ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕಾಯತ್‌ ಮೇಲಿನ ಹಲ್ಲೆ ಪ್ರಕರಣ: ‘ಶ್ರೀ ಶಿವಶಕ್ತಿ’ ಸಂಘದ ಅಧ್ಯಕ್ಷೆ ಬಂಧನ

ಮನೆ ಮೇಲೆ ದಾಳಿ: 7 ಮಚ್ಚು, 2 ತಲ್ವಾರ್ ಜಪ್ತಿ
Last Updated 6 ಜೂನ್ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ (55) ಮೇಲೆ ಹಲ್ಲೆ ಮಾಡಿ, ಮಸಿ ಎರಚಿದ್ದ ಪ್ರಕರಣದ ಸಂಬಂಧ ಮತ್ತೊಬ್ಬ ಆರೋಪಿ ಎಚ್‌.ಆರ್. ಉಮಾದೇವಿ ಅವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹೆಬ್ಬಾಳ ನಿವಾಸಿ ಉಮಾದೇವಿ, ಶ್ರೀ ಶಿವಶಕ್ತಿ ಮಹಿಳಾ ಸಂಘ ಹಾಗೂ ಶ್ರೀ ಶಿವಶಕ್ತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ. ಭಾನುವಾರ ಈಕೆಯನ್ನು ಬಂಧಿಸಲಾಗಿದ್ದು, ಸೋಮವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ 5 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಗಾಂಧಿಭವನ ಸಭಾಭವನದಲ್ಲಿ ಮೇ 30 ರಂದು ಆಯೋಜಿಸಿದ್ದ ರೈತ ಮುಖಂಡರ ಪತ್ರಿಕಾಗೋಷ್ಠಿಯಲ್ಲಿ ರಾಕೇಶ್ ಮೇಲೆ ಹಲ್ಲೆ ಮಾಡಿ, ಕಪ್ಪು ಮಸಿ ಎರಚಿ ‘ಮೋದಿ... ಮೋದಿ...’ ಘೋಷಣೆ ಕೂಗಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ‘ಭಾರತ ರಕ್ಷಣಾ ವೇದಿಕೆ’ ರಾಜ್ಯ ಘಟಕದ ಅಧ್ಯಕ್ಷ ಭರತ್ ಶೆಟ್ಟಿ, ಶಿವಕುಮಾರ್ ಹಾಗೂ ಪ್ರದೀಪ್ ಎಂಬುವರನ್ನು ಬಂಧಿಸಲಾಗಿತ್ತು’ ಎಂದೂ ತಿಳಿಸಿದರು.

‘ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸನ್ನಡತೆ ಆಧಾರದಲ್ಲಿ ಬಿಡುಗಡೆ ಆಗಿದ್ದ ಶಿವಕುಮಾರ್‌ನ ತಂಗಿಯಾಗಿದ್ದ ಉಮಾದೇವಿ ಸಹ ಕೃತ್ಯದಲ್ಲಿ ಭಾಗಿಯಾಗಿದ್ದಳು. ಕೆಲ ಪುರಾವೆಗಳನ್ನು ಸಂಗ್ರಹಿಸಿ, ಈಕೆಯನ್ನು ಬಂಧಿಸಲಾಗಿದೆ. ಕೃತ್ಯ ಎಸಗಲು ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಹೇಳಿದರು.

7 ಮಚ್ಚು, 2 ತಲ್ವಾರ್ ಜಪ್ತಿ: ಹೆಬ್ಬಾಳದಲ್ಲಿರುವ ಉಮಾದೇವಿ ಮನೆ ಮೇಲೆ ಪೊಲೀಸರು ಭಾನುವಾರ ದಾಳಿ ಮಾಡಿದ್ದಾರೆ. ಈ ವೇಳೆ 7 ಮಚ್ಚು ಹಾಗೂ 2 ತಲ್ವಾರ್‌ಗಳು ಪತ್ತೆಯಾಗಿವೆ.

‘ನ್ಯಾಯಾಲಯದ ವಾರೆಂಟ್ ಪಡೆದು ಮನೆಯಲ್ಲಿ ಶೋಧ ನಡೆಸಲಾಯಿತು. ಹಲವೆಡೆ ಮಚ್ಚು ಹಾಗೂ ತಲ್ವಾರ್‌ಗಳನ್ನು ಬಚ್ಚಿಡಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದರೆ, ಆರೋಪಿ ಯಾವುದೇ ಉತ್ತರ ನೀಡುತ್ತಿಲ್ಲ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಶ್ರೀ ಶಿವಶಕ್ತಿ ಸಂಘ ಹಾಗೂ ಟ್ರಸ್ಟ್ ಸ್ಥಾಪಿಸಿದ್ದ ಆರೋಪಿ ಉಮಾದೇವಿ, ಮಹಿಳೆಯರನ್ನು ಸಂಘಟಿಸಿ ಕಾರ್ಯಕ್ರಮ ಮಾಡುತ್ತಿದ್ದರು. ಇದರ ಜೊತೆಯಲ್ಲೇ ಕೆಲ ಅಪರಾಧ ಕೃತ್ಯಗಳಲ್ಲೂ ಉಮಾದೇವಿ ಭಾಗಿಯಾಗಿರುವ ಮಾಹಿತಿ ಇದೆ’ ಹೇಳಿವೆ.

‘ಕೃತ್ಯ ಎಸಗಲು ಕುಮ್ಮಕ್ಕು’
‘ರಾಕೇಶ್ ಟಿಕಾಯತ್ ಹಾಗೂ ಇತರರ ಮೇಲೆ ಹಲ್ಲೆ ಮಾಡಿ, ಮಸಿ ಎರಚಲು ಕೆಲವರು ಕುಮ್ಮಕ್ಕು ನೀಡಿರುವ ಮಾಹಿತಿ ಇದೆ. ಅವರು ಯಾರು ಎಂಬುದನ್ನು ಪತ್ತೆ ಮಾಡಲು ಆರೋಪಿಗಳ ವಿಚಾರಣೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT