ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಲ್ಪ ಮತಗಳ ಅಂತರದ ಸೋಲು ತಡೆಯಲು ಹೊಂದಾಣಿಕೆ: ದೇವೇಗೌಡ

Last Updated 13 ಮಾರ್ಚ್ 2018, 6:40 IST
ಅಕ್ಷರ ಗಾತ್ರ

ಬೆಳಗಾವಿ: ಅತ್ಯಲ್ಪ ಮತಗಳ ಅಂತರದಿಂದ ಸೋಲುವುದನ್ನು ತಡೆಗಟ್ಟಲು ಬಿಎಸ್ಪಿ, ಎನ್‌ಸಿಪಿ ಹಾಗೂ ಎಡಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 500, 1,000 ಮತಗಳ ಅಂತರದಿಂದ ಪಕ್ಷದ ಹಲವು ಅಭ್ಯರ್ಥಿಗಳು ಸೋತಿದ್ದರು. ಇಂಥದನ್ನು ಸೋಲನ್ನು ತಡೆಗಟ್ಟಲು ಹಾಗೂ ಕಾಂಗ್ರೆಸ್‌, ಬಿಜೆಪಿ ಸೋಲಿಸುವ ಉದ್ದೇಶದಿಂದ ಈ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸೋಮವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬಿಎಸ್ಪಿಗೆ ಕೆಲವು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದು, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಜೊತೆ ಮಾತುಕತೆ ನಡೆದಿದೆ. ತೃಣಮೂಲ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹಾಗೂ ಸಿಪಿಎಂ, ಸಿಪಿಐ ಜೊತೆಯೂ ಚರ್ಚೆ ನಡೆದಿದೆ ಎಂದರು.

‘ಓವೈಸಿಗೆ ಜೊತೆ ಹೊಂದಾಣಿಕೆ: ‘ಸಂಸದ ಅಸಾವುದ್ದೀನ್‌ ಓವೈಸಿ ಯಾವತ್ತೂ ಹಿಂದೂಗಳನ್ನು ವಿರೋಧಿಸಿಲ್ಲ. ಮುಸ್ಲಿಮರಿಗೆ ನ್ಯಾಯ ದೊರೆಯಬೇಕು ಎನ್ನುವುದಷ್ಟೇ ಅವರ ಕಳಕಳಿಯಾಗಿದೆ. ಓವೈಸಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ’ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಲೆಕ್ಕಕ್ಕಿಲ್ಲ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ ದೇವೇಗೌಡ, ‘ನಾನು ಮಾಜಿ ಪ್ರಧಾನಿ. ಅವರ ಮಟ್ಟಕ್ಕೆ ಇಳಿದು ಮಾತನಾಡಲಾರೆ. ಅವರೇನು ಎಲ್ಲ 224 ಸ್ಥಾನಗಳನ್ನು ಗೆಲ್ಲುವರೇ?’ ಎಂದು ತಿರುಗೇಟು ನೀಡಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ನಾವು ಭಾಗಿಯಾಗುವುದಿಲ್ಲ. ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT