ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಪಾ ಕಾಗದ ಮಾರಾಟ ಜಾಲ ಪತ್ತೆ: ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

Last Updated 10 ಅಕ್ಟೋಬರ್ 2020, 20:01 IST
ಅಕ್ಷರ ಗಾತ್ರ

ಬೆಂಗಳೂರು: 2002ರಲ್ಲಿ ನಿಷೇಧಿಸಲಾದ ಛಾಪಾ ಕಾಗದಗಳನ್ನು ನಕಲು ಮಾಡಿ ಮುದ್ರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕೇಂದ್ರ ವಿಭಾಗದ ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿ ಹಸೈನ್‌ ಮೋದಿ ಬಾಬು ಅಲಿಯಾಸ್ ಛೋಟಾ ತೆಲಗಿ (53) ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

‘ಎಸ್‌.ಜೆ.ಪಾರ್ಕ್‌ ಠಾಣೆ ವ್ಯಾಪ್ತಿಯಲ್ಲಿರುವ ಎಸ್ಪಿ ರಸ್ತೆಯಲ್ಲಿ ಅಂಗಡಿ ತೆರೆದಿದ್ದ ಆರೋಪಿ ಹಸೈನ್, ಸುಮಾರು ವರ್ಷಗಳಿಂದ ನಕಲಿ ಛಾಪಾ ಕಾಗದ ಮುದ್ರಣ ಮಾಡುತ್ತಿದ್ದ. ಈ ಬಗ್ಗೆ ಪ್ರಕರಣವೊಂದರ ತನಿಖೆಯಲ್ಲಿ ಸುಳಿವು ಸಿಕ್ಕಿತ್ತು. ಎಸಿಪಿ ನೇತೃತ್ವದ ತಂಡ, ಗ್ರಾಹಕರ ವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದರು.

‘ವಿವೇಕನಗರ ನಿವಾಸಿ ಹಸೈನ್, ಜಾಲದ ಪ್ರಮುಖ ಆರೋಪಿ. ಆತನ ಜೊತೆಯಲ್ಲಿ ಬಸವೇಶ್ವರನಗರದ ಹರೀಶ್ (55), ಟೈಪಿಸ್ಟ್ ಸೀಮಾ ಅಲಿಯಾಸ್ ಶವರ್ ಹಾಗೂ ನಜ್ಮಾ ಫಾತಿಮಾ ಎಂಬುವವರನ್ನು ಬಂಧಿಸಲಾಗಿದೆ. ಅಂಗಡಿ ಹಾಗೂ ಆರೋಪಿ ಮನೆ ಮೇಲೆ ದಾಳಿ ಮಾಡಿ ₹ 25.40 ಲಕ್ಷ ಮುಖಬೆಲೆಯ 443 ನಕಲಿ ಛಾಪಾ ಕಾಗದಗಳನ್ನು ಜಪ್ತಿ ಮಾಡಲಾಗಿದೆ' ಎಂದೂ ಹೇಳಿದರು.

‘ಶಿವಾಜಿನಗರ ಹಾಗೂ ಕೆಂಗೇರಿ ಉಪನಗರದ ಹಿರಿಯ ಉಪ ನೋಂದಣಾಧಿಕಾರಿಗಳು, ಬೊಮ್ಮನಹಳ್ಳಿ ಉಪ ನೋಂದಣಾಧಿಕಾರಿ ಕಚೇರಿ ಸೀಲುಗಳು ಆರೋಪಿ ಮನೆಯಲ್ಲಿ ಸಿಕ್ಕಿವೆ. ಖಾಲಿ ಕಾಗ
ದಗಳು, ಕಂಪ್ಯೂಟರ್ ಹಾಗೂ ಕಲರ್‌ ಪ್ರಿಂಟರ್ ಸಹ ಜಪ್ತಿ ಮಾಡಲಾಗಿದೆ’ ಎಂದೂ ಅನುಚೇತ್ ವಿವರಿಸಿದರು.

ಮಧ್ಯವರ್ತಿಯಿಂದ ತಯಾರಕ: ‘ಏಳನೇ ತರಗತಿವರೆಗೆ ಓದಿರುವ ಹಸೈನ್, 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಕಂದಾಯ ಭವನ ಹಾಗೂ ನ್ಯಾಯಾಲಯದ ಬಳಿ ಬಾಡಿಗೆ ಹಾಗೂ ಭೋಗ್ಯದ ಕರಾರು ಪತ್ರ ತಯಾರಿಸಿಕೊಡುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಕ್ರಮೇಣ ನಕಲಿ ಛಾಪಾ ಕಾಗದ ತಯಾರಿಕೆ ಆರಂಭಿಸಿ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದಾನೆ’ ಎಂದೂ ಅನುಚೇತ್ ಮಾಹಿತಿ ನೀಡಿದರು.

‘ಪ್ರಾಂಕಿಂಗ್ ಹಾಗೂ ಎಂಬೋಸಿಂಗ್‌ಗಳನ್ನು ನಕಲಿಯಾಗಿ ತಯಾರಿಸುತ್ತಿದ್ದ ಆರೋಪಿ, ಅವುಗಳನ್ನೇ ಕಾಗದದ ಮೇಲೆ ಅಂಟಿಸುತ್ತಿದ್ದ. ಈತನ ಕೃತ್ಯದ ಬಗ್ಗೆ ಹಲವರಿಗೆ ಮಾಹಿತಿ ಇತ್ತು. ಹೀಗಾಗಿ, ಆತನನ್ನು ‘ಛೋಟಾ ತೆಲಗಿ’ ಎಂದೇ ಕರೆಯುತ್ತಿದ್ದರು’ ಎಂದೂ ಹೇಳಿದರು.

2013ರಲ್ಲೇ ದಾಖಲಾಗಿದ್ದ ಪ್ರಕರಣ: ನಕಲಿ ದಾಖಲೆ ಸೃಷ್ಟಿ ಆರೋಪದಡಿ ಹಸೈನ್ ಹಾಗೂ ಹರೀಶ್ ವಿರುದ್ಧ 2013ರಲ್ಲೇ ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೈಲಿಗೆ ಹೋಗಿದ್ದ ಆರೋಪಿಗಳು, ಜಾಮೀನು ಮೇಲೆ ಹೊರಬಂದಿದ್ದರು. ನಂತರವೂ ತಮ್ಮ ಹಳೇ ಕೆಲಸವನ್ನೇ ಮುಂದುವರಿಸಿದ್ದರು’ ಎಂದು ಅನುಚೇತ್‌ ತಿಳಿಸಿದರು.

‘ಆರೋಪಿ ಹರೀಶ್, ಬಿ.ಎ ಪದವೀಧರ. ಇನ್ನೊಬ್ಬ ಆರೋಪಿ ಶವರ್, ಬಿ.ಕಾಂ ಅರ್ಧಕ್ಕೆ ಬಿಟ್ಟಿದ್ದಳು. ಮತ್ತೊಬ್ಬ ಆರೋಪಿ ನಜ್ಮಾ ಫಾತಿಮಾ, 7ನೇ ತರಗತಿವರೆಗೆ ಓದಿದ್ದಾಳೆ. ಮೂವರು ಸ್ಥಳೀಯ ನ್ಯಾಯಾಲಯದ ಬಳಿ ಟೈಪಿಸ್ಟ್ ಹಾಗೂ ಕಾಗದ ಮಾಡಿಸುವ ಮಧ್ಯವರ್ತಿ ಆಗಿ ಕೆಲಸ ಮಾಡುತ್ತಿದ್ದರು. ಹಸೈನ್ ತಯಾರಿಸುತ್ತಿದ್ದ ಛಾಪಾ ಕಾಗದಗಳನ್ನು ಇದೇ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಕೆಲ ವಕೀಲರು, ಕಕ್ಷಿದಾರರು ಇವರ ಬಳಿ ಕಾಗದ ಖರೀದಿಸಿರುವ ಮಾಹಿತಿ ಇದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT