ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘₹ 1 ಲಕ್ಷಕ್ಕೆ ಪದವಿ, ₹ 20 ಲಕ್ಷಕ್ಕೆ ಪಿಎಚ್‌ಡಿ ಮಾರಾಟ’!

ನಕಲಿ ಅಂಕಪಟ್ಟಿ ಜಾಲ: ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಮೇಲೆ ಸಿಸಿಬಿ ದಾಳಿ
Last Updated 6 ಡಿಸೆಂಬರ್ 2022, 21:17 IST
ಅಕ್ಷರ ಗಾತ್ರ

ಬೆಂಗಳೂರು: ದೂರ ಶಿಕ್ಷಣ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ನಕಲಿ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ವಂಚಿಸುತ್ತಿದ್ದ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ನಕಲಿ ಅಂಕಪಟ್ಟಿ ಮಾರುತ್ತಿದ್ದ ಆರೋಪದಡಿ ನಗರದಲ್ಲಿರುವ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಕಚೇರಿಗಳ ಮೇಲೆ ದಾಳಿ ಮಾಡಲಾಯಿತು. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್, ರಾಜಣ್ಣ, ಶಾರದಾ ಹಾಗೂ ಶಿಲ್ಪಾ ಎಂಬುವರನ್ನು ಬಂಧಿಸಲಾಗಿದೆ. ದೇಶದ ವಿವಿಧ ವಿಶ್ವವಿದ್ಯಾಲಯಗಳ ಹೆಸರಿನಲ್ಲಿರುವ 1023 ನಕಲಿ ಅಂಕಪಟ್ಟಿಗಳು, 5 ಪಿಎಚ್‌ಡಿ ಪ್ರಬಂಧಗಳು, 74 ಮುದ್ರೆಗಳು, 8 ಮೊಬೈಲ್, 5 ಹಾರ್ಡ್‌ಡಿಸ್ಕ್‌ ಜಪ್ತಿ ಮಾಡಲಾ
ಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದೂರ ಶಿಕ್ಷಣದ ಮೂಲಕ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆಯಬಹುದೆಂದು ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಹೆಸರಿನಲ್ಲಿ ಜಾಹೀರಾತು ನೀಡಲಾಗುತ್ತಿತ್ತು. ಅದನ್ನು ನಂಬಿ ವಿದ್ಯಾರ್ಥಿಗಳು, ಇನ್‌ಸ್ಟಿಟ್ಯೂಟ್ ಸಿಬ್ಬಂದಿಯನ್ನು ಸಂಪರ್ಕಿಸುತ್ತಿದ್ದರು. ₹ 1 ಲಕ್ಷದಿಂದ ₹ 20 ಲಕ್ಷದವರೆಗೂ ಹಣ ಪಡೆಯುತ್ತಿದ್ದ ಆರೋಪಿಗಳು, ನಕಲಿ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ಯುವಕನ ದೂರು: ‘ಪಿಯುಸಿ ಮುಗಿಸಿದ್ದ ನಗರದ ಯುವಕನೊಬ್ಬ, ಜಾಲತಾಣದ ಮೂಲಕ ಇನ್‌ಸ್ಟಿಟ್ಯೂಟ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದರು. ದೂರ ಶಿಕ್ಷಣದ ಮೂಲಕ ಬಿ.ಕಾಂ ಪದವಿ ಪಡೆಯಬೇಕೆಂದು ಹೇಳಿದ್ದರು. ಪರೀಕ್ಷೆ ಇಲ್ಲದೇ ಅಂಕಪಟ್ಟಿ ನೀಡುವುದಾಗಿ ಹೇಳಿದ್ದ ಆರೋಪಿಗಳು, ಯುವಕನಿಂದ ₹ 40 ಸಾವಿರ ಪಡೆದಿದ್ದರು’ ಎಂದು ತಿಳಿಸಿದರು.

‘ಯುವಕನಿಗೆ ಬಿ.ಕಾಂ ಮೊದಲ ಹಾಗೂ ಎರಡನೇ ವರ್ಷದ ಅಂಕಪಟ್ಟಿ ನೀಡಿದ್ದರು. ಕೊನೆ ವರ್ಷದ ಅಂಕಪಟ್ಟಿ ಕೇಳಿದಾಗ, ಮತ್ತಷ್ಟು ಹಣ ಕೇಳಿದ್ದರು. ಅನುಮಾನಗೊಂಡ ಯುವಕ, ಅಂಕಪಟ್ಟಿ ಬಗ್ಗೆ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿತ್ತು. ಬಳಿಕವೇ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು’ ಎಂದು ಹೇಳಿದರು.

ಮೂರು ಕಡೆ ದಾಳಿ, ಪರಿಶೀಲನೆ: ‘ಮಹಾಲಕ್ಷ್ಮಿ ಲೇಔಟ್, ಮಾರತ್ತಹಳ್ಳಿ ಹಾಗೂ ಕೊಡಿಗೇಹಳ್ಳಿಯಲ್ಲಿರುವ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಕಚೇರಿಗಳ ಮೇಲೆ ಸಿಸಿಬಿಯ ಮೂರು ಪ್ರತ್ಯೇಕ ತಂಡಗಳು ದಾಳಿ ಮಾಡಿದ್ದವು’ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.

‘ನಕಲಿ ಅಂಕಪಟ್ಟಿಗಳನ್ನು ಆರೋಪಿಗಳು ಕಚೇರಿಯಲ್ಲೇ ತಯಾರಿಸುತ್ತಿದ್ದರು. ಇದಕ್ಕಾಗಿ ವಿಶ್ವವಿದ್ಯಾಲಯಗಳ ಮುದ್ರೆಗಳನ್ನು ಬಳಸುತ್ತಿದ್ದರು. ಎಸ್ಸೆಸ್ಸೆಲ್ಸಿ, ಪಿಯುಸಿ, ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಬಿಎ, ಎಂಜಿನಿಯರಿಂಗ್, ಎಂಬಿಎ ಕೋರ್ಸ್‌ಗಳ ನಕಲಿ ಅಂಕಪಟ್ಟಿಗಳನ್ನು ₹ 30 ಸಾವಿರದಿಂದ ₹ 1 ಲಕ್ಷಕ್ಕೆ ಮಾರುತ್ತಿದ್ದರು. ₹10 ಲಕ್ಷದಿಂದ ₹ 20 ಲಕ್ಷ ಪಡೆದು ವಿವಿಧ ವಿಶ್ವವಿದ್ಯಾಲಯಗಳ ಪಿಎಚ್‌ಡಿ ಪದವಿ ಪ್ರಮಾಣ ಪತ್ರಗಳನ್ನೂ‌ ಆರೋಪಿಗಳು ಮಾರಾಟ ಮಾಡುತ್ತಿದ್ದರು’ ಎಂದು ವಿವರಿಸಿದರು.

‘ಬಿಲಾಸಪುರದ ಡಾ. ಸಿ.ವಿ. ರಾಮನ್ ವಿಶ್ವವಿದ್ಯಾಲಯ, ಆಂಧ್ರಪ್ರದೇಶದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಒಪನ್ ಸ್ಕೂಲಿಂಗ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಶಿಲ್ಲಾಂಗ್ ವಿಲಿಯಂ ಕ್ಯಾರಿಯಾ ವಿಶ್ವವಿದ್ಯಾಲಯ, ಗುಜರಾತ್ ಕಲೊರಕ್ಸ್ ಶಿಕ್ಷಕರ ವಿಶ್ವವಿದ್ಯಾಲಯ, ಪಶ್ಚಿಮ ಬಂಗಾಳದ ಸ್ವಾಮಿ ವಿವೇಕಾನಂದ ಗ್ಲೋಬಲ್ ವಿಶ್ವವಿದ್ಯಾಲಯ, ಸಿಕ್ಕಿಂ ಇಐಐಎಲ್‌ಎಂ ವಿಶ್ವವಿದ್ಯಾಲಯ, ಹರಿಯಾಣ ವಿ.ಎಸ್. ಪ್ರಸನ್ನ ಭಾರತಿ ವಿಶ್ವವಿದ್ಯಾಲಯ ಹಾಗೂ ಹಿಮಾಚಲ ಪ್ರದೇಶ ಐಇಸಿ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳು ಕಚೇರಿಯಲ್ಲಿ ಸಿಕ್ಕಿವೆ’ ಎಂದು ತಿಳಿಸಿದರು.

‘ಕಂಪನಿಗಳಲ್ಲಿ ಕೆಲಸ’

‘ವೆಂಕಟೇಶ್ವರ ಇನ್‌ಸ್ಟಿಟ್ಯೂಟ್‌ನಿಂದ ನಕಲಿ ಅಂಕಪಟ್ಟಿಗಳನ್ನು ಖರೀದಿಸಿದ್ದ ಕೆಲವರು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಇದೆ. ಅವರೆಲ್ಲರನ್ನೂ ಪತ್ತೆ ಮಾಡಲು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜಾಲದ ಪ್ರಮುಖ ಆರೋಪಿ ಶ್ರೀನಿವಾಸ್ ರೆಡ್ಡಿ ಎಂಬಾತ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಸ್ಥಾಪಿಸಿದ್ದ. ಸದ್ಯ ಈತ ತಲೆಮರೆಸಿಕೊಂಡಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT