ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವರ್ಷಗಳಲ್ಲಿ ರೈತರಿಂದ ₹ 25 ಕೋಟಿ ದಂಡ ವಸೂಲಿ

‘ರೈತ ಸಂತೆ’ ಉದ್ಘಾಟಿಸಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್
Last Updated 1 ಮಾರ್ಚ್ 2021, 5:25 IST
ಅಕ್ಷರ ಗಾತ್ರ

ಕೆಂಗೇರಿ: ‘ಕಾಯ್ದೆಗಳ ಹೆಸರಿನಲ್ಲಿ ಕಳೆದ 3 ವರ್ಷಗಳಲ್ಲಿ ರೈತರಿಂದ ಸುಮಾರು ₹ 25 ಕೋಟಿ ದಂಡ ವಸೂಲಿ ಮಾಡಲಾಗಿದೆ. ಇಂತಹ ದಬ್ಬಾಳಿಕೆಯ ಕಡಿವಾಣಕ್ಕೆ ನೂತನ ಕೃಷಿ ಕಾಯ್ದೆ ಜಾರಿಗೊಳಿಸಲಾಗುತ್ತಿದೆ’ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಕೆಂಗೇರಿ ಉಪನಗರದ ಗಣೇಶ ಆಟದ ಮೈದಾನದಲ್ಲಿ ಕೆಂಗೇರಿ- ಉಪನಗರ ರೋಟರಿ ಸಂಸ್ಥೆಯ ರಜತ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ‘ರೈತ ಸಂತೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಹೊಸ ಕೃಷಿ ಕಾಯ್ದೆಗಳಿಂದ ರೈತರ ಅಭಿವೃದ್ಧಿಯಾಗಲಿದೆ. ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುತ್ತಿರುವಂತೆ ಈ ಇದರಿಂದ ರೈತರಿಗೆ ಯಾವುದೇ ರೀತಿಯಲ್ಲೂ ಮಾರಕವಾಗುವುದಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲು ಹಾಗೂ ರೈತ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ದೊರಕಿಸಲು ನೂತನ ಕೃಷಿ ಕಾಯ್ದೆ ರೂಪಿಸಲಾಗಿದೆ’ ಎಂದರು.

‘ಆತ್ಮ ನಿರ್ಭರ ಯೋಜನೆಯಡಿ ಮಂಡ್ಯದ ಬೆಲ್ಲ, ಬ್ಯಾಡಗಿ ಮೆಣಸಿನಕಾಯಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಇದರಿಂದ ರೈತರ ಆದಾಯ ದುಪ್ಪಟ್ಟಾಗಲಿದೆ. ರೈತ ಪರ ಕಾರ್ಯ ನಿರ್ವಹಿಸುವ ಯಾವುದೇ ಸಂಘ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಇದೇ ವೇಳೆ ರೈತರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ‘ವರ್ತ್ ಮೈ ವ್ಯಾಲ್ಯೂ’ ಮೊಬೈಲ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದರು.

ಐಐಎಚ್‍ಆರ್ ಪ್ರಧಾನ ವಿಜ್ಞಾನಿ ಡಾ.ಬಿ.ನಾರಾಯಣಸ್ವಾಮಿ, ‘ಮಧ್ಯವರ್ತಿಗಳ ಹಾವಳಿಯಿಂದಾಗಿ ಸರ್ಕಾರದ ರೈತ ಪರ ಕಾಯ್ದೆಗಳು ದಿಕ್ಕು ತಪ್ಪಿದೆ. ದಳ್ಳಾಳಿಗಳ ನಿಯಂತ್ರಣಕ್ಕೆಂದೇ ರೂಪಿಸಲಾಗಿರುವ ರೈತ ಸಂತೆಗಳೂ ಮಧ್ಯವರ್ತಿಗಳಿಂದ ಮುಕ್ತವಾಗಿಲ್ಲ. ದಳ್ಳಾಳಿಗಳೇ ರೈತಸಂತೆಯ ಎಲ್ಲಾ ಉತ್ಪನ್ನಗಳನ್ನು ಕೊಂಡು, ನಂತರ ತಮಗಿಷ್ಟ ಬಂದ ಬೆಲೆಗೆ ಮಾರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಡ್ಯ, ಮದ್ದೂರು, ರಾಮನಗರ, ಚಾಮರಾಜನಗರ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಬಂದಿದ್ದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದರು. ಇದೇ ವೇಳೆ ರಕ್ತದಾನ, ದಂತ ಚಿಕಿತ್ಸಾ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು.

ರೋಟರಿ ಕೆಂಗೇರಿ ಉಪನಗರ ಅಧ್ಯಕ್ಷ ರೋ.ಕಿರಣ್ ಕುಮಾರ್.ಕೆ.ಎನ್., ರೈತ ಸಂತೆ ಸಂಯೋಜಕ ರೋ. ಎಸ್.ಎನ್.ರಮೇಶ್, ರೋ. ಜಿಲ್ಲಾ ಸಹ ಕಾರ್ಯದರ್ಶಿ ರಮೇಶ್ ದೇವಾಡಿಗ, ರ. ಆಂಜನಪ್ಪ, ಬಿ.ಕೃಷ್ಣಪ್ಪ, ಅನುಪಮಾ ಪಂಚಾಕ್ಷರಿ, ಜಿ.ವಿ.ಸುರೇಶ್, ಅನಿಲ್ ಚಳಗೇರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT