ಸೋಮವಾರ, ಜೂನ್ 14, 2021
20 °C
ನೀಳಾದೇವಿ ಅವರಿಗೆ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ

ಸಾಹಿತ್ಯ ವಲಯದಲ್ಲಿ ಗುಂಪುಗಾರಿಕೆ ಅಪಾಯಕಾರಿ: ಡಾ. ಕೆ.ಆರ್. ಸಂಧ್ಯಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ಗುಂಪುಗಾರಿಕೆ ಇದೆ. ಇದು ಈ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ಅಪಾಯಕಾರಿ’ ಎಂದು ಹಿರಿಯ ಲೇಖಕಿ ಡಾ. ಕೆ.ಆರ್. ಸಂಧ್ಯಾರೆಡ್ಡಿ ಅಭಿಪ್ರಾಯಪಟ್ಟರು.

‘ಪ್ರೊ. ಎಸ್.ವಿ. ಪರಮೇಶ್ವರಭಟ್ಟ ಪ್ರತಿಷ್ಠಾನ’ದಿಂದ ಸೋಮವಾರ ಆಯೋಜಿಸಿದ್ದ 2021ನೇ ಸಾಲಿನ ‘ಪ್ರೊ. ಎಸ್.ವಿ. ಪರಮೇಶ್ವರಭಟ್ಟ ಸಂಸ್ಮರಣ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಹಿಳಾ ಸಾಹಿತ್ಯವನ್ನು ಓದುವ ವರ್ಗದಿಂದ ದೂರವಿರಿಸಿದ ಕೀರ್ತಿ ವಿಮರ್ಶಕರಿಗೆ ಸಲ್ಲುತ್ತದೆ. ಲೇಖಕಿಯರನ್ನು ವಿಮರ್ಶಕರು ಕಡೆಗಣಿಸಿದ್ದಾರೆ. ಲೇಖಕಿಯರ ಪುಸ್ತಕಗಳನ್ನು ವಿಮರ್ಶೆಗೆ ತೆಗೆದುಕೊಳ್ಳಬಾರದು ಎಂಬ ರೀತಿಯ ಅಸ್ಪೃಶ್ಯ ಮನೋಭಾವ ವಿಮರ್ಶಕರಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಲೇಖಕಿಯರು ಬರೆದಿದ್ದೆಲ್ಲ ಶ್ರೇಷ್ಠವಲ್ಲ. ಆದರೆ, ಅದರಲ್ಲಿನ ಮುತ್ತುಗಳನ್ನು ಆರಿಸಬೇಕಿದೆ. ವಿಮರ್ಶಕರು ಸಾಗರದಲ್ಲಿನ ಮುತ್ತುಗಳನ್ನು ಆರಿಸದಿದ್ದರೂ ಸಾಗರದಲ್ಲಿ ಪಯಣಿಸುವ ಸುಖ ನೀಡಬೇಕು’ ಎಂದು ಹೇಳಿದರು.

‘ಲೇಖಕಿಯರಲ್ಲಿ ಶ್ರೇಷ್ಠತೆಯ ಗರ್ವ ಇಲ್ಲ. ಅಂತಹ ಮಹತ್ವದ ಲೇಖಕಿಯರ ಸಾಲಿನಲ್ಲಿ ನೀಳಾದೇವಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ತಮ್ಮ ಸುತ್ತಲಿನ ಪರಿಸರದಲ್ಲಿನ ಆಗುಹೋಗುಗಳನ್ನು ಕಾದಂಬರಿಯ ವಸ್ತುವಾಗಿಸಿದರು’ ಎಂದು ವಿವರಿಸಿದರು.

ಕಥೆ, ಕಾದಂಬರಿಗಳು ರೂಪುಗೊಂಡಿದ್ದ ಮಹಿಳಾ ಸಾಹಿತ್ಯದಿಂದ ಎಂಬುದನ್ನು ಮರೆಯಬಾರದು. ಕಾದಂಬರಿ ಮೂಲಕ ಓದುವ ವರ್ಗವನ್ನು ಸೃಷ್ಟಿಸಿದ ಕೀರ್ತಿ ಮಹಿಳಾ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದರು.

ಪ್ರಶಸ್ತಿ ಪುರಸ್ಕೃತ ಲೇಖಕಿ ನೀಳಾದೇವಿ, ‘ಎಸ್.ವಿ. ಪರಮೇಶ್ವರ ಭಟ್ಟ(ಎಸ್‌ವಿಪಿ) ಅವರ ಪ್ರೇರಣೆಯಿಂದಲೇ ನಾನು ಅನುವಾದ ಮಾಡಲು ಸಾಧ್ಯವಾಯಿತು. ಅಮೆರಿಕದ ಲೇಖಕ ನಾಥನೀಲ್ ಅವರ ಎರಡು ಇಂಗ್ಲಿಷ್ ಕಾದಂಬರಿಗಳ ಆಧರಿಸಿ ‘ಚಕ್ರ’ ಹಾಗೂ ‘ಕಸೂತಿ ಮತ್ತು ಕಪ್ಪುಕಲೆ’ ಕಾದಂಬರಿಗಳು ರಚನೆಯಾದವು. ಭಾಷೆಗಿಂತ ಭಾವನೆ ಮುಖ್ಯ ಎಂಬ ಅವರ ಮಾತು ಅನುವಾದಕ್ಕೆ ಸ್ಫೂರ್ತಿ ನೀಡಿತು’ ಎಂದು ಹೇಳಿದರು.

ವಿಮರ್ಶಕ ವಿವೇಕ್ ರೈ, ‘ಪರಮೇಶ್ವರ ಭಟ್ಟರು ಕನ್ನಡ ಕಟ್ಟುವುದನ್ನು ಕಲಿಸಿದರು. ಬಿಎಂಶ್ರೀ, ತೀನಂಶ್ರೀ, ಡಿಎಲ್‍ಎನ್ ಅವರ ವಿದ್ಯಾರ್ಥಿಗಳಾಗಿ ನಂತರ ಅವರ ಜೊತೆಯಲ್ಲಿ ವೃತ್ತಿ ನಿರ್ವಹಿಸಿದರು. ಕನ್ನಡದ ಪುಸ್ತಕಗಳನ್ನು ಮನೆಮನೆಗೆ ಹಂಚುವ ಮೂಲಕ ಕನ್ನಡದ ಪ್ರೀತಿಯನ್ನು ಹಂಚಿದರು’ ಎಂದು ತಿಳಿಸಿದರು.

ಎಸ್‍ವಿಪಿ ಅವರ ಪುತ್ರ ಎಸ್.ಪಿ.ರಾಮಚಂದ್ರ, ‘ತಂದೆಯವರು ಶ್ರೇಷ್ಠ ಅನುವಾದಗಳನ್ನು ಮಾಡಿದ್ದಾರೆ. ಅವರ ಅನುವಾದ ಸಾಹಿತ್ಯವನ್ನು ಕುವೆಂಪು ಭಾಷಾ ಭಾರತಿ ಪ್ರಕಟಿಸುತ್ತಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು