7

ಖೋಟಾ ನೋಟು ಚಲಾವಣೆ ಆರೋಪ: ಇಂದು ಜಾಮೀನು ಅರ್ಜಿ ವಿಚಾರಣೆ

Published:
Updated:

ಬೆಂಗಳೂರು: ಖೋಟಾ ನೋಟು ಚಲಾವಣೆ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಬಂಧಿಸಲಾಗಿರುವ ಇಬ್ಬರ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ (ಜೂ.29) ನಗರದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.

ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಎನ್‌ಐಎ ದಾಖಲಿಸಿದ ದೂರಿನ ಅನುಸಾರ ಇತ್ತೀಚೆಗಷ್ಟೇ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಅಶೋಕ್‌ ಕುಮಾರ್, ಗುಂಡವಾಡದ ರಾಜೇಂದ್ರ ಪಾಟೀಲ, ಬಾಗಲಕೋಟೆ ಜಿಲ್ಲೆ ಮುಧೋಳದ ಗಂಗಾಧರ ಕೋಲಕಾರ ಹಾಗೂ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ನಿವಾಸಿಗಳಾದ ದಲೀಂ ಮಿಯಾ, ಶಹನವಾಜ್‌, ಸರೀಫುಲ್ ಇಸ್ಲಾಂ ಮತ್ತು ಶುಕ್ರುದ್ದೀನ್‌ ಶೇಕ್‌ ಎಂಬುವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ.

‘ರಾಜ್ಯದ ಆರೋಪಿಗಳು ಒಂದು ಲಕ್ಷ ಮೊತ್ತದ ಖೋಟಾ ನೋಟುಗಳಿಗೆ ₹ 48 ಸಾವಿರದಷ್ಟು ಸಾಚಾ ನೋಟುಗಳನ್ನು ಹೊರ ರಾಜ್ಯದಲ್ಲಿನ ಆರೋಪಿಗಳಿಗೆ ರವಾನೆ ಮಾಡುತ್ತಿದ್ದರು. ಇವರೆಲ್ಲಾ ₹ 2 ಸಾವಿರ ಮೊತ್ತದ ಖೋಟಾ ನೋಟುಗಳನ್ನೇ ಚಲಾವಣೆ ಮಾಡುತ್ತಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 120 ಬಿ (ಕ್ರಿಮಿನಲ್ ಸಂಚು), 489 ಬಿ (ಖೋಟಾ ನೋಟುಗಳನ್ನು ಸಾಚಾ ಎಂದು ಹೇಳಿ ಚಲಾವಣೆ ಮಾಡುವುದು), 589 ಸಿ (ಖೋಟಾ ನೋಟುಗಳನ್ನು ಹೊಂದಿರುವುದು) ಮತ್ತು 34ರ (ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಸಮಾನಾಂತರ ಉದ್ದೇಶ ಹೊಂದಿರುವುದು) ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ.

ಎನ್‌ಐಎ ಪರ ಹೈಕೋರ್ಟ್‌ ವಕೀಲ ಪಿ.ಪ್ರಸನ್ನಕುಮಾರ್ ವಕಾಲತ್ತು ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !