ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಬಗು ಕಳೆದುಕೊಂಡ ಗುಟ್ಟೆ ಜಾತ್ರೆ!

Last Updated 29 ಜನವರಿ 2021, 19:27 IST
ಅಕ್ಷರ ಗಾತ್ರ

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ಪ್ರಸಿದ್ದ ಜಾನುವಾರು ಜಾತ್ರೆಗಳಲ್ಲಿ ಮಹಿಮಾಪುರದ ಗುಟ್ಟೆ ಜಾತ್ರೆ ಸಹ ಒಂದು. ಜಿಲ್ಲೆಯಲ್ಲಿ 2ನೇ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪ್ರತಿವರ್ಷ ಇಲ್ಲಿ ದನಗಳ ಜಾತ್ರೆ ಕಣ್ಮನ ಸೆಳೆಯುತ್ತಿತ್ತು. ಆದರೆ, ಈ ಬಾರಿ ಕೊರೊನಾ ಸಂಕಷ್ಟದಿಂದ ಜಾತ್ರೆ ತನ್ನ ಗತವೈಭವ ಕಳೆದುಕೊಂಡು ಸೊರಗುತ್ತಿದೆ.

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರದಂತಹ ಹೊರ ರಾಜ್ಯಗಳಿಂದ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಹಾಸನ ಹೀಗೆ ಹೊರ ಜಿಲ್ಲೆಗಳಿಂದ ರೈತರು ತಮ್ಮ ಹೋರಿಗಳನ್ನು ಇಲ್ಲಿಗೆ ಮಾರಾಟಕ್ಕೆ ಕರೆತರುತ್ತಿದ್ದರು. ತಮ್ಮ ಕೃಷಿ ಕೆಲಸಕ್ಕೆ ಬೇಕಾದಂತಹ ಹೋರಿಗಳನ್ನು ಇಲ್ಲಿ ಕೊಳ್ಳಲು ಬರುತ್ತಿದ್ದರು.

ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜನ ಸೇರುವುದಕ್ಕೆ ನಿಷೇಧ ಹೇರಿದೆ. ಇದರಿಂದ ಹೆಚ್ಚಿನ ಪ್ರಚಾರ ಇಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ದನಗಳು ಜಾತ್ರೆಗೆ ಬಾರದೆ ಹೋಗಿವೆ. ಸಾವಿರಾರು ಜೊತೆ ರಾಸುಗಳ ಜಾಗದಲ್ಲಿ ಹತ್ತಾರು ಜೊತೆ ರಾಸುಗಳು ಬಂದಿದ್ದು, ಜಾತ್ರೆಯ ಸೊಬಗು ಮರೆಯಾಗಿದೆ.

ಕಳೆದ ಬಾರಿ ಹತ್ತು ಸಾವಿರದಿಂದ ಸುಮಾರು ₹3 ಲಕ್ಷದ ವರೆಗೆ ಬೆಲೆ ಬಾಳುವ ರಾಸುಗಳು ಜಾತ್ರೆಗೆ ಬಂದಿದ್ದವು. ಈ ಬಾರಿ ಹೆಚ್ಚೆಂದರೆ, ₹1 ಲಕ್ಷ ಬೆಲೆ ಬಾಳುವ ರಾಸುಗಳಷ್ಟೇ ಬಂದಿವೆ. ರೈತರು ಜಾತ್ರೆಗೆ ಬರಲು ನಿರಾಸಕ್ತಿ ತೋರಿರುವುದರಿಂದ ವ್ಯಾಪಾರ ಕೂಡ ಇಲ್ಲ. ಒಂದೆರಡು ದಿನಗಳು ನೋಡಿ ಖರ್ಚು ಜಾಸ್ತಿಯಾಗುತ್ತದೆ ಎಂದು ಮನೆಕಡೆ ಹೋಗುತ್ತಿದ್ದಾರೆ.

ಇಲ್ಲಿ ಹಳ್ಳಿಕಾರ್, ಅಮೃತ್ ಮಹಲ್, ಗಿಡ್ಡ ಜಾತಿಯಂತಹ ಉತ್ತಮ ರಾಸುಗಳು ಮಾರಾಟಕ್ಕೆ ಬರುತ್ತಿದ್ದವು. ಅವುಗಳನ್ನು ಕೊಳ್ಳಲು ಕೆಲವೊಮ್ಮೆ ಜಟಾಪಟಿಯೇ ನಡೆಯುತ್ತಿತ್ತು. ದಲ್ಲಾಳಿಗಳು ಮಧ್ಯಸ್ಥಿಕೆ ವಹಿಸಿ ಒಂದಷ್ಟು ದುಡ್ಡು ಮಾಡಿಕೊಳ್ಳುತ್ತಿದ್ದರು. ಅದಕ್ಕೂ ಕಡಿವಾಣ ಬಿದ್ದಿದೆ. ಮೂಗುದಾರ, ಹಗ್ಗ, ದಂಡೆ, ಬಾರುಕೋಲು, ಹೀಗೆ ಹೋರಿಗಳಿಗೆ ಬೇಕಾದಂತಹ
ವಸ್ತುಗಳ ಮಾರಾಟಗಾರರಿಗೂ ಒಳ್ಳೆ ವ್ಯಾಪಾರ ಆಗುತ್ತಿತ್ತು. ಆದರೆ, ಈ ಬಾರಿ ಜಾತ್ರೆಯಲ್ಲಿ ರಾಸುಗಳೂ ಇಲ್ಲ, ವ್ಯಾಪಾರವೂ ಇಲ್ಲ ಅಂತಾರೆ ತ್ಯಾಗದಹಳ್ಳಿ ರೈತ ನಾಗರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT