ಶನಿವಾರ, ನವೆಂಬರ್ 16, 2019
21 °C
ದೂರು ದಾಖಲಿಸಲು ಸಹಾಯವಾಣಿ 104ಕ್ಕೆ ಕರೆಮಾಡಿ

ನಕಲಿ ಆರೋಗ್ಯ ಕಾರ್ಡ್‌ ವಿತರಿಸಿದರೆ ಕ್ರಿಮಿನಲ್ ಪ್ರಕರಣ

Published:
Updated:
Prajavani

ಬೆಂಗಳೂರು: ಅನಧಿಕೃತವಾಗಿ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಕಾರ್ಡ್‌ಗಳನ್ನು ಮಾರಾಟ ಮಾಡುವ ಮಧ್ಯವರ್ತಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಅಂತಹ ಪ್ರಕರಣಗಳು ತಿಳಿದು ಬಂದಲ್ಲಿ ದೂರು ದಾಖಲಿಸಲು ಸಹಾಯವಾಣಿ ‘104’ಕ್ಕೆ ಕರೆ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ ಮಾಡಿದೆ.

ಅನರ್ಹರಿಗೆ ಆರೋಗ್ಯ ಕಾರ್ಡ್‌ ವಿತರಣೆ ಹಾಗೂ ಅಧಿಕ ಹಣ ವಸೂಲಿ ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯು ಅವ್ಯಹಾರ ತಡೆಗೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ, ನಕಲಿ ಕಾರ್ಡ್‌ಗಳನ್ನು ವಿತರಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಈ ಹಿಂದೆ ಜಾರಿಯಲ್ಲಿದ್ದ ಆಧಾರ್ – ಒಟಿಪಿ ಹಾಗೂ ಕ್ಯೂ ಆರ್ ಕೋಡ್‌ ಆಧಾರಿತ ಕಾರ್ಡ್‌ ವಿತರಣೆಯನ್ನು ರದ್ದುಗೊಳಿಸಲಾಗಿದೆ. ಕಾರ್ಡ್‌ ಪಡೆಯಲು ಎಪಿಎಲ್‌ ಹಾಗೂ ಬಿಪಿಎಲ್ ಕುಟುಂಬದ ವ್ಯಕ್ತಿಗಳು ಕಡ್ಡಾಯವಾಗಿ ಬಯೋಮೆಟ್ರಿಕ್ ವಿವರವನ್ನು ನೀಡಬೇಕಾಗುತ್ತದೆ. ಕಾರ್ಡ್‌ ವಿತರಣೆಗೆ ಅವಶ್ಯಕವಾಗಿರುವ ಪಾಸ್‌ವರ್ಡ್‌/ಯೂಸರ್ ಐಡಿಯನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವ ಸಿಬ್ಬಂದಿಯ ಮೇಲೆ ಸಹ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ. 

ಪ್ರತಿಕ್ರಿಯಿಸಿ (+)