ಭಾನುವಾರ, ಮಾರ್ಚ್ 7, 2021
32 °C
ರೈತ, ಕಾರ್ಮಿಕ, ದಲಿತರ, ಮಹಿಳೆಯರ ಒಗ್ಗಟ್ಟಿನ ಹೋರಾಟಕ್ಕೆ ಸಾಕ್ಷಿಯಾದ ರಾಜಧಾನಿ

ಕೃಷಿ ತಿದ್ದುಪಡಿ ಕಾಯ್ದೆ ರದ್ದಾಗಲಿ: ರೈತರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಎಲ್ಲೆಡೆ ರಾಷ್ಟ್ರಧ್ವಜಗಳು  ಹಾರಾಡಿದರೆ, ಬೀದಿ ಬೀದಿಗಳಲ್ಲಿ ನಡೆದ 'ಜನ ಗಣರಾಜ್ಯೋತ್ಸವ'ದಲ್ಲಿ ತ್ರಿವರ್ಣಧ್ವಜಗಳೊಂದಿಗೆ ಕೆಂಪು–ನೀಲಿ ಬಾವುಟಗಳು ಹಾಗೂ ಹಸಿರು ಶಾಲುಗಳು ರಾರಾಜಿಸಿದವು.

ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಅನ್ನದಾತರು ತಮ್ಮ ಸ್ವಾಭಿಮಾನದ ಸಂಕೇತದಂತೆ ಹಸಿರು ಶಾಲು ಬೀಸುತ್ತಾ ಸಾಗುತ್ತಿದ್ದರೆ, ದಲಿತ ಹೋರಾಟಗಾರರು ನೀಲಿ ಬಾವುಟಗಳೊಂದಿಗೆ, ಕಾರ್ಮಿಕರು ಕೆಂಬಾವುಟಗಳನ್ನು ಹಿಡಿದು ಅವರ ಬೆಂಬಲಕ್ಕೆ ನಿಂತರು. ಮಹಿಳೆಯರ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಕೂಡ ಹೋರಾಟದಲ್ಲಿ ಕೈ ಜೋಡಿಸಿದವು.

ಬಿಡದಿ ಕೈಗಾರಿಕಾ ಪ್ರದೇಶ, ತುಮಕೂರು ರಸ್ತೆ, ದೇವನಹಳ್ಳಿ, ಹೊಸಕೋಟೆ ಜಂಕ್ಷನ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿ ಮುಂಜಾನೆಯೇ ರೈತರು ಸೇರಿದ್ದರು. ಸ್ಥಳದಲ್ಲೇ ಧ್ವಜಾರೋಹಣ ನೆರವೇರಿಸಿ ನಗರದ ಕೇಂದ್ರಭಾಗದತ್ತ ಹೆಜ್ಜೆ ಹಾಕಿದರು. ಸುಮಾರು 100ರಿಂದ 125 ಟ್ರ್ಯಾಕ್ಟರ್‌ಗಳಿಗೆ ಮಾತ್ರ ನಗರದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗಿತ್ತು.

ತುಮಕೂರು ಮುಖ್ಯರಸ್ತೆಯಲ್ಲಿ 50 ಟ್ರಾಕ್ಟರ್‌ಗಳು, 500 ವಾಹನಗಳು ಮತ್ತು ಸುಮಾರು 5000 ಜನರಿಗೆ, ಮೈಸೂರು ರಸ್ತೆಯಲ್ಲಿ ಸುಮಾರು 50 ಟ್ರಾಕ್ಟರ್‌ಗಳು, 500 ವಾಹನಗಳು ಮತ್ತು ಸುಮಾರು 3000 ಜನರಿಗೆ, ದೇವನಹಳ್ಳಿ ಮಾರ್ಗದಲ್ಲಿ ಸುಮಾರು 250 ವಾಹನಗಳೊಂದಿಗೆ 1500 ಜನರಿಗೆ ಹಾಗೂ ಹೊಸಕೋಟೆ ಮಾರ್ಗದಲ್ಲಿ ಸುಮಾರು 200 ವಾಹನಗಳು  ಮತ್ತು 1000 ಜನರ ಮೆರವಣಿಗೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಸ್ವಾತಂತ್ರ್ಯ ಉದ್ಯಾನದಲ್ಲಿ ಸುಮಾರು 10 ಸಾವಿರ ಜನ ಸೇರಿ ಪ್ರತಿಭಟನೆ ನಡೆಸಿದರು.

ಖಾಕಿ ಕೋಟೆ: ಟ್ರ್ಯಾಕ್ಟರ್‌ಗಳ ಪೆರೇಡ್ ಜೊತೆಗೆ ರೈತರೂ ಅಮಿತೋತ್ಸಾಹದಿಂದ ಹೆಜ್ಜೆ ಹಾಕಿದರು. ಆದರೆ, ಹೆಚ್ಚು ಜನ ಏಕಕಾಲಕ್ಕೆ ಒಂದೆಡೆ ಸೇರದಂತೆ ಎಚ್ಚರ ವಹಿಸಿದ ಪೊಲೀಸರು, ನಿಗದಿತ ಮಾರ್ಗಗಳಲ್ಲಿ ಮತ್ತು ಸ್ಥಳದಲ್ಲಿ ಮಾತ್ರ ಪ್ರತಿಭಟನೆ, ಧರಣಿ ನಡೆಸಲು ಅವಕಾಶ ನೀಡಿದರು. ರಾಜಧಾನಿ ಪ್ರವೇಶಿಸುವ ದ್ವಾರಗಳಲ್ಲಿ  ಹೆಜ್ಜೆ-ಹೆಜ್ಜೆಗೂ ‘ಖಾಕಿ ಕೋಟೆ’ ನಿರ್ಮಾಣವಾಗಿತ್ತು. ಆದರೂ, ರೈಲು ನಿಲ್ದಾಣ, ಮೈಸೂರು ಬ್ಯಾಂಕ್ ವೃತ್ತ, ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾಯಿಸಿದ ರೈತರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳಮುಖಿಯರಿಂದ ಊಟ: ರಾಜ್ಯದ ನಾನಾ ಭಾಗಗಳಿಂದ ಬಂದ ರೈತರಿಗೆ ಸ್ಥಳೀಯ ರೈತ, ಕಾರ್ಮಿಕ ಸಂಘಟನೆಗಳು ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸ್ವಂತ ವಾಹನಗಳಲ್ಲಿ ಬಂದಿದ್ದ ಹಲವರು ಊಟದ ವ್ಯವಸ್ಥೆ ತಾವೇ ಮಾಡಿಕೊಂಡಿದ್ದರು. ಮಂಗಳಮುಖಿಯರು ರೈತರಿಗೆ ಉಪಾಹಾರದ ವ್ಯವಸ್ಥೆ ಮಾಡುವ ಮೂಲಕ ವಿಭಿನ್ನವಾಗಿ ಹೋರಾಟಕ್ಕೆ ಕೈ ಜೋಡಿಸಿದರು.

‘ನಮ್ಮೂರ ಭೂಮಿ‌ ನಮಗಿರಲಿ; ಅನ್ಯರಿಗಲ್ಲ’ ಆಂದೋಲನ, ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ದಲಿತ ಸಂಘರ್ಷ ಸಮಿತಿ, ಎಸ್‌ಡಿಪಿಐ, ಎಐಡಿಎಎಸ್‌ಒದಂತಹ ಸಂಘಟನೆಗಳಲ್ಲದೆ, ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಆರ್‌ಟಿಒಗಳಿಂದ ಬೆದರಿಕೆ’

ನಗರದೊಳಗೆ ಎಲ್ಲ ಟ್ರ್ಯಾಕ್ಟರ್‌ಗಳ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಸೀಮಿತ ಸಂಖ್ಯೆಯ ಟ್ರ್ಯಾಕ್ಟರ್‌ಗಳು ಮಾತ್ರ ಪ್ರವೇಶಿಸಬಹುದು ಎಂದು ಸೋಮವಾರ ಮಧ್ಯರಾತ್ರಿ ಬಳಿಕ ಅನುಮತಿ ನೀಡಲಾಗಿತ್ತು. ನಗರಕ್ಕೆ ಟ್ರ್ಯಾಕ್ಟರ್‌ನಲ್ಲಿ ಬರಲು ಉದ್ದೇಶಿಸಿದ್ದ ರೈತರು ಇದರಿಂದ ತೊಂದರೆ ಅನುಭವಿಸಬೇಕಾಯಿತು.

‘ರ‍್ಯಾಲಿಯಲ್ಲಿ ಬಳಸುವ ಪ್ರತಿ ವಾಹನವೂ ಮೋಟಾರು ವಾಹನ ಕಾಯ್ದೆ ನಿಗದಿ ಪಡಿಸಿದ ಎಲ್ಲ ದಾಖಲೆಗಳನ್ನು ಹೊಂದಿರಬೇಕು. ಇಲ್ಲದಿದ್ದರೆ ವಾಹನ ವಶಕ್ಕೆ ಪಡೆಯಲಾಗುವುದು ಎಂದು ಕೆಲವು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬೆದರಿಕೆ ಒಡ್ಡಿದ್ದರು. ಹೀಗಾಗಿ, ಬಹುತೇಕರು ಹಿಂದಿರುಗಿದರು. ಆದರೂ, 120ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ನಗರದೊಳಗೆ ಪೆರೇಡ್ ನಡೆಸಿದವು’ ಎಂದು ರೈತ ಮುಖಂಡರೊಬ್ಬರು ಹೇಳಿದರು.

‘ಪ್ರಾರಂಭದಲ್ಲಿ ಕೊಡುತ್ತಾರೆ. ಆಮೇಲೆ...’ ‘ರೈತ ತಾನು ಬೆಳೆದ ಉತ್ಪನ್ನವನ್ನು ಯಾರಿಗಾದರೂ ನೇರವಾಗಿ ಮಾರಾಟ ಮಾಡಲು ಹೊಸ
ಕಾಯ್ದೆ ಅವಕಾಶ ನೀಡುವುದರಿಂದ ಕೃಷಿ ಉತ್ಪನ್ನಗಳಿಗೆ ಹೆಚ್ಚು ದರ ಸಿಗುತ್ತದೆ ಎಂದು ಸರ್ಕಾರ ಹೇಳುತ್ತದೆ. ಯಾವುದೇ ಕಾರ್ಪೊರೇಟ್ ಕಂಪನಿ ಅಥವಾ ಖರೀದಿದಾರರು ಪ್ರಾರಂಭದಲ್ಲಿ ಉತ್ತಮ ದರ ನೀಡಬಹುದು. ಏಕಸ್ವಾಮ್ಯ ಸಿಕ್ಕಮೇಲೆ ಕಡಿಮೆ ದರ ನೀಡಲು ಆರಂಭಿಸುತ್ತಾರೆ. ಜಿಯೊ ಮೊಬೈಲ್‌ ದರ ಸಮರವೇ ಇದಕ್ಕೆ ಉದಾಹರಣೆ’ ಎಂದು ನಗರದ ಕಿಸಾನ್ ಏಕತಾ ಮೋರ್ಚಾದ ಮಹೇಂದ್ರಜಿತ್‌ ಸಿಂಗ್‌ ‘ಪ್ರಜಾವಾಣಿ’ಗೆ ಹೇಳಿದರು.

‘ಹತ್ತಾರು ವರ್ಷಗಳಿಂದ ನಾವು ಬೆಂಗಳೂರಿನಲ್ಲಿಯೇ ನೆಲೆಸಿದ್ದೇವೆ. ವ್ಯಾಪಾರದ ಜೊತೆಗೆ ಕೃಷಿಯನ್ನೂ ಮಾಡುತ್ತೇವೆ. ಟೊಮೆಟೊ, ಬೆಂಡೆಕಾಯಿ, ಮೆಣಸಿನಕಾಯಿ ಎಲ್ಲ ಬೆಳೆದಿದ್ದೇವೆ. ಆದರೆ, ಯಾವುದಕ್ಕೂ ಸರಿಯಾದ ಬೆಲೆ ಸಿಗದೆ ತೊಂದರೆಯಾಗಿದೆ. ಹೊಸ ಕಾಯ್ದೆಗಳು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತವೆ’ ಎಂದರು.

‘ನಮ್ಮ ಸಹೋದರರು, ತಂದೆ–ತಾಯಿಗಳು ದೆಹಲಿಯ ಕೊರೆಯುವ ಚಳಿಯಲ್ಲಿ ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ನಮ್ಮ ಸಮುದಾಯದ ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ಮುಂದುವರಿಸುತ್ತೇವೆ’ ಎಂದು ಕನ್ನಡದಲ್ಲಿಯೇ ಹೇಳಿದರು.

ಹೋರಾಟಗಾರರ ಮಾತು

ಕೇಂದ್ರ ಸರ್ಕಾರಕ್ಕೆ ಫೆ.1ರವರೆಗೆ ಗಡುವು ನೀಡುತ್ತಿದ್ದೇವೆ. ಅಷ್ಟರಲ್ಲಿ ಈ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸಂಸತ್‌ಗೆ ಮುತ್ತಿಗೆ ಹಾಕಲಾಗುವುದು

ಚಾಮರಸ ಮಾಲಿಪಾಟೀಲ, ರೈತ ಮುಖಂಡ

***

ಶಾಂತಿಯುತ ಹೋರಾಟವನ್ನು ಲಘುವಾಗಿ ಪರಿಗಣಿಸಿದರೆ ಮುಂದಿನ ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು

ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

***

ದೇಶದ ಸಂಪತ್ತನ್ನು ಕಾರ್ಪೊರೇಟ್‌ ಕಂಪನಿಗಳಿಗೆ ದಾನ ಮಾಡಲು ಸರ್ಕಾರ ಮುಂದಾಗಿದ್ದು, ರೈತರನ್ನು ದಾಸ್ಯದಲ್ಲೇ ಉಳಿಸಬೇಕೆಂದಿದೆ. ಕೃಷಿ ವಲಯವನ್ನೇ ನಾಶ ಮಾಡಲು ಹೊರಟಿದೆ.

ಬಡಗಲಪುರ ನಾಗೇಂದ್ರ, ರೈತ ಮುಖಂಡ

***

ಜನವಿರೋಧಿ ಸರ್ಕಾರದ ವಿರುದ್ಧದ ಈ ಹೋರಾಟಕ್ಕೆ ಎಲ್ಲ ಸಂಘಟನೆಗಳು ಕೈಜೋಡಿಸಿರುವುದು ಸ್ವಾಗತಾರ್ಹ. ರೈತರ ಹೋರಾಟ ತಡೆಯಲು ಸರ್ಕಾರ ಯತ್ನಿಸಿದ್ದು ಬೇಸರದ ಸಂಗತಿ

ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

***

ಇದು ಎರಡನೆಯ ಸ್ವಾತಂತ್ರ್ಯ ಸಂಗ್ರಾಮ. ರೈತರ ಹೋರಾಟದ ಮುಂದೆ ಸರ್ಕಾರದ ಬೇಳೆ ಏನೂ ಬೇಯುವುದಿಲ್ಲ. ರೈತರ ಬೇಡಿಕೆ ನ್ಯಾಯಯುತವಾಗಿದೆ.

ಎಸ್.ಆರ್. ಹಿರೇಮಠ, ಸಾಮಾಜಿಕ ಕಾರ್ಯಕರ್ತ

***

ದೆಹಲಿ ಘಟನೆಗೆ ವ್ಯಾಪಕ ಖಂಡನೆ 

ಬೆಂಗಳೂರು: ದೆಹಲಿಯಲ್ಲಿ ರೈತರು ಹಮ್ಮಿಕೊಂಡಿದ್ದ ಟ್ಯಾಕ್ಟರ್‌ ರ‍್ಯಾಲಿ ಸಂದರ್ಭದಲ್ಲಿ ನಡೆದ ದಾಂಧಲೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹಲವು ಸಚಿವರುಗಳು ಕೂಡಾ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

‘ಪ್ರತಿಭಟನೆ ಮಾಡುವ, ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡುವ ಹಕ್ಕು ಎಲ್ಲರಿಗೂ ಇದೆ. ಆದರೆ, ನಿಮ್ಮೆಲ್ಲ ಬೇಡಿಕೆ ಈಡೇರಿಸುತ್ತೇವೆ ಎಂದರೂ ದಿಲ್ಲಿಯಲ್ಲಿ ಪ್ರತಿಭಟನೆ ಹೆಸರಿನಲ್ಲಿ ನಡೆಸುತ್ತಿರುವ ಹಿಂಸಾಚಾರ, ಪೊಲೀಸರ ಮೇಲೆ ದಾಳಿ ಮಾಡಿದ್ದು ಸರಿಯಲ್ಲ. ಕುತಂತ್ರಿಗಳ ಮಾತು ಕೇಳದಿರಿ’ ಎಂದು ರೈತರಿಗೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಕಿವಿಮಾತು ಹೇಳಿದ್ದಾರೆ.

‘ಕೃಷಿ ಕಾಯ್ದೆ ಕುರಿತು ಕಾಂಗ್ರೆಸ್ ಸೇರಿ ಹಲವು ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಲೇ ಇವೆ. ಈಗಲೂ ದಿಲ್ಲಿಯ ಹಿಂಸಾಚಾರಕ್ಕೆ ಪ್ರತಿಪಕ್ಷಗಳ ಹುನ್ನಾರವೇ ಕಾರಣವಾಗಿದೆ. ಅನ್ನ ನೀಡುವ ಕೈಗಳು ಇಂತಹ ಷಡ್ಯಂತ್ರಕ್ಕೆ ಮರುಳಾಗಿ ಕತ್ತಿ ಹಿಡಿಯಬಾರದು. ಕಾಂಗ್ರೆಸ್ ನಿಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುತ್ತಿದೆ ಎಂಬುದನ್ನೂ ಅರಿಯಿರಿ’ ಎಂದೂ ರೈತರಿಗೆ ಹೇಳಿದ್ದಾರೆ.

ರೈತರ ಕೆಲಸವಲ್ಲ: ‘ದೆಹಲಿಯಲ್ಲಿ ನಡೆದ ಗಲಭೆ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮುಖವಾಡ ಕಳಚಿದೆ. ಅನ್ನ ನೀಡುವ ರೈತ ಭೂತಾಯಿಯಷ್ಟೇ ಸಹನಾಮಯಿ. ನೇಗಿಲ ಹಿಡಿಯುವ ಯೋಗಿ ಎಂದೂ ಅಸ್ತ್ರ ಹಿಡಿಯುವುದಿಲ್ಲ. ತುತ್ತು ನೀಡುವ ಅನ್ನದಾತ ಎಂದೂ ನೆತ್ತರು ಹರಿಸುವುದಿಲ್ಲ. ದೇಶದ ಬೆನ್ನೆಲುಬಾಗಿರುವ ಕೃಷಿಕ ಎಂದೂ ದೇಶ ತಲೆತಗ್ಗಿಸುವ ಕೆಲಸ ಮಾಡುವುದಿಲ್ಲ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಟ್ವೀಟ್‌ ಮಾಡಿದ್ದಾರೆ.

‘ರೈತ ಬಾಂಧವರನ್ನು ದಿಕ್ಕು ತಪ್ಪಿಸುತ್ತಿರುವ ಕಾಣದ ಕೈಗಳು ಇನ್ನಾದರೂ ತಮ್ಮ ಪಟ್ಟಭದ್ರ ಹಿತಾಸಕ್ತಿಗಳು, ರಾಜಕೀಯ ದುರುದ್ದೇಶಗಳನ್ನು ಬದಿಗಿಟ್ಟು ರೈತರ ಹಿತ ಕಾಯುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಇಲ್ಲವಾದರೆ ಜನ ಎಂದಿಗೂ ಅವರನ್ನು
ಕ್ಷಮಿಸುವುದಿಲ್ಲ’ ಎಂದಿದ್ದಾರೆ.

ದುರುದ್ದೇಶ ಎದ್ದು ಕಾಣುತ್ತಿದೆ: ‘ದೆಹಲಿ ಪ್ರತಿಭಟನೆ ರೈತರದಲ್ಲ, ಕೇವಲ ಆ ಕಾಯ್ದೆಗಳ ವಿರುದ್ಧವಲ್ಲ ಎಂದು ಇಂದು ಬಯಲಾಯಿತು. ಉದ್ದೇಶಕ್ಕಿಂತ ದುರುದ್ದೇಶ ಎದ್ದು ಕಾಣುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು