೆ ನಿಂತಿದೆ ಹೊರತು ಪರಿಪೂರ್ಣ ಸತ್ಯದ ಮೇಲೆ ಅಲ್ಲ.

ಕೆಲವು ಘಟನಾವಳಿಗಳ ಸರಣಿಯ ದಾಖಲೆಯೇ ಇತಿಹಾಸ. ಆ ಘಟನೆಗಳಿಗೆ ನಾವು ಗುರುತಿಸುವ ಕಾರಣ ಮತ್ತು ಪರಿಣಾಮಗಳೆರಡೂ ಘಟನೆಯ ಆಧಾರದಲ್ಲಿ ನಾವು ಅರ್ಥೈಸಿರುವ ಸತ್ಯವೇ ಹೊರತು ವಾಸ್ತವ ಅಲ್ಲ. ಏಕೆಂದರೆ ಲಭ್ಯ ಘಟನೆ ನಡೆಯಲು ಕಾರಣವಾಗಿ ಬೇರಾವುದೋ ಘಟನೆ ನಡೆದಿರಬಹುದು. ಆ ಘಟನೆಯ ವಿವರ ನಮಗೆ ದೊರೆತಿಲ್ಲದೆ ಇರಬಹುದು. ಆಗ ಸಿಕ್ಕಿದ ಘಟನೆಗೆ ನಾವು ಕಂಡುಕೊಂಡಿರುವುದು ನಿಜವಾದ ಕಾರಣವಾಗಿರದೆ ಬೇರೇನೊ ಕಾರಣ ಇದ್ದಿರುತ್ತದೆ.

ಉದಾಹರಣೆಗೆ ಬಾಬರನು ರಾಣಾ ಸಂಘನ ವಿರುದ್ಧ ಗೆದ್ದ ಎನ್ನುವುದು ‘ಧರ್ಮಯುದ್ಧ’ ಎಂದಾಗ ಸೈನಿಕರು ಜೀವದ ಹಂಗು ತೊರೆದು ಹೋರಾಡಿದರು, ಬಾಬರನು ರಾಣಾ ಸಂಘನಿಗಿಂತ ಶೂರನಾಗಿದ್ದ ಅಥವಾ ರಾಣಾ ಸಂಘ ಉದಾರವಾದಿಯಾಗಿದ್ದ ಎಂದೆಲ್ಲ ಅರ್ಥೈಸಲಾಗುತ್ತದೆ. ಆದರೆ ವಾಸ್ತವ ಅದಲ್ಲ. ಬಾಬರ್ ಬಳಿ ಕುದುರೆ ಸೈನ್ಯವಿತ್ತು. ರಾಣಾನ ಬಳಿ ಆನೆ ಸೈನ್ಯವಿತ್ತು. ಆನೆ ಕುದುರೆಯಷ್ಟು ಕ್ಷಿಪ್ರಗತಿಯಲ್ಲಿ ಚಲಿಸುವುದಿಲ್ಲ. ಇದು ಬಾಬರನಿಗೆ ಇದ್ದ ಅನುಕೂಲ. ರಾಣಾನದು ಸಾಮಂತರು ಕಳಿಸಿದ ಸೈನ್ಯ. ಬಾಬರನದು ಅವನೇ ನೇಮಕ ಮಾಡಿಕೊಂಡಿದ್ದ ಸೈನ್ಯ. ಬಾಬರನಿಗೆ ದಕ್ಷಿಣ ಭಾರತದ ಕಡೆ ದಂಡಯಾತ್ರೆ ಕೈಗೊಳ್ಳುವ ಅಪೇಕ್ಷೆ ಇತ್ತು‌. ಆದರೆ ತುಝುಕ್- ಎ - ಬಾಬರಿ ಕೃತಿಯಲ್ಲಿ ಬಾಬರ್, ‘ದಕ್ಷಿಣದಲ್ಲಿ ಕೃಷ್ಣದೇವರಾಯನೆಂಬ ಸಮರ್ಥ ದೊರೆ ಆಳುತ್ತಿದ್ದಾನೆ’ ಎಂದು ಬರೆಯುತ್ತಾನೆ. ಅಂದರೆ ಕೃಷ್ಣದೇವರಾಯನನ್ನು ಎದುರಿಸಲು ಅವನು ಹಿಂಜರಿದಿದ್ದ. ಏಕೆ? ಕೃಷ್ಣದೇವರಾಯನ ಬಳಿಯೂ ಕುದುರೆ ಸೈನ್ಯ ಇತ್ತು. ಕೃಷ್ಣದೇವರಾಯನೂ ತಾನೇ ನೇಮಕಾತಿ ಮಾಡಿಕೊಂಡ ಸೈನ್ಯವನ್ನು ಹೊಂದಿದ್ದ. ಇಂತಹ ಅನೇಕ ಯುದ್ಧಗಳಲ್ಲಿ ಸೋಲು ಗೆಲುವನ್ನು ನಿರ್ಧರಿಸಿದ್ದು ಧರ್ಮಯುದ್ಧದ ನಿಷ್ಠೆಯಾಗಲೀ, ಮತಾಂಧತೆಯಾಗಲೀ ಅಲ್ಲ. ಸೈನ್ಯ ಪದ್ಧತಿ ಮತ್ತು ಯುದ್ಧ ತಂತ್ರಗಳು ಸೋಲು-ಗೆಲುವನ್ನು ನಿರ್ಧರಿಸಿದವು.

ನಾವು ನಮ್ಮ ಶಾಲೆಗಳಲ್ಲಿ ಇತಿಹಾಸ ಕಲಿಕೆ ನಡೆಸುವಾಗ ಅದರ ಉದ್ದೇಶ ಸ್ಪಷ್ಟವಿರಬೇಕು. ಇತಿಹಾಸವು ಒಂದು ಜ್ಞಾನ ಶಿಸ್ತಾಗಿರುವುದಕ್ಕಿಂತ ಹೆಚ್ಚಾಗಿ ಚುನಾವಣಾ ಪ್ರಚಾರದ ಕರಪತ್ರವಾಗಿರುವ ವರ್ತಮಾನದಲ್ಲಂತೂ ಇತಿಹಾಸದ ಕಲಿಕೆಯ ಉದ್ದೇಶವನ್ನು ಹಿಂದೆಂದಿಗಿಂತ ಹೆಚ್ಚು ಸ್ಪಷ್ಟಗೊಳಿಸಿಕೊಳ್ಳಬೇಕಾಗಿದೆ.

ಇತಿಹಾಸದಿಂದ ಪಾಠ ಕಲಿಯಬೇಕು ಎಂಬ ಜನಪ್ರಿಯ ಮಾತು ಎಲ್ಲರಿಗೂ ಗೊತ್ತಿದೆ. ಪಾಠ ಕಲಿಯುವುದು ಅಂದರೆ ಅನ್ಯಾಯಕ್ಕೆ ಪ್ರತಿಯಾಗಿ ಇನ್ನೊಂದು ಅನ್ಯಾಯ ಮಾಡುವುದು ಎಂದಾಗಲೀ, ನ್ಯಾಯವಾದದ್ದನ್ನು ಯಥಾರೀತಿ ಪಾಲಿಸುವುದು ಎಂದಾಗಲೀ ಅಲ್ಲ. ಎರಡನ್ನೂ ಮಾಡಲು ಬರುವುದಿಲ್ಲ. ಏಕೆಂದರೆ ಕಾಲ ಬದಲಾಗಿದೆ. ಇತಿಹಾಸದ ಒಳಿತುಗಳನ್ನು ನಮ್ಮ ಕಾಲಮಾನಕ್ಕೆ ಹೇಗೆ ಅನ್ವಯಿಸಬೇಕು ಎಂಬ ಚಿಂತನೆಯನ್ನು ನಡೆಸಲೇಬೇಕಾಗುತ್ತದೆ. ಅಂದರೆ ಚಿಂತನಾ ಸಾಮರ್ಥ್ಯದ ಉನ್ನತೀಕರಣ ಇತಿಹಾಸ ಕಲಿಕೆಯ ಉದ್ದೇಶ.

ನಮಗೆ ಸಣ್ಣ ಸಣ್ಣ ಘಟನೆಗಳಾಗಿಯಾದರೂ ಗೊತ್ತಿರುವುದು ಐದಾರು ಸಾವಿರ ವರ್ಷಗಳ ಇತಿಹಾಸವಷ್ಟೆ. ಆದರೆ ನಮ್ಮ ಮೆದುಳಿನ ನೆನಪಿನ ಕೋಶಗಳಲ್ಲಿ ಮೊದಲ ಮಾನವನಿಂದ ತೊಡಗಿದ ಬೃಹತ್ ಯಾನದ ಇತಿಹಾಸ ಹುದುಗಿರುತ್ತದೆ. ನೆನಪಿನ ಕೋಶಗಳಿಗೆ ಇರುವ ಇತಿಹಾಸದ ನೆನಪು ಘಟನಾವಳಿಗಳ ಇತಿಹಾಸಕ್ಕೆ ಮುಖಾಮುಖಿಯಾದಾಗ ನೆನಪಿನ ಕೋಶಕ್ಕೆ ಭವಿಷ್ಯ ನಿರ್ಮಾಣದ ಶಕ್ತಿ ಹೆಚ್ಚಾಗುತ್ತದೆ. ಅಂದರೆ ವರ್ತಮಾನ ಮತ್ತು ಭವಿಷ್ಯದಲ್ಲಿ ಸಮಸ್ಯೆ ಮತ್ತು ಸನ್ನಿವೇಶಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇತಿಹಾಸದ ಅಧ್ಯಯನವು ಹೆಚ್ಚಿಸುತ್ತದೆ.

ಇತಿಹಾಸ ಅಧ್ಯಯನವು ಲಭ್ಯ ಘಟನೆಗಳ ಮಾನವ ವರ್ತನೆಗಳ ಬಹುಮುಖಗಳ ಅಧ್ಯಯನ. ಒಬ್ಬನೇ ರಾಜ ಶತ್ರು ರಾಜ್ಯವನ್ನು ಗೆದ್ದು ಅಲ್ಲಿನ ಸ್ತ್ರೀಯರನ್ನು ಸಾಮೂಹಿಕವಾಗಿ ನಗ್ನಗೊಳಿಸಿ ಸಾಮೂಹಿಕ ಅತ್ಯಾಚಾರವನ್ನೂ ಮಾಡಿಸುತ್ತಾನೆ. ಅದೇ ರಾಜ ಕಲೋಪಾಸನೆಯ ವಿಶ್ವವಿಖ್ಯಾತ ದೇವಸ್ಥಾನವನ್ನು ಕಟ್ಟಿಸಿ ಜಾತಿ ಮತಗಳ ಭೇದ ತೋರದೆ ಸ್ತ್ರೀಯರಿಗೆಲ್ಲ ವಸ್ತ್ರದಾನ ಮಾಡುತ್ತಾನೆ ಎನ್ನುವುದು ಒಬ್ಬನೇ ವ್ಯಕ್ತಿ ಕ್ರೂರಿಯೂ ಪರಮ ದಯಾಳುವೂ ಆಗಬಲ್ಲ ವೈಚಿತ್ರ್ಯವನ್ನು ಅರ್ಥ ಮಾಡಿಸುತ್ತದೆ. ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಯಾವ ಸನ್ನಿವೇಶದಲ್ಲಿ ಮನುಷ್ಯ ಕ್ರೂರಿಯಾಗುತ್ತಾನೆ ಎನ್ನುವ ಸಾಮಾನ್ಯ ಪ್ರಮೇಯವೊಂದು ರೂಪುಗೊಳ್ಳುತ್ತದೆ. ವರ್ತಮಾನದಲ್ಲಿ ಅಂತಹ ಸನ್ನಿವೇಶಗಳು ರೂಪುಗೊಳ್ಳದಂತೆ ನೋಡಿಕೊಳ್ಳುವ ಒಂದು ಎಚ್ಚರವನ್ನು ಇತಿಹಾಸವು ಬೆಳೆಸಬೇಕು.

ಇತಿಹಾಸದ ಅಧ್ಯಯನದ ಮೂಲಕ ಭಾವನೆಗಳನ್ನು ನಿಯಂತ್ರಿಸಿ ಎಲ್ಲವನ್ನೂ ಸ್ಥಿರ ಚಿತ್ತದಿಂದ ನೋಡುವ ಮಾನಸಿಕತೆ ಬೆಳೆಯಬೇಕು. ಆಗ ಮನುಷ್ಯನ ಸಣ್ಣತನಗಳು ಹೋಗುತ್ತವೆ. ಸಂಸ್ಕೃತಿ-ಪ್ರತಿಸಂಸ್ಕೃತಿಗಳ ಕಟ್ಟುವಿಕೆಗಳು-ಬೀಳಿಸುವಿಕೆಗಳು ಇತಿಹಾಸದ ಉದ್ದೇಶಗಳಲ್ಲ. ಇತಿಹಾಸ ಅವೆಲ್ಲವನ್ನೂ ನಿರ್ಲಿಪ್ತವಾಗಿ ದಾಖಲಿಸಿ ಕೊಡುತ್ತದೆ. ಅವುಗಳ ಕ್ರಿಯಾತ್ಮಕ ಪಾಲುದಾರನಾಗಿರುವುದಿಲ್ಲ.

ಇತಿಹಾಸದ ಕಲಿಕೆಯು ನಾಗರಿಕತೆಯ ವಿಕಾಸದ ಸ್ವರೂಪ ಮತ್ತು ಪ್ರಕ್ರಿಯೆಗಳನ್ನು ಅರ್ಥ ಮಾಡಿಸುತ್ತದೆ. ಅನೇಕಾನೇಕ ಜೀವನ ಮೌಲ್ಯಗಳನ್ನು ಅವುಗಳ ಏಳು ಬೀಳುಗಳನ್ನು ಪರಿಚಯಿಸುತ್ತದೆ. ಅದರಿಂದ ಮೌಲ್ಯಗಳ ಸಾಪೇಕ್ಷತೆಯ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಪ್ರಜ್ಞೆ ಬರುತ್ತದೆ. ಕಟ್ಟುವ ಕೆಲಸವನ್ನು ಯಶಸ್ವಿಗೊಳಿಸುವುದು ಮೌಲ್ಯಗಳ ಸಾಪೇಕ್ಷ ಸಿದ್ಧಾಂತವೆ ಹೊರತು ಮೌಲ್ಯಗಳ ಸ್ಥಿರೀಕೃತ ರೂಪದ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಪ್ರತಿಪಾದನೆಗಳಲ್ಲ.

ಇತಿಹಾಸದ ಅಧ್ಯಯನ ಎನ್ನುವುದು ಒಂದು ಗಾಢವಾದ ಅನುಭವ. ಈಗ ‘ಅದೆಲ್ಲ ಉಪಯೋಗಕ್ಕಿಲ್ಲದ್ದು’ ಎಂಬ ಜನಪ್ರಿಯ ಮಾತುಗಳಿರುತ್ತವೆಯಲ್ಲ? ಅದನ್ನು ಇತಿಹಾಸದ ವಿದ್ಯಾರ್ಥಿ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಉಪಯೋಗ ಎನ್ನುವುದು ಸರಿ ಹೊತ್ತಿನ ಅವಶ್ಯಕತೆಯಿಂದ ಮೂಡಿದ ಕಲ್ಪನೆ. ಇತಿಹಾಸದ ವಿದ್ಯಾರ್ಥಿಗೆ ಕಾಲದ ಹಂಗಿಲ್ಲ. ಕಾಲದ ಎಲ್ಲೆಯನ್ನು ಮೀರಿದ ಜ್ಞಾನದ ಅನುಭವಗಳು ಅವನಿಗೆ ಮುಖ್ಯವಾಗುತ್ತವೆ. ಈ ಜ್ಞಾನದ ಅನುಭವಗಳು ಧಾರಣಾ ಶಕ್ತಿಯನ್ನು ಹೆಚ್ಚಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT