ಶುಕ್ರವಾರ, ಜನವರಿ 27, 2023
24 °C

ಸರ್ಕಾರಿ ಜಮೀನಿಗೆ ನಕಲಿ ದಾಖಲೆ; ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಲಹಂಕ ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದ 17 ಎಕರೆ 35 ಗುಂಟೆ ಸರ್ಕಾರಿ ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಲಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು ಉತ್ತರ ಉಪವಿಭಾಗದ ಉಪ ವಿಭಾಗಾಧಿಕಾರಿ ದಯಾನಂದ ಭಂಡಾರಿ ದೂರು ನೀಡಿದ್ದಾರೆ. ಅದರನ್ವಯ ಶೆಟ್ಟಿಗೆರೆ ಗ್ರಾಮದ ನಿವಾಸಿಗಳಾದ ಭಾಗ್ಯಮ್ಮ, ಕೆಂಚಮ್ಮ, ಸುಬ್ರಮಣಿ, ಶಾಂತಮ್ಮ ಹಾಗೂ ಬಸಮ್ಮ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಬಿಎಂಆರ್‌ಸಿಎಲ್‌ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದೆ. ಜಮೀನು ವ್ಯಾಜ್ಯ ಸಂಬಂಧದ ಪ್ರಕರಣದಲ್ಲಿ ಸೆ. 24ರಂದು ಆದೇಶ ಹೊರಡಿಸಿದ್ದ ವಿಶೇಷ ಜಿಲ್ಲಾಧಿಕಾರಿ, ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸೂಚಿಸಿದ್ದರು. ಆದೇಶದ ಪ್ರತಿ ಸಮೇತವಾಗಿ ಉಪವಿಭಾಗಾಧಿಕಾರಿ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಅಪರಾಧ ಸಂಚು ನಡೆಸಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸಲು ಯತ್ನಿಸಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ವಿಚಾರಣೆ ನಡೆಸಬೇಕಿದೆ’ ಎಂದೂ ತಿಳಿಸಿದರು.

ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಬಗ್ಗೆ ‘ಪ್ರಜಾವಾಣಿ’ ಸೆ.27ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ತಹಸೀಲ್ದಾರ್‌ ವಿರುದ್ಧ ಕ್ರಮಕ್ಕೆ ಮೀನಮೇಷ

ಯಲಹಂಕ ತಹಸೀಲ್ದಾರ್‌ ರಘುಮೂರ್ತಿ ಹಾಗೂ ಅವರ ಕಚೇರಿ ಸಿಬ್ಬಂದಿಯೂ ಶಾಮೀಲಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್‌ ಅವರು ಆದೇಶ ಮಾಡಿದ್ದರು. ಅದರ ಆಧಾರದಲ್ಲಿ ರಘುಮೂರ್ತಿ ಅವರನ್ನು ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಶಿಫಾರಸು ಮಾಡಿ ವರದಿ ಸಲ್ಲಿಸಿದ್ದರು.

‘ಜಿಲ್ಲಾಧಿಕಾರಿ ಅವರು ವರದಿ ಸಲ್ಲಿಸಿ ವಾರ ಕಳೆದರೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಯಲಹಂಕ ತಹಸೀಲ್ದಾರ್‌ ವಿರುದ್ಧ ಯಾವು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮೀನಮೇಷ ಎಣಿಸುತ್ತಿರುವುದು ಏಕೆ. ಅವರ ಮೇಲೆ ಒತ್ತಡ ಇದೆಯೇ’ ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು