ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೋಟಗಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆ ಕೊರತೆ’

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ರೈತರ ದಿನ ಆಚರಣೆ
Last Updated 23 ಡಿಸೆಂಬರ್ 2020, 20:11 IST
ಅಕ್ಷರ ಗಾತ್ರ

ಯಲಹಂಕ: ‘ರೈತರು ಬೆಳೆದ ತೋಟಗಾರಿಕಾ ಉತ್ಪನ್ನಗಳಿಗೆ ಕೋವಿಡ್‌ ಬಿಕ್ಕಟ್ಟಿನಿಂದ ಮಾರುಕಟ್ಟೆ ಕೊರತೆ ಉಂಟಾಗಿದೆ. ಅಲ್ಲದೆ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸಂಭವಿಸಿದ ನೆರೆಯಿಂದ ರೈತರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಕೃಷಿ ವಿದ್ಯಾರ್ಥಿಗಳು, ವಿಜ್ಞಾನಿಗಳು ಹಾಗೂ ತಂತ್ರಜ್ಞರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿ, ಸಮಸ್ಯೆಗಳನ್ನು ಪರಿಹರಿಸಲು ಕಾರ್ಯೋನ್ಮುಖರಾಗಬೇಕಾಗಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಹೇಳಿದರು.

ಕೃಷಿ ವಿಶ್ವವಿದ್ಯಾಲಯ, ಬೇಸಾಯಶಾಸ್ತ್ರ ವಿಭಾಗ ಹಾಗೂ ಕೌಶಲ ಅಭಿವೃದ್ಧಿ ಕೇಂದ್ರದ ಸಹಭಾಗಿತ್ವದಲ್ಲಿ ಜಿಕೆವಿಕೆಯಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಸುಗ್ಗಿ ಕಾಲದಲ್ಲಿ ಭಾರೀಮಳೆ ಸುರಿದ ಪರಿಣಾಮ, ಕಟಾವು ಮಾಡಿದ್ದ ರಾಗಿಯು ಮೊಳಕೆಯೊಡೆದು ಶೇ.60ರಷ್ಟು ನಷ್ಟ ಉಂಟಾಗಿದೆ’ ಎಂದರು.

‘2050ರ ವೇಳೆಗೆ ಯುದ್ಧ ನಡೆದರೆ, ಅದು ನೀರಿಗಾಗಿ. ಈಗಾಗಲೇ ಅಕ್ಕಪಕ್ಕದ ರಾಜ್ಯಗಳಲ್ಲಿ ನೀರಿಗಾಗಿ ಸ್ಪರ್ಧೆ ಏರ್ಪಟ್ಟಿದ್ದು, ನೀರನ್ನು ಸಂರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ತಿಳಿಸಿದರು.

ಜಾನಪದ ಕವಿ ಗೊಲ್ಲಹಳ್ಳಿ ಶಿವಪ್ರಸಾದ್, ‘ಇಂದಿನ ಯುವಪೀಳಿಗೆಯು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಮನುಷ್ಯನು ಜೀವಿಸಲು ಅತ್ಯಮೂಲ್ಯವಾಗಿ ಅಗತ್ಯವಿರುವ ನೀರು, ಮಣ್ಣು ಮತ್ತು ಗಾಳಿಯನ್ನು ಸಂರಕ್ಷಿಸಬೇಕು. ಪ್ರಕೃತಿ ಮತ್ತು ಮನುಷ್ಯ ಸಾಮರಸ್ಯ ಸಾಧಿಸದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದರು.

ಟೆಸ್ಟ್‌ ಸೀಡ್ಸ್ ಕಂಪನಿ ವತಿಯಿಂದ ರೈತರಿಗೆ ಬೀಜಗಳ ಕಿಟ್ ನೀಡಲಾಯಿತು. ‘ನೀರು ಮತ್ತು ನಾವು’ ವಿಷಯ ಕುರಿತ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಡಿ.ಎಲ್. ಸಾವಿತ್ರಮ್ಮ, ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ.ವೈ.ಜಿ.ಷಡಕ್ಷರಿ, ಆಡಳಿತಾಧಿಕಾರಿ ಡಾ. ಜಿ. ಗೋಪಿನಾಥ್, ಕೌಶಲ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಡಾ.ಕೆ.ಎಸ್. ನಿರ್ಮಲಾ, ಬೇಸಾಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಚ್.ಎಂ.ಜಯದೇವ, ಕಾರ್ಯಕ್ರಮ ನಿರ್ದೇಶಕ ಡಾ.ಎಂ.ಆರ್. ಆನಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT